ಕೋಲ್ಕತ ತಲುಪಿದ ಭಾರತ, ದಕ್ಷಿಣ ಆಫ್ರಿಕಾ ತಂಡಗಳು; ಮೊದಲ ಟೆಸ್ಟ್​ ಸಿದ್ಧತೆಗೆ ಸಜ್ಜು 
ಕ್ರಿಕೆಟ್

ಕೋಲ್ಕತ ತಲುಪಿದ ಭಾರತ, ದಕ್ಷಿಣ ಆಫ್ರಿಕಾ ತಂಡಗಳು; ಮೊದಲ ಟೆಸ್ಟ್​ ಸಿದ್ಧತೆಗೆ ಸಜ್ಜು

ಕೋಲ್ಕತ: ಭಾರತ ಮತ್ತು ಪ್ರವಾಸಿ ದಕ್ಷಿಣ ಆಫ್ರಿಕಾ ತಂಡದ (cricket) ಆಟಗಾರರು ಸೋಮವಾರ ಕೋಲ್ಕತದಲ್ಲಿ ಒಗ್ಗೂಡಿದ್ದು, ಮಂಗಳವಾರದಿಂದ ಈಡನ್​ ಗಾರ್ಡನ್ಸ್​ನಲ್ಲಿ (Eden Gardens) ಅಭ್ಯಾಸ ಆರಂಭಿಸಲಿದ್ದಾರೆ. ಎರಡು ಪಂದ್ಯಗಳ ಟೆಸ್ಟ್​ ಸರಣಿಗೆ ಶುಕ್ರವಾರ ಇಲ್ಲಿ ಚಾಲನೆ ಸಿಗಲಿದೆ.

ಬೆಂಗಳೂರಿನಲ್ಲಿ ಭಾರತ ಎ ತಂಡದ ವಿರುದ್ಧ ದ. ಆಫ್ರಿಕಾ ಎ ಪರ ಆಡಿದ ನಾಯಕ ಟೆಂಬಾ ಬವುಮಾ ಸೋಮವಾರ ಕೊನೇ ಸದಸ್ಯರಾಗಿ ಪ್ರವಾಸಿ ತಂಡವನ್ನು ಕೂಡಿಕೊಂಡರು. ಮುಖ್ಯ ಕೋಚ್​ ಶುಕ್ರಿ ಕಾನ್ರಾಡ್​, ವೇಗಿಗಳಾದ ಕಗಿಸೊ ರಬಾಡ ಮತ್ತು ಮಾಕೋರ್ ಜಾನ್ಸೆನ್​ ಸಹಿತ ಇತರ ಕೆಲ ಸದಸ್ಯರು ಮೊದಲ ಗುಂಪಿನಲ್ಲಿ ಭಾನುವಾರ ಬೆಳಗ್ಗೆಯೇ ಕೋಲ್ಕತ ತಲುಪಿದ್ದರು.

ಆಸ್ಟ್ರೆಲಿಯಾ ಪ್ರವಾಸದ ಸೀಮಿತ ಓವರ್​ ಸರಣಿ ಆಗಮಿಸಿದ ಭಾರತ ತಂಡದ ಮುಖ್ಯ ಕೋಚ್​ ಗೌತಮ್​ ಗಂಭೀರ್​, ನಾಯಕ ಶುಭಮಾನ್​ ಗಿಲ್​, ವೇಗಿ ಜಸ್​ಪ್ರೀತ್​ ಬುಮ್ರಾ, ವಾಷಿಂಗ್ಟನ್​ ಸುಂದರ್​ ಮತ್ತು ಅಕ್ಷರ್​ ಪಟೇಲ್​ ಭಾನುವಾರ ರಾತ್ರಿ ಕೋಲ್ಕತಕ್ಕೆ ಆಗಮಿಸಿದರು. ಬೆಂಗಳೂರಿನಲ್ಲಿ ಭಾರತ ಎ ಪರ ಆಡಿದ ಕೆಎಲ್​ ರಾಹುಲ್​, ಮೊಹಮದ್​ ಸಿರಾಜ್​ ಸಹಿತ ಇತರ ಆಟಗಾರರು ಸೋಮವಾರ ಕೋಲ್ಕತ ತಲುಪಿದರು.

ಹಾಲಿ ವಿಶ್ವ ಟೆಸ್ಟ್​ ಚಾಂಪಿಯನ್​ (ICC) ದ. ಆಫ್ರಿಕಾ ವಿರುದ್ಧದ ಸರಣಿ, 2025-27ರ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ 4ನೇ ಆವೃತ್ತಿಯಲ್ಲಿ ಭಾರತಕ್ಕೆ 3ನೇ ಸವಾಲು ಆಗಿರಲಿದೆ. ಈ ಮುನ್ನ ಇಂಗ್ಲೆಂಡ್​ ವಿರುದ್ಧದ 5 ಪಂದ್ಯಗಳ ಸರಣಿಯಲ್ಲಿ 2-2 ಸಮಬಲ ಸಾಧಿಸಿದ್ದ ಭಾರತ, ತವರಿನಲ್ಲಿ ವೆಸ್ಟ್​ ಇಂಡೀಸ್​ ಎದುರು 2-0 ಅಂತರದಿಂದ ಜಯ ದಾಖಲಿಸಿತ್ತು. ಇದು ಭಾರತಕ್ಕೆ ಹಾಲಿ ವರ್ಷದ ಕೊನೇ ಟೆಸ್ಟ್​ ಸರಣಿಯೂ ಆಗಿರಲಿದೆ. ಜೂನ್​ನಲ್ಲಿ ತವರಿನಲ್ಲೇ ಅಫ್ಘಾನಿಸ್ತಾನ ವಿರುದ್ಧ ಆಡಲಿರುವ ಏಕೈಕ ಪಂದ್ಯ, ಭಾರತಕ್ಕೆ ಮುಂದಿನ ಟೆಸ್ಟ್​ ಸವಾಲು ಆಗಿರಲಿದೆ. 2026ರಲ್ಲಿ ಭಾರತ 2 ಟೆಸ್ಟ್​ ಸರಣಿಗಳನ್ನು ವಿದೇಶದಲ್ಲಿ ಆಡಲಿದೆ. ಮೊದಲಿಗೆ ಶ್ರೀಲಂಕಾ ಮತ್ತು ನಂತರ ನ್ಯೂಜಿಲೆಂಡ್​ನಲ್ಲಿ ಆಡಲಿದೆ.