RCBvsSRH: ಐಪಿಎಲ್ 2026ರ ಅತ್ಯಂತ ರೋಚಕ ಜಿದ್ದಾಜಿದ್ದಿನ ಪಂದ್ಯಕ್ಕೆ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣ ಸಾಕ್ಷಿಯಾಗಿದ್ದು, ತವರಿನ ಪ್ರೇಕ್ಷಕರ ಸಮ್ಮುಖದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ 55 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಆದರೆ, ಈ ಭಾರಿ ಸೋಲಿನ ನಡುವೆಯೂ ಆರ್‌ಸಿಬಿ ತಂಡವು ಪ್ಲೇ-ಆಫ್‌ನ ಅತ್ಯಂತ ಅಮೂಲ್ಯವಾದ 'ಟಾಪ್ 1' ಸ್ಥಾನವನ್ನು ಅಧಿಕೃತವಾಗಿ ಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್, ಆರ್‌ಸಿಬಿ ಬೌಲರ್‌ಗಳ ಮೇಲೆ ಸವಾರಿ ಮಾಡಿತು. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಕೇವಲ 22 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 4 ಬೌಂಡರಿಗಳ ನೆರವಿನಿಂದ 56 ರನ್ ಚಚ್ಚಿ ಸ್ಫೋಟಕ ಆರಂಭ ನೀಡಿದರು. ಆ ಬಳಿಕ ಅಬ್ಬರಿಸಿದ ಇಶಾನ್ ಕಿಶನ್ 46 ಎಸೆತಗಳಲ್ಲಿ 79 ರನ್ ಸಿಡಿಸಿ ತಂಡದ ಬೃಹತ್ ಮೊತ್ತಕ್ಕೆ ಭದ್ರ ಬುನಾದಿ ಹಾಕಿದರು. ಕೊನೆಯಲ್ಲಿ ಹೆನ್ರಿಚ್ ಕ್ಲಾಸೆನ್ ಕೇವಲ 24 ಎಸೆತಗಳಲ್ಲಿ 51 ರನ್ ಚಚ್ಚಿ ಇನಿಂಗ್ಸ್‌ಗೆ ಮುಕ್ತಾಯ ಹಾಡಿದರು. ಇವರ ಈ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಎಸ್‌ಆರ್‌ಹೆಚ್ 20 ಓವರ್‌ಗಳಲ್ಲಿ 255/4 ರನ್‌ಗಳ ಬೃಹತ್ ಮೊತ್ತ ಪೇರಿಸಿತು.
256 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ವೆಂಕಟೇಶ್ ಅಯ್ಯರ್ 19 ಎಸೆತಗಳಲ್ಲಿ 44 ರನ್ ಸಿಡಿಸಿ ಸ್ಫೋಟಕ ಆರಂಭ ನೀಡಿದರು. ನಂತರ ನಾಯಕ ರಜತ್ ಪಾಟೀದಾರ್ (39 ಎಸೆತಗಳಲ್ಲಿ 56 ರನ್) ಜವಾಬ್ದಾರಿಯುತ ಅರ್ಧಶತಕ ಸಿಡಿಸಿ ತಂಡವನ್ನು ಮುನ್ನಡೆಸಿದರು. ಅಂತಿಮವಾಗಿ ಬೆಂಗಳೂರು 20 ಓವರ್‌ಗಳಲ್ಲಿ 200/4 ರನ್ ಗಳಿಸಿ 55 ರನ್‌ಗಳಿಂದ ಸೋತರೂ, ಅಗ್ರ 2ರ ಸ್ಥಾನವನ್ನು ತನ್ನದಾಗಿಸಿಕೊಂಡಿತು.
ಸೋತರೂ ಗೆದ್ದ ಆರ್‌ಸಿಬಿ: ಟಾಪ್ 2 ಸ್ಥಾನ ಗ್ಯಾರಂಟಿ!
ಅಂಕಪಟ್ಟಿಯಲ್ಲಿ ಟಾಪ್ 2 ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಆರ್‌ಸಿಬಿ ತಂಡಕ್ಕೆ ಈ ಪಂದ್ಯದಲ್ಲಿ ಕನಿಷ್ಠ 166 ರನ್ ಗಳಿಸಬೇಕಾದ ಅನಿವಾರ್ಯತೆ ಇತ್ತು. ಇಲ್ಲದಿದ್ದರೆ ಹೈದರಾಬಾದ್ 90 ಅಥವಾ ಅದಕ್ಕಿಂತ ಹೆಚ್ಚಿನ ರನ್‌ಗಳ ಅಂತರದಿಂದ ಗೆದ್ದು 2ನೇ ಸ್ಥಾನಕ್ಕೇರುತ್ತಿತ್ತು.
ಕ್ವಾಲಿಫೈಯರ್ 1 ರಲ್ಲಿ ಗುಜರಾತ್ ಟೈಟನ್ಸ್ ಎದುರಾಳಿ!
ಈ ಫಲಿತಾಂಶದೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ ಲೀಗ್ ಹಂತವನ್ನು 3ನೇ ಸ್ಥಾನದೊಂದಿಗೆ ಮುಗಿಸಿ ಎಲಿಮಿನೇಟರ್ ಹಾದಿ ಹಿಡಿದಿದೆ. ಮತ್ತೊಂದೆಡೆ, ಟಾಪ್ 2 ಹಂತಕ್ಕೇರಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕ್ವಾಲಿಫೈಯರ್ 1 ರ ಮಹಾ ಕದನದಲ್ಲಿ ಬಲಿಷ್ಠ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದೆ.