ಬಾಂಗ್ಲಾ ವೇಗಿ ಮುಸ್ತುಫಿಜುರ್ ರೆಹಮಾನ್
- ಬಾಂಗ್ಲಾ ಆಟಗಾರ ಮುಸ್ತಾಫಿಜುರ್ ರೆಹಮಾನ್ ಕೈಬಿಟ್ಟ ಕೆಕೆಆರ್
- ಐಪಿಎಲ್ 2026ಕ್ಕೆ ವಾಪಾಸ್ ಕರೆತರಲು ಬಿಸಿಸಿಐ ನಿರ್ಧಾರ?
- ಹೀಗೊಂದು ಸುದ್ದಿಗೆ ಬಾಂಗ್ಲಾ ಕ್ರಿಕೆಟ್ ಮಂಡಳಿಯಿಂದ ಸ್ಪಷ್ಟ ಉತ್ತರ
ನವದೆಹಲಿ: ಇತ್ತೀಚೆಗಷ್ಟೇ ಕೋಲ್ಕತ ನೈಟ್ ರೈಡರ್ಸ್ (ಕೆಕೆಆರ್) ತಂಡದ ಮಾಲೀಕ ಹಾಗೂ ನಟ ಶಾರುಖ್ ಖಾನ್ ವಿರುದ್ಧ ಕ್ರಿಕೆಟ್ ಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬಾಂಗ್ಲಾದೇಶದಲ್ಲಿ ಹಿಂದುಗಳ ಕೊಲೆ ಆಗುತ್ತಿರುವಾಗ, ಅಲ್ಲಿನ ಕ್ರಿಕೆಟಿಗರನ್ನು ಇಲ್ಲಿ ಆಡಿಸುವುದು ಎಷ್ಟು ಸರಿ? ಎಂದು ಕಿಡಿಕಾರಿದ್ದರು. ಭಾರೀ ವಿರೋಧಗಳ ಬೆನ್ನಲ್ಲೇ ಬಿಸಿಸಿಐ ಕೆಕೆಆರ್ಗೆ ಬಾಂಗ್ಲಾ ವೇಗಿ ಮುಸ್ತಾಫಿಜುರ್ರನ್ನು 2026ರ ಐಪಿಎಲ್ನಿಂದ ಕೈಬಿಡುವಂತೆ ಸೂಚಿಸಿತು. ಅಂತೆಯೇ, ಫ್ರಾಂಚೈಸಿ ಕೂಡ ರಿಲೀಸ್ ಮಾಡಿತು. ಆದರೀಗ, ಮತ್ತೊಂದು ಸುದ್ದಿ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಗೊಂದಲ ಸೃಷ್ಟಿಸಿದೆ.
ಕೆಕೆಆರ್ ತಮ್ಮ ದೇಶದ ಕ್ರಿಕೆಟಿಗ ಮುಸ್ತುಫಿಜುರ್ರನ್ನು ಐಪಿಎಲ್ನಿಂದ ಕೈಬಿಟ್ಟ ಹಿನ್ನೆಲೆ ಬಾಂಗ್ಲಾ ಕ್ರಿಕೆಟ್ ಮಂಡಳಿ ಬಿಸಿಸಿಐ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದೆ. ರೆಹಮಾನ್ರನ್ನು ಟಿ20 ಲೀಗ್ನಿಂದ ಹೊರಗಿಟ್ಟ ಕೂಡಲೇ ಫೆಬ್ರವರಿ 7ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ ಟೂರ್ನಿಯ ತಮ್ಮ ಪಂದ್ಯಗಳನ್ನು ಭಾರತದಿಂದ ಹೊರಗೆ ಆಡಿಸುವಂತೆ ಬಿಸಿಬಿ ನೇರವಾಗಿ ಐಸಿಸಿಗೆ ಮನವಿ ಸಲ್ಲಿಸಿತು. ಆದರೆ, ಇದನ್ನು ಐಸಿಸಿ ತಿರಸ್ಕರಿಸಿತೇ ವಿನಃ ಒಪ್ಪಿಗೆ ನೀಡಲಿಲ್ಲ.
ಇದರ ಮಧ್ಯೆ, ಎರಡು ದೇಶಗಳ ನಡುವೆ ಸೃಷ್ಟಿಯಾಗಿರುವ ಉದ್ವಿಗ್ನತೆಯ ಗಮನಿಸಿ, ಬಿಸಿಸಿಐ ಮುಸ್ತುಫಿಜುರ್ರನ್ನು ಐಪಿಎಲ್ಗೆ ವಾಪಾಸ್ ಕರೆತರಲು ನಿರ್ಧರಿಸಿದೆ ಎಂಬ ಸುದ್ದಿಯೊಂದು ಸದ್ಯ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಬಾಂಗ್ಲಾ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಸ್ಪಷ್ಟನೆ ನೀಡಿದ್ದಾರೆ. ಆ ರೀತಿ ಯಾವುದೇ ಮಾತುಕತೆಗಳು ನಮ್ಮ ಮಧ್ಯೆ ನಡೆದಿಲ್ಲ. ಇಲ್ಲಿಯವರೆಗೆ ಮಾತಿನಲ್ಲಿ ಆಗಲಿ ಅಥವಾ ಪತ್ರದ ಮುಖೇನವಾಗಲಿ ನಾವು ಚರ್ಚೆ ನಡೆಸಿಲ್ಲ ಎಂದಿದ್ದಾರೆ.
ಈ ಸುದ್ದಿಯಲ್ಲಿ ಸತ್ಯವಿಲ್ಲ. ಇದೊಂದು ಫೇಕ್ ನ್ಯೂಸ್ ಎಂಬುದರಲ್ಲಿ ಅನುಮಾನವಿಲ್ಲ ಎಂದು ಬಿಸಿಬಿ ತಿಳಿಸಿದೆ. ಇದರೊಂದಿಗೆ ಎರಡನೇ ಬಾರಿಗೆ ಐಸಿಸಿಗೆ ಪತ್ರ ಬರೆದಿರುವ ಬಾಂಗ್ಲಾ ಕ್ರಿಕೆಟ್, ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಮ್ಮ ಪಂದ್ಯಗಳನ್ನು ದಯವಿಟ್ಟು ಭಾರತದಿಂದ ಹೊರಗೆ ಆಡಿಸಲು ಅವಕಾಶ ಕೊಡಿ ಎಂದು ಒತ್ತಿ ಹೇಳಿದೆ. ಮೊದಲನೇ ಮನವಿಯನ್ನು ತಿರಸ್ಕರಿಸಿದ್ದ ಐಸಿಸಿಗೆ ಇದು ಬಿಸಿಬಿಯಿಂದ ಎರಡನೇ ಮನವಿಯಾಗಿದೆ,(ಏಜೆನ್ಸೀಸ್).