ಐಪಿಎಲ್ನಲ್ಲಿ ಕ್ರಿಕೆಟಿಗರ ಗರ್ಲ್ಫ್ರೆಂಡ್ಸ್ಗೆ ನಿರ್ಬಂಧ: ಬಿಸಿಸಿಐ ಚಿಂತನೆ
ನವದೆಹಲಿ: ಐಪಿಎಲ್ನಲ್ಲಿ (IPL) ಇತ್ತೀಚೆಗೆ ಹೆಚ್ಚಿನ ಕ್ರಿಕೆಟಿಗರೊಂದಿಗೆ ಅವರ ಗೆಳತಿಯರೂ ಹೋಟೆಲ್ ಕೋಣೆಗಳಲ್ಲಿ ಉಳಿದುಕೊಳ್ಳುವ "ಗರ್ಲ್ಫ್ರೆಂಡ್ ಸಂಸ್ಕೃತಿ' (girlfriend culture) ಹೆಚ್ಚಾಗಿದ್ದು, ಇದನ್ನು ನಿರ್ಬಂಧಿಸುವ ಸಂಬಂಧ ಬಿಸಿಸಿಐ (bcci) ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
ಐಪಿಎಲ್ ವೇಳೆ ಕ್ರಿಕೆಟಿಗರೊಂದಿಗೆ ಅವರ ಪತ್ನಿ ಮತ್ತು ಇತರ ಕುಟುಂಬ ಸದಸ್ಯರೂ ಉಳಿದುಕೊಳ್ಳಲು ಮೊದಲಿನಿಂದಲೂ ಅವಕಾಶವಿದೆ. ಇತ್ತೀಚೆಗೆ ಗೆಳತಿಯರೂ ಆಟಗಾರರೊಂದಿಗೆ ಅವರ ಹೋಟೆಲ್ ಕೋಣೆಯಲ್ಲೇ ಉಳಿದುಕೊಳ್ಳುವ ಅಭ್ಯಾಸ ಹೆಚ್ಚಾಗಿದೆ. ಇದು ಟೂರ್ನಿಗೆ ಅಥವಾ ತಂಡಗಳಿಗೆ ಸಂಬಂಧಿಸಿದ ಆಂತರಿಕ ಮಾಹಿತಿಗಳು ಸೋರಿಕೆಯಾಗುವ ಅಪಾಯವನ್ನು ಹೆಚ್ಚಿಸಿವೆ. ಅಲ್ಲದೆ ಈ ಸಂಬಂಧ ಯಾವುದಾದರೂ ದೊಡ್ಡ ವಿವಾದ ಭುಗಿಲೇಳುವುದಕ್ಕೆ ಮುನ್ನ ಎಚ್ಚೆತ್ತುಕೊಳ್ಳಲು ಬಿಸಿಸಿಐ ಮುಂದಾಗಿದೆ. ಹೀಗಾಗಿ ಗರ್ಲ್ಫ್ರೆಂಡ್ಗಳ ಮೇಲೆ ನಿರ್ಬಂಧ ಹೇರುವುದಕ್ಕೆ ಸಂಬಂಧಿಸಿ ಕಟ್ಟುನಿಟ್ಟಿನ ನಿಯಮಾವಳಿಯೊಂದನ್ನು ರೂಪಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಆದರೆ ಈ ಹೊಸ ನಿಯಮಾವಳಿ ಮುಂದಿನ ಆವೃತ್ತಿಯಿಂದಷ್ಟೇ ಜಾರಿಗೆ ಬರಬಹುದು ಎನ್ನಲಾಗಿದೆ.
ಟೀಮ್ ಇಂಡಿಯಾ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ (ಮಹಿಕಾ ಶರ್ಮ), ಅರ್ಷದೀಪ್ ಸಿಂಗ್ (ಸಮರೀನ್ ಕೌರ್), ಇಶಾನ್ ಕಿಶನ್ (ಅದಿತಿ ಹುಂಡಿಯಾ) ಮತ್ತು ಯಶಸ್ವಿ ಜೈಸ್ವಾಲ್ (ಮ್ಯಾಡಿ ಹ್ಯಾಮಿಲ್ಟನ್) ಐಪಿಎಲ್ ವೇಳೆ ಗೆಳತಿಯರೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿರುವ ಪ್ರಮುಖರಾಗಿದ್ದಾರೆ. ಅವರು ಡೇಟಿಂಗ್ ನಡೆಸುವುದಕ್ಕೆ ಬಿಸಿಸಿಐ ಯಾವುದೇ ಆಕ್ಷೇಪ ಹೊಂದಿಲ್ಲ. ಆದರೆ ಅವರು ಆಟಗಾರರೊಂದಿಗೆ ಹೋಟೆಲ್ ಕೋಣೆಯಲ್ಲೇ ಉಳಿದುಕೊಳ್ಳುವುದಕ್ಕೆ ಮತ್ತು ತಂಡದ ಜತೆಯಲ್ಲೇ ಪ್ರಯಾಣಿಸುವುದಕ್ಕೆ ಬಿಸಿಸಿಐ ಅಸಮಾಧಾನ ಹೊಂದಿದೆ ಎನ್ನಲಾಗಿದೆ.
ಪತ್ನಿ ಮತ್ತು "ಅಧಿಕೃತ ಗೆಳತಿ'ಯರನ್ನು ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಟಕ (ಎಸಿಯು) ಸದ್ಯ ಒಂದೇ ರೀತಿಯಾಗಿ ಪರಿಗಣಿಸಿದೆ. ಹೀಗಾಗಿ ಆಟಗಾರರೊಂದಿಗೆ "ಅಧಿಕೃತ ಗೆಳತಿ'ಗೂ ಹೋಟೆಲ್ನಲ್ಲಿ ಉಳಿದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎನ್ನಲಾಗಿದೆ.
ಕೆಲ ಕ್ರಿಕೆಟಿಗರ ಗೆಳತಿಯರಲ್ಲಿ ಸಾಮಾಜಿಕ ಜಾಲತಾಣ ಇನ್ಫ್ಲುಯೆನ್ಸರ್ಗಳು ಹೆಚ್ಚಿದ್ದು, ಅವರು ಈ ಹಿಂದೆ ಬೆಟ್ಟಿಂಗ್ ಆ್ಯಪ್ಗಳನ್ನು ಪ್ರಚಾರ ಮಾಡಿದ ಹಿನ್ನೆಲೆಯನ್ನೂ ಹೊಂದಿದ್ದಾರೆ. ಇದು ಬಿಸಿಸಿಐಗೆ ಹೆಚ್ಚಿನ ಕಳವಳ ತಂದಿದೆ ಎನ್ನಲಾಗಿದೆ.
2024-25ರ ಆಸೀಸ್ ಪ್ರವಾಸ ವೈಲ್ಯದ ಬಳಿಕ ಟೀಮ್ ಇಂಡಿಯಾದಲ್ಲಿ ಈಗಾಗಲೆ ಕ್ರಿಕೆಟಿಗರ ಕುಟುಂಬದ ಸದಸ್ಯರ ಮೇಲೆ ನಿರ್ಬಂಧಗಳಿವೆ. 45 ದಿನಗಳಿಗಿಂತ ಹೆಚ್ಚಿನ ಅವಧಿಯ ವಿದೇಶಿ ಪ್ರವಾಸದ ವೇಳೆ ಒಂದು ವಾರವಷ್ಟೇ ಕುಟುಂಬ ಸದಸ್ಯರೊಂದಿಗೆ ಇರಲು ಅವಕಾಶವಿದೆ. ಆದರೆ ಐಪಿಎಲ್ ತಂಡಗಳ ಒಡೆತನ ಖಾಸಗಿಯಾಗಿದ್ದು, ಹೀಗಾಗಿ ಸದ್ಯ ಅವರ ನಿಯಮವೇ ಅನ್ವಯಿಸುತ್ತಿದೆ. ಆದರೆ ಬಿಸಿಸಿಐ ಮುಂದಿನ ಫ್ರಾಂಚೈಸಿ ಸಭೆಯಲ್ಲಿ ಈ ಸಂಬಂಧ ಕಟ್ಟುನಿಟ್ಟಿನ ನಿಯಮ ತರುವ ಬಗ್ಗೆ ಚರ್ಚಿಸಲಿದೆ ಎನ್ನಲಾಗಿದೆ.
*ಗೆಳತಿಯರ ರ್ನಿಬಂಧದ ಬಗ್ಗೆ ಸದ್ಯ ಚರ್ಚೆ ನಡೆಯುತ್ತಿದೆ. ಆಟಗಾರರೊಂದಿಗೆ ಅವರ ಪತ್ನಿ ಮತ್ತು ಇತರ ಕುಟುಂಬ ಸದಸ್ಯರು ಪ್ರಯಾಣಿಸುವುದಕ್ಕೆ ಯಾವುದೇ ಆಕ್ಷೇಪವಿಲ್ಲ. ಆದರೆ ಗೆಳತಿಯರೂ ಜತೆಯಲ್ಲೇ ಹೋಗುತ್ತಿರುವ ಬಗ್ಗೆ ಕಳವಳವಿದೆ. ಈ ಹಿಂದೆ ಐಪಿಎಲ್ ವೇಳೆ ಗೆಳತಿಯರು ಆಟಗಾರರೊಂದಿಗೆ ಉಳಿದುಕೊಳ್ಳಲು ಅವಕಾಶವಿರಲಿಲ್ಲ. ಆದರೆ ಇತ್ತೀಚೆಗೆ ಈ ಟ್ರೆಂಡ್ ಹೆಚ್ಚಾಗಿದೆ.