ಇಂದು ಬಿಸಿಸಿಐನಿಂದ ಭಾರತದ ಪಂಚ ಐಸಿಸಿ ಟ್ರೋಫಿ ಚಾಂಪಿಯನ್ಸ್​ಗೆ ಸನ್ಮಾನ 
ಕ್ರಿಕೆಟ್

ಇಂದು ಬಿಸಿಸಿಐನಿಂದ ಭಾರತದ ಪಂಚ ಐಸಿಸಿ ಟ್ರೋಫಿ ಚಾಂಪಿಯನ್ಸ್​ಗೆ ಸನ್ಮಾನ

ನವದೆಹಲಿ: ಬಿಸಿಸಿಐ (BCCI) ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ "ನಮನ್​' (Naman Awards) ಭಾನುವಾರ ನವದೆಹಲಿಯಲ್ಲಿ ನಡೆಯಲಿದೆ. ಇತ್ತೀಚೆಗೆ ಸತತ 2ನೇ ಟಿ20 ವಿಶ್ವಕಪ್​ (T20 World Cup) ಗೆದ್ದ ಸೂರ್ಯಕುಮಾರ್​ ಯಾದವ್​ ನೇತೃತ್ವದ ತಂಡದೊಂದಿಗೆ ಐಸಿಸಿ ಟ್ರೋಫಿ (ICC Trophy) ಗೆದ್ದ ಒಟ್ಟು 5 ಭಾರತ ತಂಡಗಳನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುತ್ತದೆ. ಜತೆಗೆ 2024-25ರ ಸಾಲಿನ ದೇಶೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್​ ಸಾಧಕರನ್ನು ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಐಸಿಸಿಯ ಒಟ್ಟು 5 ಟೂರ್ನಿಗಳಲ್ಲಿ ಹಾಲಿ ಚಾಂಪಿಯನ್​ ಆಗಿರುವ ಭಾರತ ತಂಡಗಳನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುತ್ತದೆ. ಇದರಲ್ಲಿ ರೋಹಿತ್​ ಶರ್ಮ ಸಾರಥ್ಯದ 2025ರ ಚಾಂಪಿಯನ್ಸ್​ ಟ್ರೋಫಿ ವಿಜೇತ ಭಾರತ ಏಕದಿನ ತಂಡ, ಕನ್ನಡತಿ ನಿಕಿ ಪ್ರಸಾದ್​ ನಾಯಕತ್ವದ 2025ರ 19 ವಯೋಮಿತಿ ಮಹಿಳಾ ಟಿ20 ವಿಶ್ವಕಪ್​ ವಿಜೇತ ತಂಡ, ಹರ್ಮಾನ್​ಪ್ರೀತ್​ ಕೌರ್​ ಸಾರಥ್ಯದ 2025ರ ಮಹಿಳೆಯರ ಏಕದಿನ ವಿಶ್ವಕಪ್​ ವಿಜೇತ ತಂಡ, ಆಯುಷ್​ ಮಹಾತ್ರೆ ನೇತೃತ್ವದ 2026ರ 19 ವಯೋಮಿತಿ ಏಕದಿನ ವಿಶ್ವಕಪ್​ ವಿಜೇತ ತಂಡಗಳು ಸೇರಿವೆ. ಈ ಎಲ್ಲ 5 ತಂಡಗಳ ಸದಸ್ಯರನ್ನು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಹ್ವಾನಿಸಲಾಗಿದೆ.

ಭಾರತ ಟೆಸ್ಟ್​-ಏಕದಿನ ತಂಡಗಳ ನಾಯಕ ಶುಭಮಾನ್​ ಗಿಲ್​ 2024-25ರ ಸಾಲಿನ ಅತ್ಯುತ್ತಮ ಅಂತಾರಾಷ್ಟ್ರೀಯ ಆಟಗಾರರಾಗಿ ಪಾಲಿ ಉಮ್ರಿಗರ್​ ಪ್ರಶಸ್ತಿ ಪಡೆಯಲಿದ್ದಾರೆ. ಮಹಿಳಾ ವಿಭಾಗದಲ್ಲಿ ಸ್ಮೃತಿ ಮಂದನಾ ಅತ್ಯುತ್ತಮ ಅಂತಾರಾಷ್ಟ್ರೀಯ ಆಟಗಾರ್ತಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಸ್ಮೃತಿ ತನ್ನ ವೃತ್ತೀಜಿವನದಲ್ಲಿ 5ನೇ ಬಾರಿ ಈ ಪ್ರಶಸ್ತಿಗೆ ಪಾತ್ರರಾಗುತ್ತಿದ್ದಾರೆ. ಸ್ಮೃತಿ 2024-25ರ ಸಾಲಿನಲ್ಲಿ ಏಕದಿನ ಕ್ರಿಕೆಟ್​ನಲ್ಲಿ 1,311 ರನ್​ ಗಳಿಸಿದ ಸಾಧನೆಗಾಗಿಯೂ ಪ್ರಶಸ್ತಿ ಪಡೆಯಲಿದ್ದಾರೆ.
*ರೆಡ್​ ಕಾರ್ಪೆಟ್​: ಸಂಜೆ 6ರಿಂದ.
*ಸಮಾರಂಭ ಆರಂಭ: ರಾತ್ರಿ 7.00
*ನೇರಪ್ರಸಾರ: ಬಿಸಿಸಿಐ.ಟಿವಿ ವೆಬ್​ಸೈಟ್​, ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​
ದ್ರಾವಿಡ್​, ಬಿನ್ನಿಗೆ ಸಿಕೆ ನಾಯ್ಡು ಪ್ರಶಸ್ತಿ
ದಿಗ್ಗಜ ಕ್ರಿಕೆಟಿಗರು ಮತ್ತು ಕನ್ನಡಿಗರಾದ ರಾಹುಲ್​ ದ್ರಾವಿಡ್​ ಮತ್ತು ರೋಜರ್​ ಬಿನ್ನಿ ಜೀವಮಾನ ಸಾಧನೆಗಾಗಿ ಕರ್ನಲ್​ ಸಿಕೆ ನಾಯ್ಡು ಪ್ರಶಸ್ತಿ ಪಡೆಯಲಿದ್ದರೆ, ಮಹಿಳಾ ವಿಭಾಗದಲ್ಲಿ ಭಾರತ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್​ ಬಿಸಿಸಿಐ ಜೀವಮಾನ ಸಾಧನೆ ಪ್ರಶಸ್ತಿ ಪಡೆಯಲಿದ್ದಾರೆ. ಬಿಸಿಸಿಐ ಮಾಜಿ ಅಧ್ಯಕ್ಷ ರೋಜರ್​ ಬಿನ್ನಿ 1983ರ ಏಕದಿನ ವಿಶ್ವಕಪ್​ ತಂಡದ ಆಟಗಾರ ಮತ್ತು ಆ ಟೂರ್ನಿಯ ಗರಿಷ್ಠ ವಿಕೆಟ್​ ಸಾಧಕರೂ ಆಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 24 ಸಾವಿರಕ್ಕೂ ಅಧಿಕ ರನ್​ ಗಳಿಸಿರುವ ದ್ರಾವಿಡ್​, ಭಾರತ ತಂಡದ ನಾಯಕ ಮತ್ತು ಕೋಚ್​ ಆಗಿಯೂ ಯಶಸ್ಸು ಗಳಿಸಿದ್ದಾರೆ. 2024ರ ಟಿ20 ವಿಶ್ವಕಪ್​ ಗೆದ್ದ ಭಾರತ ತಂಡದ ಮುಖ್ಯ ಕೋಚ್​ ಆಗಿದ್ದರು.
ಕರ್ನಾಟಕದ ಮ್ಯಾಕ್ನೀಲ್​, ಜೆ. ಸುಚಿತ್​ಗೂ ಪ್ರಶಸ್ತಿ
ಕರ್ನಾಟಕದ ಬ್ಯಾಟರ್​ ಮ್ಯಾಕ್ನೀಲ್​ ನೋರೋನ್ಹಾ 2024&25ರ ಸಾಲಿನ 23 ವಯೋಮಿತಿಯ ಸಿಕೆ ನಾಯ್ಡು ಟ್ರೋಫಿ ಟೂರ್ನಿಯ 8 ಪಂದ್ಯಗಲ್ಲಿ 3 ಶತಕಗಳ ಸಹಿತ ಸರ್ವಾಧಿಕ 1,037 ರನ್​ ಗಳಿಸಿದ್ದಕ್ಕಾಗಿ ಎಂ.ಎ. ಚಿದಂಬರಂ ಟ್ರೋಫಿ ಸ್ವೀಕರಿಸಲಿದ್ದಾರೆ. ರಾಜ್ಯದಿಂದ ನಾಗಾಲ್ಯಾಂಡ್​ಗೆ ವಲಸೆ ಹೋಗಿರುವ ಸ್ಪಿನ್ನರ್​ ಜೆ. ಸುಚಿತ್​ ರಣಜಿ ಟ್ರೋಫಿ ಪ್ಲೇಟ್​ ಗುಂಪಿನಲ್ಲಿ ಸರ್ವಾಧಿಕ 43 ವಿಕೆಟ್​ ಗಳಿಸಿದ ಸಾಧನೆಗಾಗಿ ಮಾಧವ್​ರಾವ್​ ಸಿಂಧಿಯಾ ಪ್ರಶಸ್ತಿ ಪಡೆಯಲಿದ್ದಾರೆ.
ಶೆಫಾಲಿ, ದೀಪ್ತಿಗೂ ಟ್ರೋಫಿ
ಹರಿಯಾಣದ ಶೆಫಾಲಿ ವರ್ಮ ಸೀನಿಯರ್​ ಮಹಿಳಾ ಏಕದಿನ ಟೂರ್ನಿಯಲ್ಲಿ ಗರಿಷ್ಠ 527 ರನ್​ ಗಳಿಸಿದ ಸಾಧನೆಗಾಗಿ ಜಗಮೋಹನ್​ ದಾಲ್ಮಿಯಾ ಟ್ರೋಫಿ ಪಡೆಯಲಿದ್ದಾರೆ. ಜೂನಿಯರ್​ ವಿಭಾಗದಲ್ಲಿ ಮುಂಬೈನ ಇರಾ ಜಾಧವ್​ (500 ರನ್​) ಈ ಪ್ರಶಸ್ತಿ ಪಡೆಯಲಿದ್ದಾರೆ. ದೀಪ್ತಿ ಶರ್ಮ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ನಲ್ಲಿ ಗರಿಷ್ಠ 37 ವಿಕೆಟ್​ ಗಳಿಸಿದ್ದಕ್ಕಾಗಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಹರ್ಷಿತ್​, ಶ್ರೀಚರಣಿ ಬೆಸ್ಟ್​ ಪದಾರ್ಪಣೆ
ವೇಗಿ ಹರ್ಷಿತ್​ ರಾಣಾ ಮತ್ತು ಶ್ರೀ ಚರಣಿ ಕ್ರಮವಾಗಿ ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನ ಅತ್ಯುತ್ತಮ ಪದಾರ್ಪಣೆ ಪ್ರಶಸ್ತಿ ಪಡೆಯಲಿದ್ದಾರೆ. ಮುಂಬೈ ಕ್ರಿಕೆಟ್​ ಸಂಸ್ಥೆಯು ದೇಶೀಯ ಟೂರ್ನಿಗಳ ಒಟ್ಟಾರೆ ಅತ್ಯುತ್ತಮ ನಿರ್ವಹಣೆಗಾಗಿ ಪ್ರಶಸ್ತಿ ಪಡೆಯಲಿದೆ. ವಿದರ್ಭದ ಉಲ್ಲಾಸ್​ ಗಾಂಧೆ ಅತ್ಯುತ್ತಮ ದೇಶೀಯ ಅಂಪೈರ್​ ಪ್ರಶಸ್ತಿ ಪಡೆಯಲಿದ್ದಾರೆ. ಆಯುಷ್​ ಮಹಾತ್ರೆ ಮತ್ತು ಹರ್ಷ್​ ದುಬೆ ಕ್ರಮವಾಗಿ ದೇಶೀಯ ಸೀಮಿತ ಓವರ್​ ಮತ್ತು ರಣಜಿ ಟ್ರೋಫಿಯ ಆಲ್ರೌಂಡ್​ ನಿರ್ವಹಣೆಗಾಗಿ ಲಾಲಾ ಅಮರ್​ನಾಥ್​ ಪ್ರಶಸ್ತಿ ಪಡೆಯಲಿದ್ದಾರೆ.