2017ರಲ್ಲಿ ಧೋನಿಗೆ ನಾಯಕತ್ವ ತ್ಯಜಿಸಲು ಸೂಚಿಸಿದ್ದ ಬಿಸಿಸಿಐ! ಆಗಿನ ಆಯ್ಕೆಗಾರನಿಂದ ಬಹಿರಂಗ
ನವದೆಹಲಿ: ಭಾರತಕ್ಕೆ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದುಕೊಟ್ಟಿರುವ ನಾಯಕ ಎಂಎಸ್ ಧೋನಿ (MS Dhoni) 2017ರಲ್ಲಿ ಪದತ್ಯಾಗ ಮಾಡಿದಾಗ ಅದು ಅವರ ಸ್ವಂತ ನಿರ್ಧಾರ ಎಂದೇ ಭಾವಿಸಲಾಗಿತ್ತು. ಆಗಿನ ಉಪನಾಯಕ ವಿರಾಟ್ ಕೊಹ್ಲಿ ನಾಯಕನ ಪಟ್ಟಕ್ಕೇರಲು ಸರಿಯಾದ ಸಮಯ ಬಂದಿದೆ ಎಂಬ ನಿಲುವಿನೊಂದಿಗೆ ಧೋನಿ ಆ ನಿರ್ಧಾರ ತೆಗೆದುಕೊಂಡಿದ್ದರು ಎಂದೇ ಹೇಳಲಾಗಿತ್ತು. ಆದರೆ ಅದು ಧೋನಿಯ ಸ್ವಯಂ ನಿರ್ಧಾರ ಆಗಿರಲಿಲ್ಲ. ಆಗ ಬಿಸಿಸಿಐ (BCCI) ಸೂಚನೆಯ ಮೇರೆಗೆ ನಾಯಕತ್ವ ತೊರೆದಿದ್ದರು ಎಂಬ ಅಚ್ಚರಿಯ ವಿಷಯ ಇದೀಗ ಬೆಳಕಿಗೆ ಬಂದಿದೆ. ಆಗ ಆಯ್ಕೆ ಸಮಿತಿಯ ಸದಸ್ಯರಾಗಿದ್ದ ಜತಿನ್ ಪರಾಂಜಪೆ ಟಿವಿ ಶೋ ಒಂದರಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ನಾಯಕತ್ವವನ್ನು ತ್ಯಜಿಸಬೇಕೆಂಬ ಬಿಸಿಸಿಐ ಸೂಚನೆಯನ್ನು ಆಗಿನ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ಕೆ ಪ್ರಸಾದ್, ಧೋನಿಗೆ ತಲುಪಿಸಿದ್ದರು. ಅಲ್ಲದೆ, ನಾಯಕತ್ವ ತ್ಯಜಿಸಲು ಸಿದ್ಧ ಎಂಬ ನಿರ್ಧಾರವನ್ನು ಧೋನಿಯಿಂದ ಲಿಖಿತ ರೂಪದಲ್ಲೂ ಪಡೆದುಕೊಂಡಿದ್ದರು ಎಂದು ಪರಾಂಜಪೆ ತಿಳಿಸಿದ್ದಾರೆ.
2017ರ ಜನವರಿಯಲ್ಲಿ ಧೋನಿ ನೆಟ್ಸ್ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದಾಗ ನಾನು ಮತ್ತು ಅಲ್ಲಿಗೆ ಹೋದೆವು. ಇದು ನಾಯಕತ್ವ ತ್ಯಜಿಸಿ ಮುಂದಿನ ಹೆಜ್ಜೆ ಇಡಲು ಸರಿಯಾದ ಸಮಯ ಎಂದು ಎಂಎಸ್ಕೆ ಅತ್ಯಂತ ಗೌರವಯುತವಾಗಿ ಧೋನಿಗೆ ತಿಳಿಸಿದರು. ಧೋನಿ ಕೂಡಲೆ ಅದಕ್ಕೆ ಒಪ್ಪಿಕೊಂಡರು. ಆಗ ಎಂಎಸ್ಕೆ, ನಾಯಕತ್ವ ಬಿಡಲು ಸಿದ್ಧ ಎಂದು ಲಿಖಿತ ರೂಪದಲ್ಲಿ ಕೊಡಬೇಕು ಎಂದರು. ಅದಕ್ಕೆ ಧೋನಿ ಓಕೆ ಎಂದರು. ನಂತರ ರಾತ್ರಿ ಇ-ಮೇಲ್ ಮೂಲಕ ಧೋನಿ, "ನಾನು ಪದತ್ಯಾಗ ಮಾಡುವೆ' ಎಂದು ಬರೆದು ಕಳುಹಿಸಿದರು. ಅದು ನಾವು ತೆಗೆದುಕೊಂಡ ಅತ್ಯಂತ ಕಠಿಣ ನಿರ್ಧಾರವಾಗಿತ್ತು ಎಂದು ಪರಾಂಜಪೆ, "ದಿ ಗ್ರೇಟ್ ಇಂಡಿಯನ್ ಕ್ರಿಕೆಟ್ ಶೋ'ನಲ್ಲಿ ವಿವರಿಸಿದ್ದಾರೆ.
"ಚಿಂತಿಸಬೇಡಿ. ನಾನು ಸಂಪೂರ್ಣವಾಗಿ ವಿರಾಟ್ ಜತೆ ನಿಲ್ಲುವೆ. ಅವರು ನನಗೆ ಸಹೋದರನಿದ್ದಂತೆ. ಅವರಿಗೆ ಅಗತ್ಯವಿರುವ ಎಲ್ಲ ಬೆಂಬಲ ಒದಗಿಸುವೆ. ನನ್ನ ಅನುಭವದ ಪ್ರಕಾರ ಅವರಿಗೆ ನೆರವಾಗುವೆ ಮತ್ತು ತಂಡವನ್ನು ಬಲಿಷ್ಠಗೊಳಿಸುವೆ ಎಂದು ಧೋನಿ ಆಗ ತಿಳಿಸಿದ್ದರು' ಎಂದೂ ಪರಾಂಜಪೆ ಹೇಳಿದ್ದಾರೆ.