- 2027ರ ಏಕದಿನ ವಿಶ್ವಕಪ್ನತ್ತ ರೋಹಿತ್ ಚಿತ್ತ
- ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯಕ್ಕೆ ಹಿಟ್ಮ್ಯಾನ್ ರೆಡಿ
- ಬಿಸಿಸಿಐ ಕೊಟ್ಟ ಮಹತ್ವದ ಸಲಹೆಯಿದು
ನವದೆಹಲಿ: ಅ.25ರಂದು ಸಿಡ್ನಿಯಲ್ಲಿ ನಡೆದ ಆತಿಥೇಯ ಆಸೀಸ್ ವಿರುದ್ಧದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್ ಶರ್ಮ, ಭಾರತಕ್ಕೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಮೂಲಕ ಏಕದಿನ ಸರಣಿಯಲ್ಲಿ ಕ್ಲೀನ್ ಸ್ವೀಪ್ನಿಂದ ತಂಡವನ್ನು ಬಚಾವ್ ಮಾಡಿದರು. ತಂಡದ ಪರ ಅದ್ಭುತ ಇನ್ನಿಂಗ್ಸ್ ನೀಡಿದ ರೋಹಿತ್ ಶರ್ಮ, ಶತಕದಾಟದ (ಅಜೇಯ 121 ರನ್) ಮೂಲಕ ಐತಿಹಾಸಿಕ ದಾಖಲೆಗಳಿಗೆ ಸಾಕ್ಷಿಯಾದರು. 2027ರ ವಿಶ್ವಕಪ್ಗೆ ಎದುರುನೋಡುತ್ತಿರುವ ಹಿಟ್ಮ್ಯಾನ್ಗೆ ಸದ್ಯ ಬಿಸಿಸಿಐ ಮಹತ್ವದ ಸಲಹೆಯನ್ನೇ ನೀಡಿದೆ.
ಏಕದಿನಕ್ಕೂ ಹಿಟ್ಮ್ಯಾನ್ ಗುಡ್ಬೈ?
ಕಳೆದ ವರ್ಷ ಜೂನ್ 29ರಂದು ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ರೋಹಿತ್, ಈ ವರ್ಷದ ಮೇ 7ರಂದು ಟೆಸ್ಟ್ಗೆ ಗುಡ್ಬೈ ಹೇಳಿದರು. ಪ್ರಸ್ತುತ, ಏಕದಿನ ಫಾರ್ಮೆಟ್ಗೆ ಮಾತ್ರ ಸೀಮಿತವಾಗಿರುವ ಅವರು, 2027ರ ಏಕದಿನ ವಿಶ್ವಕಪ್ ಟೂರ್ನಿಗೆ ಎದುರುನೋಡುತ್ತಿದ್ದಾರೆ. ಈ ಮಧ್ಯೆ, ಸಾಕಷ್ಟು ವರದಿ ಹಾಗೂ ವದಂತಿಗಳು ಅವರ ನಿವೃತ್ತಿ ಕುರಿತಂತೆ ಪ್ರಶ್ನಿಸುತ್ತಿವೆ. ಮತ್ತೊಂದೆಡೆ, ಹಿಟ್ಮ್ಯಾನ್ ಏಕದಿನಕ್ಕೂ ಗುಡ್ಬೈ ಹೇಳುವುದು ಖಚಿತ ಎಂಬ ಊಹಾಪೋಹಗಳು ಸೋಷಿಯಲ್ ಮೀಡಿಯಾದಲ್ಲಿ ಎಂದಿಗಿಂತ ಜೋರಿವೆ. ಸದ್ಯ ಇದನ್ನು ಬಿಸಿಸಿಐ ಸೂಕ್ಷ್ಮವಾಗಿ ಗಮನಿಸಿದೆ.
50 ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರರಾಗಿರುವ ಮುಂಬೈನ ಸ್ಟಾರ್ ಬ್ಯಾಟರ್ ರೋಹಿತ್, ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಆಡಲಿದ್ದಾರೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಏಕದಿನ ಸರಣಿಗಳು ಇದೇ ನವೆಂಬರ್ 30, ಡಿಸೆಂಬರ್ 3 ಮತ್ತು 6 ರಂದು ರಾಂಚಿ, ರಾಯ್‌ಪುರ ಮತ್ತು ವಿಶಾಖಪಟ್ಟಣದ ಕ್ರೀಡಾಂಗಣದಲ್ಲಿ ನಡೆಯಲಿವೆ.
ರೋಹಿತ್ಗೆ ಬಿಸಿಸಿಐ ಕಿವಿಮಾತು
ವರದಿಗಳ ಪ್ರಕಾರ, ರೋಹಿತ್ ಶರ್ಮಗೆ ಸಲಹೆ ಕೊಟ್ಟಿರುವ ಬಿಸಿಸಿಐ, ಫಿಟ್ನೆಸ್ ಕಾಪಾಡಿಕೊಳ್ಳುವುದು ಮತ್ತು ಪ್ರದರ್ಶನದ ಮೇಲೆ ಮಾತ್ರ ಗಮನವಿರಲಿ. ನಿಮ್ಮ ಕ್ರಿಕೆಟ್ ಭವಿಷ್ಯದ ಬಗ್ಗೆ ಹರಿದಾಡುವ ವದಂತಿಗಳು, ಊಹಾಪೋಹಗಳನ್ನು ಬದಿಗಿಡಿ. ಇದ್ಯಾವುದು ನಿಮಗೆ ಅಗತ್ಯವಿಲ್ಲ. ಆರಂಭಿಕ ಬ್ಯಾಟರ್ ಆಗಿ ತಂಡದ ಪರ ಅದ್ಭುತ ಇನ್ನಿಂಗ್ಸ್ ನೀಡುವತ್ತ ಶ್ರಮಿಸಿ ಎಂಬ ಕಿವಿಮಾತನ್ನು ನೀಡಿದೆ. ಇದರೊಟ್ಟಿಗೆ, 2027ರ ಏಕದಿನ ವಿಶ್ವಕಪ್ಗೆ 'ರೋಕೊ' ಜೋಡಿಯ ಉಪಸ್ಥಿತಿ ಕುರಿತು ದೃಢ ನಿರ್ಧಾರ ಕೈಗೊಳ್ಳಲು ಶೀಘ್ರವೇ ಆಯ್ಕೆಗಾರರು ಹಾಗೂ ಟೀಮ್ ಮ್ಯಾನೇಜ್ಮೆಂಟ್ ಜತೆ ಸಭೆ ನಡೆಸಲು ಬಿಸಿಸಿಐ ಚರ್ಚಿಸಿದ್ದಾಗಿ ವರದಿಯಾಗಿದೆ,(ಏಜೆನ್ಸೀಸ್).