ಜಿಸಿಎಲ್ ಟ್ರೋಫಿ ಆನಾವರಣ ಸಮಾರಂಭದಲ್ಲಿ ಐದು ಬಾರಿ ವಿಶ್ವಚಾಂಪಿಯನ್ ವಿಶ್ವನಾಥನ್ ಆನಂದ್, ಲೀಗ್ ಕಮಿಷನರ್ ಗೌರವ್ ರಕ್ಷಿತ್, ಅಧ್ಯಕ್ಷ ಪೀಯೂಷ್ ದುಬೆ, ಚೆಸ್ ತಾರೆಯರಾದ ಕಾರ್ಲ್‌ಸನ್, ದಿವ್ಯಾ ಇತರರಿದ್ದರು.  
ಕ್ರಿಕೆಟ್

ಗ್ಲೋಬಲ್ ಚೆಸ್ ಲೀಗ್ 4ನೇ ಆವೃತ್ತಿಗೆ ಬೆಂಗಳೂರು ಆತಿಥ್ಯ: ದಿಗ್ಗಜ ವಿಶ್ವನಾಥನ್ ಆನಂದ್, ವಿಶ್ವ ನಂ.1 ಕಾರ್ಲ್‌ಸನ್ ಭಾಗಿ

ಬೆಂಗಳೂರು: ಐಪಿಎಲ್ ಮಾದರಿಯ ಫ್ರಾಂಚೈಸಿ ಆಧಾರಿತ ಚೆಸ್ ಟೂರ್ನಿಗೆ ಉದ್ಯಾನ ನಗರಿ ಸಜ್ಜಾಗಿದ್ದು, ಗ್ಲೋಬಲ್ ಚೆಸ್ ಲೀಗ್ ನಾಲ್ಕನೇ ಆವೃತ್ತಿಗೆ ಶನಿವಾರ ಚಾಲನೆ ದೊರೆತಿದೆ. ನಗರದ ದಿ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ಸೆ.5 ರಿಂದ 13ರವರೆಗೆ ನಡೆಯಲಿರುವ ರ‌್ಯಾಪಿಡ್ ಚೆಸ್ ಟೂರ್ನಿಯಲ್ಲಿ ಒಟ್ಟ ಆರು ತಂಡಗಳು ಭಾಗವಹಿಸಲಿವೆ. ಉದ್ಘಾಟನಾ ಪಂದ್ಯದಲ್ಲಿ ಪಿಬಿಜಿ ಅಲಾಸ್ಕನ್ ನೈಟ್ಸ್ ಫೈಯರ್ಸ್‌ ಅಮೆರಿಕನ್ ಗ್ಯಾಂಬಿಟ್ಸ್ ತಂಡಗಳು ಎದುರಾಗಲಿವೆ.
ಟೆಕ್ ಮಹೀಂದ್ರ ಹಾಗೂ ವಿಶ್ವ ಚೆಸ್ ಆಡಳಿತ ಮಂಡಳಿ (ಫಿಡೆ) ಜಂಟಿ ಸಹಯೋಗದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ವಿಶ್ವ ನಂ.1 ಮತ್ತು ನಾರ್ವೇಯ ಮ್ಯಾಗ್ನಸ್ ಕಾರ್ಲ್‌ಸನ್, ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್, ಜಾವೋಖಿರ್ ಸಿಂದರೋವ್, ವಿಶ್ವಕಪ್ ಚಾಂಪಿಯನ್ ದಿವ್ಯಾ ದೇಶಮುಖ್, ಅನುಭವಿ ಕೊನೇರು ಹಂಪಿ, ವಿಶ್ವ ನಂ.9 ಅರ್ಜುನ್ ಇರಿಗೈಸಿ, ವಿದಿತ್ ಗುಜರಾತಿ ಸಹಿತ ವಿಶ್ವದ ಹಲವು ತಾರೆಯರು ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ.
ಆಲ್‌ಪೈನ್ ಪೈಪರ್ಸ್‌ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯಲಿದ್ದು, ಮುಂಬೈ ಆವೃತ್ತಿ ತಪ್ಪಿಸಿಕೊಂಡಿದ್ದ ಮ್ಯಾಗ್ನಸ್ ಕಾರ್ಲ್‌ಸನ್ ಪುನರಾಗಮನ ಮಾಡಲಿದ್ದಾರೆ. ಟೂರ್ನಿಯ ಮೊದಲೆರಡು ಆವೃತ್ತಿ ಕ್ರಮವಾಗಿ ದುಬೈ, ಲಂಡನ್‌ನಲ್ಲಿ ಆಯೋಜಿಸಲಾಗಿತ್ತು. ಸೆ.15 ಆರಂಭವಾಗಲಿರು ಚೆಸ್ ಒಲಿಂಪಿಯಾಡ್ ಸಿದ್ಧತೆ ಭಾಗವಾಗಿ ಹಾಲಿ ವಿಶ್ವ ಚಾಂಪಿಯನ್ ಡಿ.ಗುಕೇಶ್, ಆರ್.ಪ್ರಜ್ಞಾನಂದ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಟೂರ್ನಿಯು ಒಟ್ಟು ₹ 8.3 ಕೋಟಿ ಬಹುಮಾನ ಮೊತ್ತ ಒಳಗೊಂಡಿದೆ.
ತಂಡಗಳು: ಪಿಬಿಬಿ ಅಲಾಸ್ಕನ್ ನೈಟ್ಸ್, ಫೈಯರ್ಸ್‌ ಅಮೆರಿಕನ್ ಗ್ಯಾಂಬಿಟ್ಸ್, ತ್ರಿವೇಣಿ ಕಾಂಟಿನೆಂಟಲ್ ಕಿಂಗ್ಸ್, ಗಂಗಾಸ್ ಗ್ರಾಂಡ್ ಮಾಸ್ಟರ್ಸ್‌, ಚೆಕ್ ಮುಂಬಾ ಮಾಸ್ಟರ್ಸ್‌ ಹಾಗೂ ಆಲ್‌ಪೈನ್ ಪೈಪರ್ಸ್‌.
ಟೂರ್ನಿ ಸ್ವರೂಪ
ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ಎಲ್ಲ ಆರು ತಂಡಗಳು ಪರಸ್ಪರ ಎರಡು ಬಾರಿ ಮುಖಾಮುಖಿ ಆಗಲಿವೆ. ಲೀಗ್ ಹಂತದ ಅಗ್ರ ಎರಡು ತಂಡಗಳು ಸೆ.13ರಂದು ಪ್ರಶಸ್ತಿಗಾಗಿ ಸೆಣಸಲಿವೆ. ಪ್ರತಿ ತಂಡದಲ್ಲಿ ಓರ್ವ ಐಕಾನ್, ತಲಾ ಇಬ್ಬರು ಪುರುಷ-ಮಹಿಳಾ ಸೂಪರ್‌ ಸ್ಟಾರ್‌ಗಳು ಹಾಗೂ ಉದಯೋನ್ಮುಖ ಆಟಗಾರ ಸೇರಿ ಒಟ್ಟು ಆರು ಆಟಗಾರರು ಇರಲಿದ್ದಾರೆ. ಪ್ರತಿ ಆಟಗಾರನಿಗೆ 20 ನಿಮಿಷಗಳ ಸಮಯ ನೀಡಲಾಗುತ್ತದೆ. 41ನೇ ನಡೆಯಿಂದ ಪ್ರತಿ ನಡೆಗೆ 2 ಸೆಕೆಂಡ್ ಹೆಚ್ಚುವರಿ ಸಮಯ ಸಿಗಲಿದೆ.
ಆರಂಭ: ಮಧ್ಯಾಹ್ನ 3.30
ನೇರಪ್ರಸಾರ: ಚೆಸ್24 ಹಾಗೂ ಜಿಸಿಎಲ್ ಯೂಟ್ಯೂಬ್ ಚಾನಲ್.