ಬಾಂಗ್ಲಾ ಕ್ರಿಕೆಟ್​ ತಂಡ  
ಕ್ರಿಕೆಟ್

ಕೋತಿ ತಿಂದು ಮೇಕೆ ಮೂತಿಗೆ ಒರೆಸಿದಂತೆ ಅಂದ್ರೆ ಇದೇನಾ? ಯು-ಟರ್ನ್​ ಹೊಡೆದ ಬಾಂಗ್ಲಾಗೆ ಇದು ನಾಚಿಕೆಗೇಡು | Bangladesh

ಪ್ರಮುಖ ಮುಖ್ಯಾಂಶಗಳು

  • ಟಿ20 ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ದ ಬಾಂಗ್ಲಾದೇಶ
  • ಭಾರತದಲ್ಲಿ ಆಡುವುದು ಬೇಡ ಎಂದಿದ್ದ ಬಾಂಗ್ಲಾ ಸರ್ಕಾರ ಈಗ ಯು-ಟರ್ನ್​
  • ಆಟಗಾರರ ನಿರ್ಧಾರದಿಂದಲೇ ಟಿ20 ವಿಶ್ವಕಪ್​ ಕೈಬಿಟ್ಟಿದ್ದು ಎಂದು ಹೇಳಿಕೆ
ನವದೆಹಲಿ: ನಮ್ಮ ತಂಡ ಭಾರತಕ್ಕೆ ಪ್ರವಾಸ ಮಾಡೋದಿಲ್ಲ. ಬದಲಿಗೆ ಶ್ರೀಲಂಕಾದ ಕ್ರೀಡಾಂಗಣಗಳಲ್ಲಿ ಟಿ20 ವಿಶ್ವಕಪ್​ ಪಂದ್ಯಗಳನ್ನು ಆಡುತ್ತೇವೆ ಎಂದು ವಿವಾದ ಸೃಷ್ಟಿಸಿದ ಬಾಂಗ್ಲಾದೇಶ (Bangladesh), ಕಡೆಗೂ 2026ರ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿತು. ಇದಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತೆಗೆದುಕೊಂಡ ಕಠಿಣ ನಿರ್ಧಾರವೇ ಕಾರಣ. ಅಂದು ಸೊಕ್ಕಿನಿಂದ ನಮ್ಮ ತಂಡವನ್ನು ಭಾರತಕ್ಕೆ ಕಳುಹಿಸುವುದಿಲ್ಲ ಎಂದು ಸೊಕ್ಕಿನ ಮಾತುಗಳನ್ನಾಡಿದ್ದ ಬಾಂಗ್ಲಾ ಸರ್ಕಾರ, ಇದೀಗ ದಿಢೀರ್ ಯು-ಟರ್ನ್​ ಹೊಡೆದಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.
ಬಾಂಗ್ಲಾ ಕ್ರಿಕೆಟ್​ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸುವ ಮೂಲಕ ಅವರನ್ನು ವಿಶ್ವಕಪ್​ ಟೂರ್ನಿಯಿಂದ ಕಿತ್ತುಬಿಸಾಡಿದ ಐಸಿಸಿ, ಅವರ ಸ್ಥಾನಕ್ಕೆ ಸ್ಕಾಟ್​ಲ್ಯಾಂಡ್​ಗೆ ಅವಕಾಶ ನೀಡಿತು. ಇದು ಬಿಸಿಬಿಗೆ ಬೆಂಕಿ ಇಟ್ಟಂತಾಯಿತು. ಈ ಕುರಿತು ಐಸಿಸಿ ವಿರುದ್ಧ ತೀವ್ರ ಕಿಡಿಕಾರಿದ ಬಾಂಗ್ಲಾದೇಶ ಸರ್ಕಾರ, ಈಗ ದಿಢೀರ್​ ತನ್ನ ಹೇಳಿಕೆಯನ್ನು ತಿರುಚಿದೆ. ಟಿ20 ವಿಶ್ವಕಪ್​ ಆಡದಿರಲು ನಿರ್ಧರಿಸಿದ್ದು ಸರ್ಕಾರವಲ್ಲ. ಬದಲಿಗೆ ತಂಡದ ಆಟಗಾರರು ಎಂದು ಅಚ್ಚರಿ ಹೇಳಿಕೆಯನ್ನು ನೀಡಿದೆ.

ಕೋತಿ ತಿಂದು ಮೇಕೆ ಬಾಯಿಗೆ...

ಈ ಬಗ್ಗೆ ಮಾತನಾಡಿರುವ ಬಾಂಗ್ಲಾದೇಶ ಸರ್ಕಾರದ ಕ್ರೀಡಾ ಸಲಹೆಗಾರ ಆಸಿಫ್ ನಜ್ರುಲ್, 2026ರ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸದಿರುವ ನಿರ್ಧಾರವನ್ನು ತಂಡದ ಆಟಗಾರರು ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ತೆಗೆದುಕೊಂಡಿದೆಯೇ ಹೊರತು ಸರ್ಕಾರದ್ದಲ್ಲ ಎಂದಿದ್ದಾರೆ. ಭದ್ರತಾ ವಿಷಯದಿಂದ ನಾವು ನಮ್ಮ ತಂಡವನ್ನು ಟಿ20 ವಿಶ್ವಕಪ್‌ ಸಲುವಾಗಿ ಭಾರತಕ್ಕೆ ಕಳುಹಿಸುತ್ತಿಲ್ಲ ಎಂದಿದ್ದ ಇದೇ ಬಾಂಗ್ಲಾ ಸರ್ಕಾರ ಈಗ ತನ್ನ ಹೇಳಿಕೆಯನ್ನೇ ತಿರುಚಿದ್ದಲ್ಲದೇ, ಸಂಪೂರ್ಣ ಹೊಣೆಯನ್ನು ಬಾಂಗ್ಲಾದೇಶ ಆಟಗಾರರ ಮೇಲೆ ಹಾಕಿರುವುದು ನಿಜಕ್ಕೂ ಒಪ್ಪುವಂತದ್ದಲ್ಲ.

ಜ.22ರಂದು ಇದೇ ಸರ್ಕಾರ ಹೇಳಿದ್ದ ಮಾತುಗಳಿವು

ಬಿಸಿಬಿ ಮತ್ತು ಆಟಗಾರರನ್ನು ಕರೆದು ಸಭೆ ನಡೆಸಿದ್ದ ಬಾಂಗ್ಲಾ ಸರ್ಕಾರ, ನಾವು ಏಕೆ ನಿಮ್ಮನ್ನು ಭಾರತಕ್ಕೆ ಟಿ20 ವಿಶ್ವಕಪ್​ ಟೂರ್ನಿಗೆ ಕಳುಹಿಸುತ್ತಿಲ್ಲ ಎಂಬುದನ್ನು ವಿವರಿಸಲು. ನಮಗೆ ಐಸಿಸಿಯಿಂದ ನ್ಯಾಯ ಸಿಕ್ಕಿಲ್ಲ. ನಮ್ಮ ಮನವಿಗೆ ಅವರು ಸ್ಪಂದಿಸಿಲ್ಲ. ಮುಂದಿನ ದಿನಗಳಲ್ಲಿ ನಾವು ವಿಶ್ವಕಪ್​ ಆಡ್ತೀವೋ, ಇಲ್ಲವೋ ಗೊತ್ತಿಲ್ಲ. ಆದರೆ, ಇದು ಸಂಪೂರ್ಣ ಸರ್ಕಾರದ್ದೇ ನಿರ್ಧಾರ ಎಂದು ಅಂದಿನ ಸಭೆಯಲ್ಲಿ ಆಸಿಫ್​ ಹೇಳಿದ್ದರು. ಆದರೀಗ, ಉಲ್ಟಾ ಹೊಡೆದಿದ್ದಾರೆ,(ಏಜೆನ್ಸೀಸ್).