ಬಿಸಿಸಿಐ  
ಕ್ರಿಕೆಟ್

ಬಿಸಿಸಿಐ ಕಠಿಣ ರೂಲ್ಸ್ ಜಾರಿಗೆ​: ಬೇಕಂತಲೇ ನೋ-ಬಾಲ್​ ಎಸೆದ್ರೆ ಇಡೀ ಪಂದ್ಯದಿಂದಲೇ ಬ್ಯಾನ್!

ಪ್ರಮುಖ ಮುಖ್ಯಾಂಶಗಳು

  • ಉದ್ದೇಶಪೂರ್ವಕ 'ನೋ-ಬಾಲ್'ಗೆ ಇಡೀ ಪಂದ್ಯದಿಂದಲೇ ನಿಷೇಧ
  • ಕೊನೆಯ ಓವರ್ ಕಡ್ಡಾಯವಾಗಿ ಪೂರ್ಣಗೊಳಿಸಬೇಕು
  • ಇನ್ಮುಂದೆ ಕೊನೆಯ ಇನ್ನಿಂಗ್ಸ್ ಡ್ರಾ/ಡಿಕ್ಲೇರ್ ಅಷ್ಟು ಸುಲಭವಲ್ಲ
  • ಡ್ರಿಂಕ್ಸ್ ಬ್ರೇಕ್‌ನಲ್ಲಿ ಹೆಡ್​ ಕೋಚ್‌ಗೆ ಅನುಮತಿ
BCCI: 2026-27ರ ದೇಶೀಯ ಕ್ರಿಕೆಟ್​ಗೆ ಬಿಸಿಸಿಐ ಮುಂಚಿತವಾಗಿ ಅತ್ಯಂತ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಪಂದ್ಯಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಹಾಗೂ ಆಟದ ಶಿಸ್ತು ಕಾಪಾಡಲು ಅಧಿಕಾರಿಗಳು ಈ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.
ಅತೀ ಮುಖ್ಯವಾಗಿ ಬೌಲರ್‌ಗಳು ಉದ್ದೇಶಪೂರ್ವಕವಾಗಿ ಫ್ರಂಟ್-ಫುಟ್ ನೋ-ಬಾಲ್ ಎಸೆದರೆ ಅವರನ್ನು ತಕ್ಷಣವೇ ಆ ಪಂದ್ಯದಿಂದಲೇ ಬೌಲಿಂಗ್ ಮಾಡದಂತೆ ನಿಷೇಧಿಸುವ ಕಟ್ಟುನಿಟ್ಟಿನ ಆ್ಯಕ್ಷನ್ ತೆಗೆದುಕೊಳ್ಳಲು ಅಧಿಕಾರವನ್ನು ನೀಡಲಾಗಿದೆ. ಬಿಸಿಸಿಐನ ಈ ಹೊಸ ಹೆಜ್ಜೆ ದೇಶೀಯ ಕ್ರಿಕೆಟ್ ಅಂಗಳದಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಆಟಗಾರರಲ್ಲಿ ಹೆಚ್ಚಿನ ಶಿಸ್ತು ತರುವ ನಿರೀಕ್ಷೆಯನ್ನು ಹೊಂದಿದೆ.
ಇಲ್ಲಿಯವರೆಗೆ, ಒಬ್ಬ ಬೌಲರ್ ಉದ್ದೇಶಪೂರ್ವಕವಾಗಿ ಮುಂಭಾಗದ ಪಾದದ ನೋ-ಬಾಲ್ ಅಥವಾ ನಾನ್-ಲ್ಯಾಂಡಿಂಗ್ ಎಸೆತವನ್ನು ಬೌಲ್ ಮಾಡಿದರೆ, ಆ ಇನ್ನಿಂಗ್ಸ್‌ಗೆ ಮಾತ್ರ ಅವರನ್ನು ಬೌಲಿಂಗ್ ಮಾಡದಂತೆ ನೋಡಿಕೊಳ್ಳಲಾಗುತ್ತಿತ್ತು. ಆದರೀಗ, ಹೊಸ ನಿಯಮದ ಪ್ರಕಾರ, ಆನ್​ಫೀಲ್ಡ್ ಅಂಪೈರ್‌ಗಳು ಇಂತಹ ಕ್ರಮವನ್ನು ಉದ್ದೇಶಪೂರ್ವಕ ಎಂದು ನಿರ್ಧರಿಸಿದರೆ, ಆ ಬೌಲರ್​ಗೆ ಪಂದ್ಯದ ಪೂರ ಬೌಲಿಂಗ್ ಮಾಡಲು ಅನುಮತಿ ರದ್ದಾಗಲಿದೆ.

ಕೊನೆಯ ಇನ್ನಿಂಗ್ಸ್‌ನಲ್ಲಿ ಡಿಕ್ಲೇರ್ ಆಗಿಲ್ಲ

ಇಲ್ಲಿಯವರೆಗೆ, ಟೆಸ್ಟ್​ ಕ್ರಿಕೆಟ್​ನ ದೀರ್ಘ ಸ್ವರೂಪಗಳಲ್ಲಿ, ಕೊನೆಯ ಓವರ್‌ನಲ್ಲಿ ವಿಕೆಟ್ ಬಿದ್ದರೆ, ದಿನವು ಅಲ್ಲಿಗೆ ಕೊನೆಗೊಳ್ಳುತ್ತದೆ. ಆದರೆ, ಹೊಸ ನಿಯಮದ ಪ್ರಕಾರ, ಇನ್ಮುಂದೆ ಹಾಗೆ ಮುಗಿಯುವುದಿಲ್ಲ. ಆ ಓವರ್‌ನ ಉಳಿದ ಎಸೆತಗಳನ್ನು ಹಾಕಲೇಬೇಕು. ಕೊನೆಯ ಇನ್ನಿಂಗ್ಸ್‌ನಲ್ಲಿ ಡ್ರಾ ಘೋಷಿಸಲು ಅಥವಾ ಸ್ವೀಕರಿಸಲು ತಂಡಗಳಿಗೆ ಅವಕಾಶವಿಲ್ಲ. ಈ ನಿರ್ಧಾರವು ಪಂದ್ಯಗಳ ಸ್ಪರ್ಧಾತ್ಮಕತೆ ಮತ್ತು ವಿಶ್ವಾಸಾರ್ಹತೆಯನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಮಂಡಳಿಯು ಆಶಿಸಿದೆ.

ಡ್ರಿಂಕ್ಸ್ ಬ್ರೇಕ್, ಕೋಚ್​ ಎಂಟ್ರಿ

ದೇಶೀಯ ಏಕದಿನ ಪಂದ್ಯಗಳಲ್ಲಿ ಡ್ರಿಂಕ್ಸ್ ಬ್ರೇಕ್​ ಸಮಯದಲ್ಲಿ ಆಟಗಾರರೊಂದಿಗೆ ಮಾತನಾಡಲು ತಂಡದ ಮುಖ್ಯ ಕೋಚ್ ಈಗ ಮೈದಾನಕ್ಕೆ ಬರಲು ಅನುಮತಿಯಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅದೇ ಬದಲಾವಣೆಯನ್ನು ಜಾರಿಗೆ ತರಲು ಐಸಿಸಿ ಮುಂದಾಗಿದೆ. ಮುಂದಿನ ತಿಂಗಳು ದುಲೀಪ್ ಟ್ರೋಫಿ ಆರಂಭವಾಗಲಿದೆ. ದೇಶೀಯ ಕ್ರಿಕೆಟ್​ ಆವೃತ್ತಿಯಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಈ ಹೊಸ ನಿಯಮಗಳ ಕುರಿತು ಪಂದ್ಯದ ಅಂಪೈರ್​ಗಳಿಗೆ ಸ್ಪಷ್ಟವಾಗಿ ಅರ್ಥ ಮಾಡಿಸುತ್ತಿವೆ,(ಏಜೆನ್ಸೀಸ್).