ಬಿಸಿಸಿಐ ಇನ್ನೂ ಎನ್ಎಸ್ಎಫ್ ಮಾನ್ಯತೆ ಪಡೆದಿಲ್ಲ
ನವದೆಹಲಿ: ಬಿಸಿಸಿಐ (BCCI) ಇನ್ನೂ ರಾಷ್ಟ್ರೀಯ ಕ್ರೀಡಾ ಒಕ್ಕೂಟದ (NSF) ಮಾನ್ಯತೆ ಪಡೆದುಕೊಂಡಿಲ್ಲ ಎಂದು ಕ್ರೀಡಾ ಸಚಿವ (Sports Minister) ಮನ್ಸುಖ್ ಮಾಂಡವೀಯ (Mansukh Mandaviya ) ಸೋಮವಾರ ಲೋಕಸಭೆಯಲ್ಲಿ ಮಾಹಿತಿ ನೀಡಿದರು. ಆದರೆ ನೂತನ ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆ ಮುಂದಿನ ವರ್ಷ ಜಾರಿಗೆ ಬಂದ ನಂತರ ಬಿಸಿಸಿಐ ಎನ್ಎಸ್ಎಫ್ ಮಾನ್ಯತೆ ಪಡೆದುಕೊಳ್ಳುವ ನಿರೀಕ್ಷೆ ಇದೆ ಎಂದೂ ಅವರು ತಿಳಿಸಿದರು.
ಶ್ರೀಮಂತ ಕ್ರೀಡಾ ಸಂಸ್ಥೆ ಬಿಸಿಸಿಐ ಮತ್ತು ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ಅಖಿಲ ಭಾರತ ಫುಟ್ಬಾಲ್ ಒಕ್ಕೂಟದ (ಎಐಎ್ಎಫ್) ಸಮರ್ಥ ಕಾರ್ಯನಿರ್ವಹಣೆಗಾಗಿ ಸರ್ಕಾರ ಅದರ ನಿಯಂತ್ರಣ ತೆಗೆದುಕೊಳ್ಳಬಹುದೇ ಎಂದು ತೃಣಮೂಲ ಕಾಂಗ್ರೆಸ್ ಸಂಸದ ಮಾಲಾ ರಾಯ್ ಕೇಳಿದ ಪ್ರಶ್ನೆಗೆ ಮಾಂಡವೀಯ ಈ ರೀತಿ ಪ್ರತಿಕ್ರಿಯಿಸಿದರು. ಎನ್ಎಸ್ಎಫ್ಗಳೂ ಸ್ವಾಯತ್ತ ಸಂಸ್ಥೆಗಳಾಗಿರುತ್ತವೆ ಮತ್ತು ಆರೋಗ್ಯಕರ ಕಾರ್ಯನಿರ್ವಹಣೆ ಹೊಂದಿರಬೇಕು. ಬಿಸಿಸಿಐ ಎನ್ಎಸ್ಎಫ್ ಮಾನ್ಯತೆ ಪಡೆದಿಲ್ಲ ಮತ್ತು ಸರ್ಕಾರದ ಅನುದಾನವನ್ನೂ ಅವಲಂಬಿಸಿಲ್ಲ. ಆದರೆ ಹೊಸ ಕಾಯ್ದೆ ಜಾರಿಗೆ ಬಂದ ನಂತರ ಬಿಸಿಸಿಐ ಎನ್ಎಸ್ಎ್ ಮಾನ್ಯತೆ ಪಡೆಯಲೇಬೇಕಾಗುತ್ತದೆ. ಯಾಕೆಂದರೆ ಈಗ ಕ್ರಿಕೆಟ್ ಕೂಡ ಒಲಿಂಪಿಕ್ಸ್ ಕ್ರೀಡೆಯಾಗಿದೆ. ಆದರೆ ಸರ್ಕಾರದ ಅನುದಾನವನ್ನು ಪಡೆಯದ ಕಾರಣ ಬಿಸಿಸಿಐ, ಮಾಹಿತಿ ಹಕ್ಕು ಕಾಯ್ದೆಯಡಿ ಬರುವುದಿಲ್ಲ ಎಂದು ಮಾಂಡವೀಯ ತಿಳಿಸಿದರು.
ಒಂದು ಕೋಟಿ ರೂ.ಗಿಂತ ಹೆಚ್ಚಿನ ಅನುದಾನ ಪಡೆಯುವ ಎಲ್ಲ ಎನ್ಎಸ್ಎಫ್ಗಳು ಭಾರತೀಯ ಲೆಕ್ಕ ಪರಿಶೋಧಕರಿಂದ (ಸಿಎಜಿ) ಲೆಕ್ಕ ಪರಿಶೋಧನೆಗೂ ಒಳಗಾಗಬೇಕು ಎಂದು ಅವರು ಹೇಳಿದರು.