ಅನ್ವಿ ದ್ರಾವಿಡ್, ಆರ್ಯವೀರ್ ಸೆಹ್ವಾಗ್... ಅಂಡರ್​-19 ಏಷ್ಯಾಕಪ್ ಟೂರ್ನಿಗೆ ಟೀಮ್ ಇಂಡಿಯಾ ಪ್ರಕಟ | Team India ​  
ಕ್ರಿಕೆಟ್

ಅನ್ವಯ್​ ದ್ರಾವಿಡ್, ಆರ್ಯವೀರ್ ಸೆಹ್ವಾಗ್... ಅಂಡರ್​-19 ಏಷ್ಯಾಕಪ್ ಟೂರ್ನಿಗೆ ಟೀಮ್ ಇಂಡಿಯಾ ಪ್ರಕಟ | Team India ​

Team India: ಇದೇ ನ.5ರಿಂದ 14ರವರೆಗೆ ಓಮನ್‌ನ ರಾಜಧಾನಿ ಮಸ್ಕತ್​ನಲ್ಲಿ ನಡೆಯಲಿರುವ ಎಸಿಸಿ (ACC) ಪುರುಷರ ಅಂಡರ್-19 ಏಷ್ಯಾಕಪ್ ಟೂರ್ನಿಗೆ ಜೂನಿಯರ್ ಕ್ರಿಕೆಟ್ ಆಯ್ಕೆ ಸಮಿತಿಯು ಭಾರತೀಯ ಅಂಡರ್-19 ತಂಡವನ್ನು ಅಧಿಕೃತವಾಗಿ ಪ್ರಕಟಿಸಿದೆ.

ಈ ಟೂರ್ನಿಯಲ್ಲಿ ಲಕ್ಷ್ಯ ರೈಚಂದಾನಿ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಲಿದ್ದು, ಯಶವರ್ಧನ್ ಸಿಂಗ್ ಚೌಹಾಣ್ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ವಿಶೇಷ ಸಂಗತಿಯೆಂದರೆ, ಟೀಮ್ ಇಂಡಿಯಾದ ದಂತಕಥೆಗಳಾದ ರಾಹುಲ್ ದ್ರಾವಿಡ್ ಮತ್ತು ವೀರೇಂದ್ರ ಸೆಹ್ವಾಗ್​ ಅವರ ಪುತ್ರರಿಗೂ ತಂಡದಲ್ಲಿ ಅವಕಾಶ ನೀಡಲಾಗಿದೆ. ದ್ರಾವಿಡ್​ರ ಮಗ ಅನ್ವಯ್​ ದ್ರಾವಿಡ್ ಮತ್ತು ಸೆಹ್ವಾಗ್​ರ ಪುತ್ರ ಆರ್ಯವೀರ್​ಗೆ ಸ್ಥಾನ ಕೊಡಲಾಗಿದೆ.

ಅನ್ವಿ ದ್ರಾವಿಡ್ ಮತ್ತು ರಜತ್ ಬಘೇಲ್ ಅವರನ್ನು ವಿಕೆಟ್ ಕೀಪರ್‌ಗಳಾಗಿ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಇವರಲ್ಲದೆ, ವಿ.ಕೆ. ವಿನೀತ್, ಕುಶಾಗ್ರ ಓಜಾ, ಅರ್ಜುನ್ ರಜಪೂತ್, ಮನಲ್ ಚೌಹಾಣ್, ವಿ. ಯಶ್‌ವೀರ್, ಆರ್ಯನ್ ಸವಾಸನಿ, ಮೋಹಿತ್ ಉಲ್ವಾ, ಕಾವ್ಯ ಪಟೇಲ್, ಶವಿನ್ ವಿನೋದ್ ಮತ್ತು ಇಶಾನ್ ಸೂದ್ ಕೂಡ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಈ ಟೂರ್ನಿಯಲ್ಲಿ ಭಾರತ 'ಎ' ಗ್ರೂಪ್​ನಲ್ಲಿದೆ. ಗುಂಪಿನಲ್ಲಿ ಹಾಲಿ ಚಾಂಪಿಯನ್ ಪಾಕಿಸ್ತಾನ, ಯುಎಇ ಮತ್ತು ನೇಪಾಳ ತಂಡಗಳಿವೆ. 'ಬಿ' ಗ್ರೂಪ್​ನಲ್ಲಿ ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಮಲೇಷ್ಯಾ ಟೀಮ್​ಗಳಿವೆ. ಗ್ರೂಪ್​ ಸ್ಟೇಜ್​ನ ಮೊದಲ ಪಂದ್ಯದಲ್ಲಿ ಭಾರತವು ನವೆಂಬರ್ 6ರಂದು ತನ್ನ ಮೊದಲ ಪಂದ್ಯವನ್ನು ಆಡಲಿದ್ದು, ನೇಪಾಳವನ್ನು ಎದುರಿಸಲಿದೆ. ನಂತರ, ನ.8ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಮತ್ತು ನವೆಂಬರ್ 10ರಂದು ಯುಎಇ ಎದುರು ತನ್ನ ಗ್ರೂಪ್​ ಹಂತದ ಪಂದ್ಯಗಳನ್ನು ಆಡಲಿದೆ.

ಎರಡೂ ಗುಂಪುಗಳಿಂದ ಅಗ್ರ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು, ನವೆಂಬರ್ 12ರಂದು ನಡೆಯಲಿರುವ ಸೆಮಿಫೈನಲ್‌ ಸುತ್ತಿಗೆ ಅರ್ಹತೆ ಪಡೆಯಲಿವೆ. ವಿಜೇತರನ್ನು ನಿರ್ಧರಿಸುವ ಫೈನಲ್ ಪಂದ್ಯವು ನವೆಂಬರ್ 14, ಶನಿವಾರದಂದು ನಡೆಯಲಿದೆ. ಈ ಟೂರ್ನಿಯು ಯುವ ಭಾರತೀಯ ಕ್ರಿಕೆಟಿಗರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಲಿದೆ. ದ್ರಾವಿಡ್ ಮತ್ತು ಸೆಹ್ವಾಗ್ ಅವರ ಉತ್ತರಾಧಿಕಾರಿಗಳು ಏಷ್ಯಾಕಪ್‌ ಟೂರ್ನಿಯಲ್ಲಿ ತಂಡದ ಪರ ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂಬುದು ಸದ್ಯ ಕ್ರಿಕೆಟ್​ ಪ್ರೇಮಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಭಾರತ U19 ತಂಡ: ಲಕ್ಷ್ಯ ರಾಯಚಂದಾನಿ (ನಾಯಕ), ಆರ್ಯವೀರ್ ಸೆಹ್ವಾಗ್, ವಿ.ಕೆ. ವಿನೀತ್, ಯಶಬರ್ಧನ್ ಸಿಂಗ್ ಚೌಹಾಣ್ (ಉಪನಾಯಕ), ಕುಶಾಗ್ರ ಓಜಾ, ಅರ್ಜುನ್ ರಜಪೂತ್, ಮನಲ್ ಚೌಹಾಣ್, ಅನ್ವಿ ದ್ರಾವಿಡ್ (ವಿಕೆಟ್ ಕೀಪರ್) ರಜತ್ ಬಾಘೆಲ್ (ವಿಕೆಟ್ ಕೀಪರ್), ವಿ.ಯಶ್ವೀರ್, ಆರ್ಯನ್ ಸವಸಾನಿ, ಮೋಹಿತ್ ಉಲ್ವಾ, ಕಾವ್ಯಾ ಪಟೇಲ್, ಶವಿನ್ ವಿನೋದ್ ಮತ್ತು ಇಶಾನ್ ಸೂದ್,(ಏಜೆನ್ಸೀಸ್).