ಏಕದಿನ ಕ್ರಿಕೆಟ್ನಲ್ಲಿ ಸಚಿನ್ ತೆಂಡುಲ್ಕರ್ ದಾಖಲೆ ಮುರಿದ ಜಿಂಬಾಬ್ವೆಯ ಬ್ರೆಂಡನ್ ಟೇಲರ್!
ಹರಾರೆ: ಜಿಂಬಾಬ್ವೆಯ ಹಿರಿಯ ಬ್ಯಾಟರ್ ಬ್ರೆಂಡನ್ ಟೇಲರ್ ದಿಗ್ಗಜ ಕ್ರಿಕೆಟಿಗ ಭಾರತದ ಸಚಿನ್ ತೆಂಡುಲ್ಕರ್ (Sachin Tendulkar) ಏಕದಿನ ಕ್ರಿಕೆಟ್ನಲ್ಲಿ ಅತ್ಯಂತ ಸುದೀರ್ಘ ಅವಧಿಯ ಕಾಲ ಆಡಿದ್ದ ದಾಖಲೆಯನ್ನು ಮುರಿದಿದ್ದಾರೆ. ಬ್ರೆಂಡನ್ ಮಂಗಳವಾರ ಹರಾರೆಯಲ್ಲಿ ಆಸ್ಟ್ರೆಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಡುವ ಮೂಲಕ ಈ ದಾಖಲೆ ಬರೆದಿದ್ದಾರೆ.
40 ವರ್ಷದ ಬ್ರೆಂಡನ್ ಟೇಲರ್ ಇದೀಗ ಏಕದಿನ ಕ್ರಿಕೆಟ್ನಲ್ಲಿ 20 ವರ್ಷ ಮತ್ತು 4 ತಿಂಗಳ ಕಾಲ ಆಡಿದಂತಾಗಿದೆ. ಈ ಮೂಲಕ ಸಚಿನ್ ತೆಂಡುಲ್ಕರ್ 22 ವರ್ಷ ಮತ್ತು 3 ತಿಂಗಳ ಕಾಲ ಆಡಿದ್ದ ದಾಖಲೆಯನ್ನು ಮುರಿದಿದ್ದಾರೆ. ಆದರೆ ಸಚಿನ್ ತೆಂಡುಲ್ಕರ್ ಈ ಅವಧಿಯಲ್ಲಿ 463 ಪಂದ್ಯಗಳಲ್ಲಿ ಆಡಿ 18,426 ರನ್ ಗಳಿಸಿದ್ದರೆ, ಬ್ರೆಂಡನ್ ಟೇಲರ್ 207 ಪಂದ್ಯಗಳಲ್ಲಿ ಆಡಿದ್ದಾರೆ.
ಬ್ರೆಂಡನ್ ಟೇಲರ್ 2004ರಲ್ಲಿ ಜಿಂಬಾಬ್ವೆ ಪರ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಅವರು ಏಕದಿನ ಕ್ರಿಕೆಟ್ನಲ್ಲಿ ಜಿಂಬಾಬ್ವೆಯ 2ನೇ ಗರಿಷ್ಠ (6,712) ರನ್ ಸ್ಕೋರರ್ ಆಗಿದ್ದು, ಆಂಡಿ ಫ್ಲವರ್ (6,786) ದಾಖಲೆಯಿಂದ ಕೇವಲ 74 ರನ್ ಹಿಂದಿದ್ದಾರೆ.
ಬ್ರೆಂಡನ್ ಟೇಲರ್ ಈ ಹಿಂದೆ 2021ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ್ದರು. ಬಳಿಕ 2022ರಲ್ಲಿ ಭ್ರಷ್ಟಾಚಾರ ನಿಗ್ರಹ ಮತ್ತು ಉದ್ದೀಪನ ನಿಗ್ರಹ ನಿಯಮಾವಳಿಗಳ ಉಲ್ಲಂನೆಗಾಗಿ ಐಸಿಸಿ ಮೂರೂವರೆ ವರ್ಷ ನಿಷೇಧ ಹೇರಿತ್ತು. ಈ ನಿಷೇಧ ಕೊನೆಗೊಂಡ ಬಳಿಕ 2025ರಲ್ಲಿ ಅವರು ಜಿಂಬಾಬ್ವೆ ತಂಡಕ್ಕೆ ಮರಳಿದ್ದರು ಮತ್ತು 2027ರಲ್ಲಿ ತವರಿನಲ್ಲೇ ನಡೆಯಲಿರುವ ಏಕದಿನ ವಿಶ್ವಕಪ್ನಲ್ಲಿ ಆಡುವ ಹಂಬಲ ಹೊಂದಿದ್ದಾರೆ.