ವೈಭವ್ ಸೂರ್ಯವಂಶಿ(ಎಡ), ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್(ಬಲ)
- ಬಿಸಿಸಿಐ ಮುಖ್ಯ ಆಯ್ಕೆಗಾರರ ಅಜಿತ್ ಅಗರ್ಕರ್ ಅವರ ಮಾತಿಗೆ ಕಡೆಗೂ ಗ್ರೀನ್ ಸಿಗ್ನಲ್
- ತಮ್ಮ ಹುದ್ದೆಯ ಅವಧಿಯನ್ನು ವಿಸ್ತರಿಸುವಂತೆ ಕೋರಿದ್ದ ಅರ್ಜಿಗೆ ಮಂಡಳಿ ಅಸ್ತು
- ಟೀಮ್ ಇಂಡಿಯಾ ಆಟಗಾರರ ಭವಿಷ್ಯ ಅಜಿತ್ ಅಗರ್ಕರ್
ನವದೆಹಲಿ: ಈ ಹಿಂದೆಯೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ತಮ್ಮ ಹುದ್ದೆಯ ಅವಧಿಯನ್ನು ವಿಸ್ತರಿಸುವಂತೆ ಕೋರಿದ್ದ ಮುಖ್ಯ ಆಯ್ಕೆಗಾರರ ಅಜಿತ್ ಅಗರ್ಕರ್ ಅವರ ಮಾತಿಗೆ ಕಡೆಗೂ ಗ್ರೀನ್ ಸಿಗ್ನಲ್ ನೀಡಲು ಮುಂದಾಗಿದೆ.
ಪ್ರಸ್ತುತ, ಟೀಮ್ ಇಂಡಿಯಾದ ಮುಖ್ಯ ಆಯ್ಕೆಗಾರರಾಗಿ ಕೆಲಸ ಮಾಡುತ್ತಿರುವ ಅಜಿತ್ ಅಗರ್ಕರ್ ಅವರ ಅಧಿಕಾರಾವಧಿಯನ್ನು ವಿಸ್ತರಿಸಲು ಮಂಡಳಿ ಒಲವು ತೋರಿದೆ. ವರದಿಗಳ ಪ್ರಕಾರ, ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು, 2027ರ ಜೂನ್ ವರೆಗೆ ತಮ್ಮ ಹುದ್ದೆಯಲ್ಲಿ ಮುಂದುವರಿಯಲು ಅಜಿತ್ಗೆ ಅವಕಾಶ ನೀಡಲಾಗಿದೆ.
ಅಜಿತ್ ಅಗರ್ಕರ್ ನೇತೃತ್ವದಲ್ಲಿ ಟೀಮ್ ಇಂಡಿಯಾ ಅತ್ಯುತ್ತಮ ಯಶಸ್ಸನ್ನು ದಾಖಲಿಸಿರುವುದು ಗಮನಾರ್ಹ. ಆಟಗಾರರನ್ನು ಅವರ ಶ್ರೇಣಿ, ಪ್ರದರ್ಶನಗಳ ಆಧಾರದ ಮೇಲೆ ಆಯಾ ಫಾರ್ಮೆಟ್ಗೆ ಆಯ್ಕೆ ಮಾಡುವ ಅಗರ್ಕರ್, ತಂಡಕ್ಕೆ ಹೆಚ್ಚಿನ ಗೆಲುವುಗಳನ್ನು ತಂದುಕೊಟ್ಟಿರುವುದನ್ನು ಬಿಸಿಸಿಐ ಸೂಕ್ಷ್ಮವಾಗಿ ಗಮನಿಸಿದಂತೆ ತೋರಿದೆ. ತಂಡಗಳು ಸತತ ಐಸಿಸಿ ಪ್ರಶಸ್ತಿಗಳನ್ನು ಗೆದ್ದಿರುವುದರಿಂದ ಮಂಡಳಿಯು ಅವರ ಮೇಲೆ ಸಂಪೂರ್ಣ ವಿಶ್ವಾಸ ಹೊಂದಿದೆ ಎಂಬುದರಲ್ಲಿ ಅನುಮಾನವಿಲ್ಲ.
ಅಗರ್ಕರ್ ಮುಖ್ಯ ಆಯ್ಕೆಗಾರರಾಗಿ ಅಧಿಕಾರ ವಹಿಸಿಕೊಂಡ ಬಳಿಕ, ತಂಡದಲ್ಲಿನ ಬದಲಾವಣೆಗಳು ಸರಾಗವಾಗಿ ನಡೆದಿವೆ. ಹಿರಿಯ ಆಟಗಾರರನ್ನು ಗೌರವಿಸುವುದರ ಜೊತೆಗೆ, ಯುವ ಆಟಗಾರರನ್ನು ಪ್ರೋತ್ಸಾಹಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ತಂಡದಲ್ಲಿ ನಿರ್ಭೀತ ವಿಧಾನವನ್ನು ತುಂಬಲು ಅವರು ತೆಗೆದುಕೊಂಡ ದಿಟ್ಟ ನಿರ್ಧಾರಗಳು ಭಾರತವನ್ನು ವಿಶ್ವದ ನಂಬರ್ ಒನ್ ತಂಡವನ್ನಾಗಿ ಮಾಡಿದೆ ಎಂದು ಬಿಸಿಸಿಐ ಮೂಲಗಳು ಬಹಿರಂಗಪಡಿಸಿವೆ.
ಪ್ರಸ್ತುತ, ಅಗರ್ಕರ್ ಅವರ ಒಪ್ಪಂದವು ಜೂನ್ 2026ರಲ್ಲಿ ಮುಕ್ತಾಯಗೊಳ್ಳಲಿದೆ. ಆದಾಗ್ಯೂ, ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ದೃಷ್ಟಿಯಿಂದ, ತಂಡದ ಸ್ಥಿರತೆಯನ್ನು ಅಡ್ಡಿಪಡಿಸಲು ಬಿಸಿಸಿಐ ಇಚ್ಛಿಸುತ್ತಿಲ್ಲ. ಹೀಗಾಗಿ, ಅಗರ್ಕರ್ ಅವರ ಮುಂದಾಳತ್ವದಲ್ಲಿ ಆಯ್ಕೆ ಸಮಿತಿಗೆ ಇನ್ನೂ ಒಂದು ವರ್ಷ ಜವಾಬ್ದಾರಿಯನ್ನು ನೀಡುವ ಮೂಲಕ 2027ರ ವಿಶ್ವಕಪ್ ಗುರಿಯನ್ನು ಸುಲಭವಾಗಿ ಸಾಧಿಸಲು ಬಿಸಿಸಿಐ ಯೋಜಿಸಿದೆ.
ಅಜಿತ್ ಅವರ ಅಧಿಕಾರಾವಧಿಯಲ್ಲಿ, ಟೀಮ್ ಇಂಡಿಯಾ ಐಸಿಸಿ ಟಿ20 ವಿಶ್ವಕಪ್ 2024, ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಮತ್ತು ಐಸಿಸಿ ಟಿ20 ವಿಶ್ವಕಪ್ 2026 ಪ್ರಶಸ್ತಿಗಳನ್ನು ಗೆದ್ದು ಬೀಗಿತು. ಇಲ್ಲಿ ಅಗರ್ಕರ್ ಅವರ ಆಯ್ಕೆ ಪ್ರಕ್ರಿಯೆಯು ನಿರ್ಣಾಯಕವಾಗಿತ್ತು ಎಂಬುದು ಹಲವರ ಅಭಿಪ್ರಾಯ. ಜುಲೈ 2023ರಲ್ಲಿ ಅಧಿಕಾರ ವಹಿಸಿಕೊಂಡ ಅಗರ್ಕರ್, ಟೀಮ್ ಇಂಡಿಯಾದಲ್ಲಿ ಒಬ್ಬ ಉತ್ತಮ ಆಟಗಾರನಾಗಿ ಮತ್ತು ಬಿಸಿಸಿಐನಲ್ಲಿ ಉತ್ತಮ ಆಯ್ಕೆಗಾರರಾಗಿ ಛಾಪು ಮೂಡಿಸಿದ್ದಾರೆ. ಈ ವಿಸ್ತರಣೆಯಿಂದ, ಅಗರ್ಕರ್ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಮತ್ತು ದೀರ್ಘಕಾಲ ಸೇವೆ ಸಲ್ಲಿಸಿದ ಮುಖ್ಯ ಆಯ್ಕೆಗಾರರಲ್ಲಿ ಒಬ್ಬರಾಗಿ ನಿಲ್ಲುವುದು ಖಚಿತ.