ಸಲ್ಮಾನ್​ ಅಲಿ ಆಘಾ ಅಸಾಂಪ್ರದಾಯಿಕ ರೀತಿಯಲ್ಲಿ ರನ್​ಔಟ್​ 
ಕ್ರಿಕೆಟ್

ರನ್-ಔಟ್ ಹೆಸರಿನಲ್ಲಿ ನಂಬಿಕೆ ದ್ರೋಹ: ಪಾಕಿಸ್ತಾನಿ ಆಟಗಾರನ ಪರ ಬ್ಯಾಟ್​ ಬೀಸಿದ ಮೊಹಮ್ಮದ್​ ಕೈಫ್​! Mohammad Kaif

ಪ್ರಮುಖ ಮುಖ್ಯಾಂಶಗಳು

  • ಬಾಂಗ್ಲಾದೇಶ-ಪಾಕಿಸ್ತಾನದ ನಡುವಿನ ಏಕದಿನ ಪಂದ್ಯ
  • ಸಲ್ಮಾನ್​ ಅಲಿ ಆಘಾ ಅಸಾಂಪ್ರದಾಯಿಕ ರೀತಿಯಲ್ಲಿ ರನ್​ಔಟ್​
  • ಈ ರನ್​ಔಟ್​​ನ್ನು ಖಂಡಿಸಿದ ಮೊಹಮ್ಮದ್​ ಕೈಫ್​
ಢಾಕಾ: ಶುಕ್ರವಾರ (ಮಾ.13) ಢಾಕಾದ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನದ ಬ್ಯಾಟ್ಸ್‌ಮನ್ ಸಲ್ಮಾನ್ ಅಲಿ ಅಘಾ ಅತ್ಯಂತ ಅಪರೂಪದ ಮತ್ತು ಅಸಾಂಪ್ರದಾಯಿಕ ರೀತಿಯಲ್ಲಿ ಔಟ್ ಆಗಿದ್ದಾರೆ.
ಪಾಕಿಸ್ತಾನದ ಇನ್ನಿಂಗ್ಸ್‌ನ 39 ನೇ ಓವರ್‌ನಲ್ಲಿ ಈ ಘಟನೆ ಸಂಭವಿಸಿದ್ದು, ಆಟದ ನಿಯಮಗಳು ಬೌಲಿಂಗ್ ತಂಡದ ಪರವಾಗಿ ನಿರ್ಧಾರ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಅವಕಾಶ ಮಾಡಿಕೊಟ್ಟಿದ್ದರೂ, ಇಡೀ ಘಟನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಖಂಡಿಸಲಾಗುತ್ತಿದೆ.
ಬಾಂಗ್ಲಾದೇಶ ನಾಯಕ ಮೆಹಿದಿ ಹಸನ್ ಮಿರಾಜ್ ಈ ಕ್ರೀಡಾ ಮನೋಭಾವವಿಲ್ಲದ ಕೃತ್ಯಕ್ಕಾಗಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಈ ಕುರಿತಾಗಿ ವ್ಯಾಪಕ ಟೀಕೆ ನಡೆಯುತ್ತಿದ್ದು, ಭಾರತದ ಮಾಜಿ ಬ್ಯಾಟ್ಸ್‌ಮನ್ ಮೊಹಮ್ಮದ್ ಕೈಫ್ (Mohammad Kaif) ಕೂಡ, ಸಾಮಾಜಿಕ ಮಾಧ್ಯಮದಲ್ಲಿ ಮೆಹಿದಿ ಹಸನ್ ಅವರನ್ನು ಟೀಕಿಸಿದ್ದಾರೆ.

ಆಗಿದ್ದೇನು?

ಘಟನೆ ನಡೆದಾಗ ಆಘಾ ಮತ್ತು ಮೊಹಮ್ಮದ್ ರಿಜ್ವಾನ್ ಕ್ರೀಸ್‌ನಲ್ಲಿದ್ದರು. ಬಾಂಗ್ಲಾದೇಶ ನಾಯಕ ಮೆಹಿದಿ ಹಸನ್ ಮಿರಾಜ್ ಎಸೆದ ಓವರ್‌ನ ನಾಲ್ಕನೇ ಎಸೆತವನ್ನು, ರಿಜ್ವಾನ್ ಪುಶ್ ಮಾಡಿದ್ದಾರೆ. ಚೆಂಡು ನಂತರ ನಾನ್-ಸ್ಟ್ರೈಕರ್‌ನ ತುದಿಯಲ್ಲಿ ತನ್ನ ಕ್ರೀಸ್ ಹೊರಗೆ ನಿಂತಿದ್ದ ಆಘಾ ಕಡೆಗೆ ಉರುಳಿದೆ.
ಚೆಂಡು ಅವರ ಪ್ಯಾಡ್‌ಗಳಿಗೆ ತಾಗುತ್ತಿದ್ದಂತೆ, ಆಘಾ ಕೆಳಗೆ ಬಾಗಿ ಅದನ್ನು ಎತ್ತಿಕೊಂಡು ಹಿಂತಿರುಗಿಸಿದ್ದಾರೆ. ಆದರೆ, ಮಿರಾಜ್ ಬೇಗನೆ ಚೆಂಡನ್ನು ಸಂಗ್ರಹಿಸಿ ಸ್ಟಂಪ್‌ಗಳತ್ತ ಎಸೆದು ಆಫಾ ಅವರನ್ನು ರನ್​ಔಟ್​ ಮಾಡಿದ್ದಾರೆ.
ಮಿರಾಜ್ ಅವರ ಈ ವರ್ತನೆಯಿಂದ ಆಫಾ ನಿರಾಶೆಗೊಂಡಿರುವುದು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಪೆವಿಲಿಯನ್‌ಗೆ ಹಿಂತಿರುಗುತ್ತಿದ್ದಂತೆ ಆಘಾ ಅಸಮಾಧಾನವನ್ನು ವ್ಯಕ್ತಪಡಿಸಿದ ಕುರಿತು ವಿಡಿಯೋಗಳು ಕೂಡ ಹರಿದುಬಂದವು.

ಇದು ಕ್ರೀಡಾ ಮನೋಭಾವಕ್ಕೆ ಧಕ್ಕೆ!

ಭಾರತ ಮತ್ತು ಪಾಕಿಸ್ತಾನ ಈ ಎರಡು ದೇಶಗಳು ಕೇವಲ ರಾಜಕಾರಣದಿಂದ ಮಾತ್ರವಲ್ಲ, ಕ್ರಿಕೆಟ್​ನಲ್ಲಿಯೂ ಬದ್ಧ ವೈರಿಗಳಾಗಿದ್ದಾರೆ. ಆದರೆ ಇಲ್ಲಿ ಪಾಕಿಸ್ತಾನಕ್ಕೆ ಆದ ನಂಬಿಕೆ ದ್ರೋಹವನ್ನು ಸಹಿಸದ ಭಾರತೀಯ ಆಟಗಾರ, ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಈ ಘಟನೆ ಕುರಿತು ಮೊಹಮ್ಮದ್​ ಕೈಫ್​, ಬಾಂಗ್ಲಾದೇಶದ ನಾಯಕ ಮಾಡಿದ ಈ ರನ್​ ಔಟ್​ನ್ನು ಕ್ರಿಕೆಟ್​ನ ನಿಯಮಾವಳಿ ಒಪ್ಪಬಹುದು ಆದರೆ, ಆದರೆ ಒಬ್ಬ ಕ್ರಿಕೆಟಿಗ ಖಂಡಿತ ಒಪ್ಪಲಾರ, ವಿಕೆಟ್ ಪಡೆಯುವ ಯಾವುದೇ ಹತಾಶೆಗಾಗಿ ಕ್ರೀಡಾ ಮನೋಧರ್ಮವನ್ನು ಮರೆಯುವುದು ಸರಿಯಲ್ಲ ಎಂದು ಕೈಫ್​ ಬರೆದುಕೊಂಡಿದ್ದಾರೆ. ಈ ಘಟನೆ ವಿಶ್ವಕಪ್​ ಫೈನಲ್​ನಲ್ಲಿ ಸಂಭವಿಸಿದ್ದರೂ ನಾನು ಇದನ್ನು ಖಂಡಿತವಾಗಿ ಖಂಡಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ನ್ಯಾಯಯುತ ಆಟವಿಲ್ಲದ ಕ್ರೀಡೆ ಕ್ರೀಡೆಯಲ್ಲ: ಕೈಫ್​

ಈ ಘಟನೆ ಬಗ್ಗೆ ಮಾತನಾಡುತ್ತಾ ಕೈಫ್​, ಬಾಂಗ್ಲಾದೇಶದ ಯಾವುದೋ ಒಬ್ಬ ಹೊಸ ಹುಡಗ ಮಾಡಿದ್ದಾನೆ ಎಂದರೆ, ಪಾಪ ಆಟಕ್ಕೆ ಹೊಸಬ, ಹುಮ್ಮಸ್ಸಿನಲ್ಲಿ ಮಾಡಿದ್ದಾನೆ ಎನ್ನಬಹುದಿತ್ತು, ಆದರೆ ತಂಡದ ನಾಯಕನೇ ಈ ರೀತಿ ಮಾಡಿದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಇದು ತಂಡದ ಮನೋಬಲವನ್ನು ವಿಚಲಿತಗೊಳಿಸುವ ಸಾಧ್ಯತೆಯಿರುವ ಅಂಶವಾಗಿದ್ದು, ನ್ಯಾಯಯುತ ಆಟವಿಲ್ಲದ ಕ್ರೀಡೆ ಕ್ರೀಡೆಯಲ್ಲ ಎಂದು ಮೊಹಮ್ಮದ್​ ಕೈಫ್​ ತಮ್ಮ ವಿಚಾರವನ್ನು ಮಂಡಿಸಿದ್ದಾರೆ.

ಜನ ಏನಂತಾರೆ?

ಈ ಘಟನೆ ನಡೆದ ಕ್ಷಣದಿಂದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ರನ್​ಔಟ್​ ನ್ಯಾಯಯುತವೇ? ಇಲ್ಲವೇ? ಎಂಬ ವಿಷಯದ ಕುರಿತು ಸುಧೀರ್ಘ ಚರ್ಚೆ ನಡೆಯುತ್ತಿದೆ. ಕೆಲವರು ಇದು ಸಲ್ಮಾನ್ ಅಲಿ ಅಘಾಗೆ ಆಗಿರುವ ಅನ್ಯಾಯ ಎಂದರೆ, ಇನ್ನು ಕೆಲವರು, ಇವರು ಚೆಂಡನ್ನು ನೀಡುವ ಮೊದಲು ತಾನು ಕ್ರೀಸ್​ನಲ್ಲಿ ಇದ್ದೆನೋ, ಇಲ್ಲವೋ ಎಂದು ಪರಿಕ್ಷಿಸಿಕೊಳ್ಳಬೇಕಿತ್ತು ಎಂದು ಹೇಳುತ್ತಿದ್ದಾರೆ,(ಏಜನ್ಸೀಸ್​).