- ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಸೋಲು
- ಬಿಸಿಸಿಐ ಕೇಂದ್ರ ಒಪ್ಪಂದಗಳಲ್ಲಿ ಬದಲಾವಣೆ ತರಲು ಮುಂದಾಗಿದೆ
- ಎ+ ಶ್ರೇಣಿ ತೆಗೆದುಹಾಕಲು ನಿರ್ಧಾರ, ರೋಕೊ ಜೋಡಿ ಬಿ ಶ್ರೇಣಿಗೆ
ನವದೆಹಲಿ: ಬಿಸಿಸಿಐ ಪ್ರತಿ ವರ್ಷ ಟೀಮ್ ಇಂಡಿಯಾ ಆಟಗಾರರಿಗೆ ಕೇಂದ್ರ ಒಪ್ಪಂದಗಳನ್ನು ನೀಡುತ್ತದೆ. ಅಂತೆಯೇ, ಈ ವರ್ಷವು ಕೊಡಲಿದೆ. ಆದರೆ, ಇಲ್ಲೊಂದು ಟ್ವಿಸ್ಟ್ ಎದುರಾಗಿದ್ದು, ಮೊದಲಿನಿಂದಲೂ ಇದ್ದ ಎ ಪ್ಲಸ್ ಗ್ರೇಡ್ ರದ್ದುಗೊಳಿಸಲು ಭಾರತೀಯ ಕ್ರಿಕೆಟ್ ಮಂಡಳಿ ನಿರ್ಧರಿಸಿದ್ದಾಗಿ ವರದಿಗಳು ಉಲ್ಲೇಖಿಸಿವೆ.
ಹಿಂಬಡ್ತಿ ಏಕೆ?
ಆಟಗಾರರ ಪ್ರದರ್ಶನ, ಅನುಭವ ಮತ್ತು ಆಡುವ ಫಾರ್ಮೆಟ್ಗಳ ಸಂಖ್ಯೆಯನ್ನು ಆಧರಿಸಿ ಬಿಸಿಸಿಐ ಒಪ್ಪಂದ ಶ್ರೇಣಿಗಳನ್ನು ನಿರ್ಧರಿಸುತ್ತದೆ. ಪ್ರಸ್ತುತ, ಇಲ್ಲಿ ಎ+, ಎ, ಬಿ ಮತ್ತು ಸಿ ಎಂಬ ನಾಲ್ಕು ಶ್ರೇಣಿಗಳಿವೆ. ಈ ಪೈಕಿ ಎ+ ಗ್ರೇಡ್ ತೆಗೆದುಹಾಕಲು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ನಿರ್ಧರಿಸಿರುವುದಾಗಿ ವರದಿಯಾಗಿದೆ. ಈ ಬದಲಾವಣೆಯಿಂದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಅವರಿಗೆ ಹಿಂಬಡ್ತಿ ಆಗುವ ಸಾಧ್ಯತೆಗಳು ಹೆಚ್ಚಿವೆ.
ಏನಿದು ಎ+ ಶ್ರೇಣಿ?
ಈಗಿರುವ ಎ+ ಶ್ರೇಣಿಯನ್ನು ಸಂಪೂರ್ಣವಾಗಿ ತೆಗೆದುಹಾಕುವಂತೆ ಬಿಸಿಸಿಐಗೆ ಅಜಿತ್ ಅಗರ್ಕರ್ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಈ ವಿಷಯವನ್ನು ಮುಂದಿನ ಅಪೆಕ್ಸ್ ಕೌನ್ಸಿಲ್‌ನಲ್ಲಿ ಚರ್ಚಿಸಲಾಗುವುದು. ಅಕಸ್ಮಾತ್, ಬಿಸಿಸಿಐ ಏನಾದರೂ ಇದನ್ನು ಅನುಮೋದಿಸಿದರೆ, ಎ, ಬಿ ಮತ್ತು ಸಿ ವಿಭಾಗಗಳು ಮಾತ್ರ ಉಳಿಯಲಿದೆ. ಪ್ರಸ್ತುತ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರಿತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಮಾತ್ರ ಎ+ ವರ್ಗದಲ್ಲಿದ್ದಾರೆ.
ಹೀಗಿದೆ ವೇತನ
ಈ ಶ್ರೇಣಿಯಲ್ಲಿರುವ ಆಟಗಾರರಿಗೆ ವರ್ಷಕ್ಕೆ 7 ಕೋಟಿ ರೂ. ವೇತನವನ್ನು ನೀಡಲಾಗುತ್ತಿದೆ. ಬಿಸಿಸಿಐ ಗ್ರೇಡ್ ಎ ಆಟಗಾರರಿಗೆ 5 ಕೋಟಿ ರೂ., ಬಿ ಆಟಗಾರರಿಗೆ 3 ಕೋಟಿ ರೂ. ಮತ್ತು ಗ್ರೇಡ್ ಸಿ ಆಟಗಾರರಿಗೆ 1 ಕೋಟಿ ರೂ. ಪಾವತಿಸುತ್ತಿದೆ. ಈಗ ಎ+ ರದ್ದಾದರೆ, ಆ ಪಟ್ಟಿಯಲ್ಲಿರುವ ಕೊಹ್ಲಿ ಮತ್ತು ರೋಹಿತ್ರನ್ನು ನೇರವಾಗಿ ಬಿ ಗ್ರೇಡ್ಗೆ ಇಳಿಸಲು ಬಿಸಿಸಿಐ ಸಜ್ಜಾಗಿದೆ ಎಂದು ಕ್ರಿಕೆಟ್ ಮಂಡಳಿ ಚಿಂತಿಸಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟೆಸ್ಟ್ ಮತ್ತು ಟಿ20 ಫಾರ್ಮೆಟ್ಗೆ ಈಗಾಗಲೇ ವಿದಾಯ ಹೇಳಿರುವ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ, ಪ್ರಸ್ತುತ ಏಕದಿನ ಪಂದ್ಯಗಳಲ್ಲಿ ಮಾತ್ರ ಆಡುತ್ತಿದ್ದಾರೆ. ಈ ಕ್ರಮದಲ್ಲಿ ದಿಗ್ಗಜ ಕ್ರಿಕೆಟಿಗರನ್ನು ಬಿ ವರ್ಗಕ್ಕೆ ವರ್ಗಾಯಿಸಲು ಬಿಸಿಸಿಐ ಚರ್ಚಿಸಿದೆ. ಆದಾಗ್ಯೂ, ಪರಿಷ್ಕೃತ ಶ್ರೇಣಿಗಳಲ್ಲಿ ಆಟಗಾರರಿಗೆ ಎಷ್ಟು ವೇತನ ನೀಡಲಾಗುತ್ತದೆ ಎಂಬುದು ಸದ್ಯದ ಮಟ್ಟಿಗೆ ಸ್ಪಷ್ಟವಾಗಿ ತಿಳಿದುಬಂದಿಲ್ಲ.
ಬಿಸಿಸಿಐ ಕೇಂದ್ರ ಗುತ್ತಿಗೆ ಆಟಗಾರರ ಪಟ್ಟಿ (2024-25)
- ಗ್ರೇಡ್ ಎ+: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ
- ಗ್ರೇಡ್ ಎ: ಮೊಹಮ್ಮದ್ ಸಿರಾಜ್, ಕೆ.ಎಲ್. ರಾಹುಲ್, ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ, ಶಮಿ, ರಿಷಭ್ ಪಂತ್
- ಗ್ರೇಡ್ ಬಿ: ಸೂರ್ಯಕುಮಾರ್ ಯಾದವ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್
- ಗ್ರೇಡ್ ಸಿ: ರಿಂಕು ಸಿಂಗ್, ತಿಲಕ್ ವರ್ಮ, ರುತುರಾಜ್ ಗಾಯಕ್ವಾಡ್, ಶಿವಂ ದುಬೆ, ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್, ಮುಖೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ರಜತ್ ಪಾಟಿದಾರ್, ಧ್ರುವ್ ಜುರೆಲ್, ಸರ್ಫರಾಜ್ ಖಾನ್, ನಿತೀಶ್ ಕುಮಾರ್ ರೆಡ್ಡಿ, ಇಶಾನ್ ಕಿಶನ್, ಅಭಿಷೇಕ್ ಶರ್ಮ, ವರುಣ್ ಚಕ್ರವರ್ತಿ,(ಏಜೆನ್ಸೀಸ್).