ಚೊಚ್ಚಲ ಆವೃತಿಯ ಮಹಿಳಾ ಅಂಧರ ಟಿ20 ವಿಶ್ವಕಪ್​ ಗೆದ್ದ ಭಾರತ 
ಕ್ರಿಕೆಟ್

ಚೊಚ್ಚಲ ಆವೃತಿಯ ಮಹಿಳಾ ಅಂಧರ ಟಿ20 ವಿಶ್ವಕಪ್​ ಗೆದ್ದ ಭಾರತ: ಅಭಿನಂದನೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ! Blind Women T20 Cricket World Cup

ಪ್ರಮುಖ ಮುಖ್ಯಾಂಶಗಳು

  • ಶ್ರೀಲಂಕಾದಲ್ಲಿ ನಡೆದ ಚೊಚ್ಚಲ ಆವೃತ್ತಿಯ ಅಂಧ ಮಹಿಳಾ ಟಿ20 ವಿಶ್ವಕಪ್
  • ಫೈನಲ್​ ಪಂದ್ಯದಲ್ಲಿ ನೇಪಾಳ ವಿರುದ್ಧ ಭರ್ಜರಿ ಜಯ ದಾಖಲಿಸಿದ ಟೀಮ್​ ಇಂಡಿಯಾ
  • ಚೊಚ್ಚಲ ಅಂಧ ಮಹಿಳಾ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡ ಭಾರತ
ನವದೆಹಲಿ: ಶ್ರೀಲಂಕಾದಲ್ಲಿ ನಡೆದ ಚೊಚ್ಚಲ ಆವೃತ್ತಿಯ ಅಂಧ ಮಹಿಳಾ ಟಿ20 ವಿಶ್ವಕಪ್ ( Blind Women's T20 Cricket World Cup ) ಟೂರ್ನಿಯಲ್ಲಿ ಭರ್ಜರಿ ಜಯ ದಾಖಲಿಸುವ ಮೂಲಕ ಕ್ರಿಕೆಟ್​ ಇತಿಹಾಸದಲ್ಲೇ ಭಾರತೀಯ ಅಂಧ ಮಹಿಳಾ ತಂಡ ಹೊಸ ಮೈಲುಗಲ್ಲು ಸೃಷ್ಟಿಸಿದೆ.
ಲಂಕಾ ರಾಜಧಾನಿ ಕೊಲಂಬೊದ ಪಿ. ಸಾರಾ ಓವಲ್‌ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ನೇಪಾಳ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಭಾರತ, ಚೊಚ್ಚಲ ಅಂಧ ಮಹಿಳಾ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡಿತು.
ಮೊದಲು ಬೌಲಿಂಗ್ ಮಾಡಿದ ಭಾರತ, ನೇಪಾಳವನ್ನು ಐದು ವಿಕೆಟ್ ನಷ್ಟಕ್ಕೆ 114 ರನ್‌ಗಳಿಗೆ ಸೀಮಿತಗೊಳಿಸಿತು. ನಂತರ ಭಾರತ ಕೇವಲ 12 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 117 ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು. ತಂಡದ ಪರ ಫೂಲಾ ಸರೀನ್ ಅಜೇಯ 44 ರನ್‌ಗಳೊಂದಿಗೆ ಟಾಪ್ ಸ್ಕೋರರ್ ಎನಿಸಿಕೊಂಡರು.
ಟೀಮ್​ ಇಂಡಿಯಾದ ಪ್ರಾಬಲ್ಯ ಎಷ್ಟರಮಟ್ಟಿಗೆ ಇತ್ತು ಅಂದರೆ, ಎದುರಾಳಿಗಳು ತಮ್ಮ ಇನ್ನಿಂಗ್ಸ್‌ನಲ್ಲಿ ಕೇವಲ ಒಂದು ಬೌಂಡರಿ ಮಾತ್ರ ಗಳಿಸಿದರು. ಅಂದಹಾಗೆ, ಶನಿವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಭಾರತ ಆಸ್ಟ್ರೇಲಿಯಾವನ್ನು ಸೋಲಿಸಿದರೆ, ನೇಪಾಳ ಪಾಕಿಸ್ತಾನವನ್ನು ಸೋಲಿಸಿ, ಫೈನಲ್​ಗೆ ಲಗ್ಗೆ ಇಟ್ಟವು. ಇಂದು ನಡೆದ ಫೈನಲ್​ನಲ್ಲಿ ನೇಪಾಳವನ್ನು ಮಣಿಸಿ ಭಾರತ ಚೊಚ್ಚಲ ಅಂಧ ಮಹಿಳಾ ಟಿ20 ವಿಶ್ವಕಪ್ ಎತ್ತಿಹಿಡಿಯಿತು.
ಸಿಎಂ ಸಿದ್ದರಾಮಯ್ಯ ಅಭಿನಂದನೆ
ಇಂದು ಶ್ರೀಲಂಕಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನೇಪಾಳವನ್ನು ಬಗ್ಗುಬಡಿದು ಚೊಚ್ಚಲ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡ ಭಾರತದ ಅಂಧ ಮಹಿಳೆಯರ ತಂಡಕ್ಕೆ ಅಭಿನಂದನೆಗಳು. ದೈಹಿಕ ಸವಾಲನ್ನು ಮೆಟ್ಟಿನಿಂತು ಭಾರತದ ಅಂಧ ಮಹಿಳಾ ತಂಡ ಮಾಡಿರುವ ಸಾಧನೆ ಕೋಟ್ಯಂತರ ದೇಶವಾಸಿಗಳಿಗೆ ಹೆಮ್ಮೆ ಮತ್ತು ಸ್ಪೂರ್ತಿಯಾಗಿದೆ. ಸಮಸ್ತ ಭಾರತೀಯರ ಪಾಲಿಗೆ ಇದೊಂದು ಐತಿಹಾಸಿಕ ದಿನ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.