IPL 2027 Auction: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಕ್ರಿಕೆಟ್ ಸಂಬಂಧಗಳು ಅಳಸಿ ಹೋಗಿರುವ ಬಗ್ಗೆ ಕ್ರಿಕೆಟ್ ಪ್ರೇಮಿಗಳಿಗೆ ಚೆನ್ನಾಗಿಯೇ ಗೊತ್ತಿದೆ. ಇದೇ ಕಾರಣಕ್ಕೆ, 19ನೇ ಆವೃತ್ತಿಯಿಂದ ವೇಗಿ ಮುಸ್ತುಫಿಜುರ್ ರೆಹಮಾನ್ರನ್ನು ಕೋಲ್ಕತ ನೈಟ್ ರೈಡರ್ಸ್ (ಕೆಕೆಆರ್) ತಂಡದಿಂದ ಕೈಬಿಡಲಾಗಿತ್ತು. ಈ ಮಧ್ಯೆ, ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿರುವ ವಿವಾದಗಳನ್ನು ಬದಿಗಿಟ್ಟು, ಮುಂಬರುವ ಐಪಿಎಲ್ 2027 ಹರಾಜಿನಲ್ಲಿ ಬಾಂಗ್ಲಾದೇಶದ ಆಟಗಾರರು ಭಾಗವಹಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅನುಮತಿ ನೀಡಿರುವುದಾಗಿ ವರದಿಯಾಗಿದೆ.
ಸಾಮಾನ್ಯ ಪ್ರಕ್ರಿಯೆಯ ಭಾಗವಾಗಿ, ಮುಂಬರುವ ಐಪಿಎಲ್ ಮಿನಿ ಹರಾಜಿಗಾಗಿ ಬಿಸಿಸಿಐ ವಿವಿಧ ದೇಶಗಳ ಕ್ರಿಕೆಟ್ ಮಂಡಳಿಗಳನ್ನು ಸಂಪರ್ಕಿಸಿದೆ. ಈ ಪಟ್ಟಿಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಇರುವುದು ಇದೀಗ ಕ್ರಿಕೆಟ್ ವಲಯದಲ್ಲಿ ಕುತೂಹಲ ಮೂಡಿಸಿದೆ. ಆದರೆ, ಇದೀಗ ಪರಿಸ್ಥಿತಿ ಬದಲಾಗಿದ್ದು, ಡಿಸೆಂಬರ್ 16ರಂದು ನಡೆಯಲಿರುವ ಐಪಿಎಲ್ ಮಿನಿ ಹರಾಜಿನಲ್ಲಿ ಪಾಲ್ಗೊಳ್ಳಲು ಮುಸ್ತಫಿಜುರ್ ರೆಹಮಾನ್ಗೆ ಮತ್ತೆ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಮುಸ್ತಾಫಿಜುರ್ ಜತೆಗೆ ಬಾಂಗ್ಲಾದೇಶದ ಇತರ ಆರು ಆಟಗಾರರು ಕೂಡ ಈ ಹರಾಜಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಈ ಪಟ್ಟಿಯಲ್ಲಿ ನಹಿದ್ ರಾಣಾ, ರಿಶಾದ್ ಹೊಸೈನ್, ಹಸನ್ ಮಹಮೂದ್, ತೌಹಿದ್ ಹೃದಯೋಯ್, ತಸ್ಕಿನ್ ಅಹ್ಮದ್ ಮತ್ತು ಶೋರಿಫುಲ್ ಇಸ್ಲಾಂ ಕೂಡ ಸೇರ್ಪಡೆಯಾಗಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲಿನ ದಾಳಿಯ ಸುದ್ದಿಯ ನಂತರ, ಬಾಂಗ್ಲಾದೇಶದ ಆಟಗಾರರು ಐಪಿಎಲ್‌ನಲ್ಲಿ ಆಡುತ್ತಿರುವ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು.
ಇದರೊಂದಿಗೆ ಈ ವರ್ಷದ ಜನವರಿಯಲ್ಲಿ ಮುಸ್ತಾಫಿಜುರ್ ಅವರನ್ನು ಫ್ರಾಂಚೈಸಿಯಿಂದ ಬಿಡುಗಡೆ ಮಾಡಲು ಬಿಸಿಸಿಐ ಸೂಚಿಸಿತು. ಆದರೆ, ಕೆಕೆಆರ್ ಅವರನ್ನು ಕೈಬಿಟ್ಟು ಬದಲಿ ಆಟಗಾರನನ್ನು ತೆಗೆದುಕೊಂಡಿತು. ವಾಸ್ತವವಾಗಿ, ಕಳೆದ ಡಿಸೆಂಬರ್ ಹರಾಜಿನಲ್ಲಿ, 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಣಕ್ಕೆ ಪ್ರವೇಶಿಸಿದ ಮುಸ್ತಾಫಿಜುರ್, ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಭಾರಿ ಪೈಪೋಟಿಯಲ್ಲಿದ್ದರು. ಆದರೆ, ಅಂತಿಮವಾಗಿ ಕೆಕೆಆರ್ ಅವರನ್ನು 9.20 ಕೋಟಿ ರೂ. ದಾಖಲೆಯ ಬೆಲೆಗೆ ಖರೀದಿಸಿತು. ಈಗ ಒಂದು ವರ್ಷದ ಬಳಿಕ ಮತ್ತೇ ಐಪಿಎಲ್ ಸೇರಲು ಬಾಂಗ್ಲಾ ಆಟಗಾರರಿಗೆ ಚಾನ್ಸ್ ಸಿಕ್ಕಿದ್ದು, ಇದನ್ನು ಬಳಸಿಕೊಳ್ಳಲಿದ್ದಾರಾ ಅಥವಾ ದ್ವೇಷದ ಮನಸ್ಥಿತಿಯಿಂದ ಕೈಬಿಡಲಿದ್ದಾರಾ ಎಂಬುದೇ ಕುತೂಹಲ,(ಏಜೆನ್ಸೀಸ್).