ಟಿ20 ಪಂದ್ಯದಲ್ಲಿ 8 ವಿಕೆಟ್ ಕಬಳಿಸಿದ ಭೂತಾನ್ ಸ್ಪಿನ್ನರ್!
ನವದೆಹಲಿ: ಭೂತಾನ್ (Bhutan) ತಂಡದ ಎಡಗೈ ಸ್ಪಿನ್ನರ್ ಸೋನಮ್ ಯೆಶೆ (Sonam Yeshey) ಪುರುಷರ ಟಿ20 (T20 cricket) ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವೊಂದರಲ್ಲಿ 8 ವಿಕೆಟ್ ಕಬಳಿಸಿದ ವಿಶ್ವದ ಮೊದಲ ಬೌಲರ್ ಎನಿಸಿದ್ದಾರೆ. ಭೂತಾನ್ನ ಗೆಲೆು ಮೈಂಡ್ಫುಲ್ನೆಸ್ ಸಿಟಿ ಗ್ರೌಂಡ್ನಲ್ಲಿ ಇತ್ತೀಚೆಗೆ ನಡೆದ ಮಯನ್ಮಾರ್ ವಿರುದ್ಧದ ಟಿ20 ಸರಣಿಯ 3ನೇ ಪಂದ್ಯದಲ್ಲಿ ಸೋನಮ್ ಈ ದಾಖಲೆ ಬರೆದಿದ್ದಾರೆ.
22 ವರ್ಷದ ಅವರು 4 ಓವರ್ಗಳ ದಾಳಿಯಲ್ಲಿ ಕೇವಲ 7 ರನ್ ನೀಡಿ 8 ವಿಕೆಟ್ ಕಬಳಿಸಿದರು. ಇದರೊಂದಿಗೆ, ಭೂತಾನ್ನ 128 ರನ್ ಸವಾಲಿಗೆ ಪ್ರತಿಯಾಗಿ ಮಯನ್ಮಾರ್ ಕೇವಲ 45 ರನ್ಗಳಿಗೆ ಸರ್ವಪತನ ಕಂಡಿತು. ಅಂತಾರಾಷ್ಟ್ರೀಯ ಅಥವಾ ಬೇರಾವುದೇ ಟಿ20 ಪಂದ್ಯದಲ್ಲಿ ಇದುವರೆಗೆ ಯಾವುದೇ ಬೌಲರ್ 8 ವಿಕೆಟ್ ಕಬಳಿಸಿರಲಿಲ್ಲ. ಮಲೇಷ್ಯಾದ ವೇಗಿ ಸ್ಯಾಜ್ರುಲ್ ಇದ್ರಸ್ 2023ರಲ್ಲಿ ಚೀನಾ ವಿರುದ್ಧ 8 ರನ್ಗಳಿಗೆ 7 ವಿಕೆಟ್ ಕಬಳಿಸಿದ್ದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಇದುವರೆಗಿನ ಶ್ರೇಷ್ಠ ಬೌಲಿಂಗ್ ನಿರ್ವಹಣೆಯಾಗಿತ್ತು.
ಹಾಲಿ ವರ್ಷ ಬಹರೇನ್ನ ಅಲಿ ದಾವೂದ್ ಭೂತಾನ್ ವಿರುದ್ಧ 19 ರನ್ಗಳಿಗೆ 7 ವಿಕೆಟ್ ಕಬಳಿಸಿದ್ದರು. ನೆದರ್ಲೆಂಡ್ನ ಕಾಲಿನ್ ಅಕೆರ್ಮನ್ (18ಕ್ಕೆ 7) ಮತ್ತು ಬಾಂಗ್ಲಾದೇಶದ ಟಸ್ಕಿನ್ ಅಹ್ಮದ್ (19ಕ್ಕೆ 7) ಟಿ20ಯಲ್ಲಿ 7 ವಿಕೆಟ್ ಗೊಂಚಲು ಪಡೆದಿದ್ದ ಇನ್ನಿಬ್ಬರು ಬೌಲರ್ಗಳು.