ಆರ್​ಸಿಬಿ 
ಕ್ರಿಕೆಟ್

ಐಪಿಎಲ್​ 19ನೇ ಆವೃತ್ತಿಗೂ ಮುನ್ನ ಆರ್​ಸಿಬಿ ಫ್ರಾಂಚೈಸಿ ಖರೀದಿಸಲು ಮುಂದಾದ ಬಾಲಿವುಡ್​ ಸ್ಟಾರ್​ ನಟ? | RCB

ಪ್ರಮುಖ ಮುಖ್ಯಾಂಶಗಳು

  • ಐಪಿಎಲ್​ 19ನೇ ಆವೃತ್ತಿ ಆರಂಭಕ್ಕೆ ದಿನಗಣನೆ ಆರಂಭ
  • ಈ ಮಧ್ಯೆ, ಆರ್​ಸಿಬಿ ಖರೀದಿಸಲು ಮುಂದಾದ ಬಾಲಿವುಡ್​ ಸ್ಟಾರ್​ ನಟ
  • ಶೇ.2ರಷ್ಟು ಷೇರು ಪಡೆಯಲು ಮಾತುಕತೆ ನಡೆಸಿದ್ದಾಗಿ ವರದಿ
RCB: ಐಪಿಎಲ್​ ಇತಿಹಾಸದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಏಕೈಕ ಫ್ರಾಂಚೈಸಿ ಎಂದರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು. ಕಳೆದ 18 ವರ್ಷಗಳಲ್ಲಿ ಒಂದು ಬಾರಿಯೂ ಕಪ್​ ಗೆಲ್ಲದ ತಂಡ 18ನೇ ಆವೃತ್ತಿಯಲ್ಲಿ ಟ್ರೋಫಿ ಎತ್ತಿಹಿಡಿದಿದ್ದು ಇತಿಹಾಸ. ಇದು ಆರ್​ಸಿಬಿ ಲಾಯಲ್​ ಫ್ಯಾನ್ಸ್​ಗಳ ಭರ್ಜರಿ ಸಂಭ್ರಮಕ್ಕೆ ಕಾರಣವಾಯಿತು. ಆದರೆ, ಅದೇ ಸಂತೋಷ, ದುಃಖಕ್ಕೆ ತಿರುಗಿದ್ದು ದುರಂತ.

ಕಾಲ್ತುಳಿತ ಘಟನೆ ಬಳಿಕ ಎಲ್ಲವೂ ಕಹಿ...

ಆರ್‌ಸಿಬಿ 18 ವರ್ಷಗಳ ಬಳಿಕ ತಮ್ಮ ಚೊಚ್ಚಲ ಐಪಿಎಲ್ ಕಪ್​ ಗೆದ್ದ ಬೆನ್ನಲ್ಲೇ ಸಂಭ್ರಮಾಚರಣೆಗೆಂದು ಬೆಂಗಳೂರಿಗೆ ಆಗಮಿಸಿತು. ಈ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಯುವ ಅಭಿಮಾನಿಗಳು ದುರಂತ ಅಂತ್ಯ ಕಂಡರು. ಇನ್ನೂ ಅನೇಕರು ಗಂಭೀರವಾಗಿ ಗಾಯಗೊಂಡರು. ಈ ಘಟನೆ ಬಳಿಕ ಫ್ರಾಂಚೈಸಿಗೆ ಹಲವಾರು ಸಮಸ್ಯೆಗಳು ಎದುರಾಯಿತು. 

ಆರೋಪ, ಟೀಕೆ, ಪ್ರಕರಣ

ಆರ್​ಸಿಬಿ ಫ್ರಾಂಚೈಸಿ ವಿರುದ್ಧ ಸಾಲು ಸಾಲು ಆರೋಪಗಳ ಜತೆಗೆ ಕೇಸ್​ ಕೂಡ ದಾಖಲಾಯ್ತು. ಸಂಭ್ರಮದ ಹಾದಿಯಿಂದ ಸೂತಕದ ಛಾಯೆ ಮೂಡಿತು. ಇದು ಫ್ರಾಂಚೈಸಿಯ ಕಳೆಯನ್ನೇ ಕಸಿದುಕೊಂಡಿತು. ಕಳೆದ ವರ್ಷ, ಆರ್‌ಸಿಬಿ ಅನ್ನು ಮಾರಾಟ ಮಾಡಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಐಪಿಎಲ್‌ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ತಮ್ಮ ಸಾಮಾಜಿಕ ಜಾಲತಾಣದ ಅಧಿಕೃತ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡರು. ಅಂದಿನಿಂದ ಆರ್​ಸಿಬಿ ಮಾಲೀಕತ್ವ ಯಾರ ಪಾಲಾಗಲಿದೆ ಎಂಬ ಪ್ರಶ್ನೆ ಕಾಡಲಾರಂಭಿಸಿದೆ. ಇದಕ್ಕೆ ಹರಿದಾಡುತ್ತಿರುವ ಹೊಸ ಸುದ್ದಿಯೊಂದು ಪುಷ್ಠಿ ನೀಡಿದೆ. 
ವರದಿಗಳ ಪ್ರಕಾರ, ಬಾಲಿವುಡ್​ ನಟ ರಣಬೀರ್ ಕಪೂರ್​ ಆರ್‌ಸಿಬಿಯಲ್ಲಿ ಸುಮಾರು 300ರಿಂದ 350 ಕೋಟಿ ರೂ.ಗೆ ಶೇ,2ರಷ್ಟು ಷೇರು ಖರೀದಿಸಲು ತೆರೆಮರೆಯಲ್ಲಿ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಆದಾಗ್ಯೂ, ಈ ಕುರಿತಾಗಿ ನಟನಿಂದಲೇ ಆಗಲಿ ಅಥವಾ ಐಪಿಎಲ್ ಫ್ರಾಂಚೈಸಿಯಿಂದಲೇ ಆಗಲಿ ಇಲ್ಲಿಯವರೆಗೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ ಎಂಬುದು ಗಮನಾರ್ಹ,(ಏಜೆನ್ಸೀಸ್).