- ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿಗಳ ಟಾರ್ಗೆಟ್, ಹತ್ಯೆ
- ಬಿಸಿಸಿಐ ನಿರ್ಧಾರದಿಂದ ಬಾಂಗ್ಲಾದೇಶ ಕ್ರಿಕೆಟ್ ಕೆಂಡ
- ಎರಡೂ ದೇಶಗಳ ಮಧ್ಯೆ ಉದ್ವಿಗ್ನ ಪರಿಸ್ಥಿತಿ
- ಈ ವಿವಾದದಿಂದ ನರಳುತ್ತಿರುವುದು ಕ್ರಿಕೆಟಿಗರೆಂದ ಬಾಂಗ್ಲಾ ಆಟಗಾರ
ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿಯನ್ನು ಭೀಕರವಾಗಿ ಹತ್ಯೆಗೈದ ಪ್ರಕರಣ ಸೇರಿದಂತೆ ಹಿಂದೂಗಳನ್ನು ಗುರಿಯಾಗಿಸಿಕೊಂಡಿರುವ ಬಾಂಗ್ಲಾದೇಶ ವಿರುದ್ಧ ಭಾರತ ಸಿಡಿದೆದ್ದಿದೆ. ಈ ಬಿಸಿ ಕ್ರೀಡೆಗೂ ತಟ್ಟಿದ್ದು, 2026ರ ಐಪಿಎಲ್ನಿಂದ ಬಾಂಗ್ಲಾ ವೇಗಿ ಮುಸ್ತುಫಿಜುರ್ ರೆಹಮಾನ್ರನ್ನು ಕೆಕೆಆರ್ ಕೈಬಿಟ್ಟಿತು. ಬಿಸಿಸಿಐ ತೆಗೆದುಕೊಂಡ ಈ ನಿರ್ಧಾರದಿಂದ ಸದ್ಯ ಬಾಂಗ್ಲಾದೇಶ ಕ್ರಿಕೆಟ್ ಕೆರಳಿದ್ದು, ಫೆಬ್ರವರಿ 7ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ ಪಂದ್ಯಗಳನ್ನು ಭಾರತದಿಂದ ಹೊರಗಾಡಿಸಿ ಎಂದು ಐಸಿಸಿ ಮೊರೆ ಹೋಗಿದೆ. ಈ ಮಧ್ಯೆ, ನೇರವಾಗಿ ವಿವಾದಕ್ಕೆ ಸಂಬಂಧಿಸಿದಂತೆ ತುಟಿಬಿಚ್ಚಿರುವ ಬಾಂಗ್ಲಾ ಕ್ರಿಕೆಟಿಗ, ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಮುಸ್ತುಫಿಜರ್ರನ್ನು 2026ರ ಐಪಿಎಲ್ನಿಂದ ಕೈಬಿಟ್ಟಿದ್ದೇ ತಡ, ಬಿಸಿಬಿಯಲ್ಲಿ ಆಕ್ರೋಶಗಳು ಭುಗಿಲೆದ್ದಿವೆ. ತಮ್ಮ ಆಟಗಾರನನ್ನೇ ಟಿ20 ಲೀಗ್ನಿಂದ ಹೊರಗಿಟ್ಟ ಬಿಸಿಸಿಐ ನಿರ್ಧಾರದಿಂದ ಕೆರಳಿರುವ ಬಾಂಗ್ಲಾ ಕ್ರಿಕೆಟ್ ಅಧಿಕಾರಿಗಳು, ಎರಡನೇ ಬಾರಿಗೆ ಐಸಿಸಿಗೆ ಪತ್ರ ಬರೆದಿದ್ದಾರೆ. ನಮ್ಮ ಆಟಗಾರರಿಗೆ ಭದ್ರತೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಟಿ20 ವಿಶ್ವಕಪ್ ಟೂರ್ನಿಯ ನಮ್ಮ ಪಂದ್ಯಗಳನ್ನು ಭಾರತದಿಂದ ಹೊರಗೆ ಆಡಿಸಿ ಎಂದು ಬಿಸಿಬಿ ಮನವಿ ಸಲ್ಲಿಸಿದೆ. ವಿವಾದದ ನಡುವೆಯೇ ಆಲ್‌ರೌಂಡರ್ ಮಹೇದಿ ಹಸನ್ ಪ್ರತಿಕ್ರಿಯಿಸಿ, ಎರಡೂ ಕ್ರಿಕೆಟ್ ಮಂಡಳಿಯ ಜಗಳದಲ್ಲಿ ಆಟಗಾರರು ಬಳಲುತ್ತಿದ್ದಾರೆ ಎಂದು ಹೇಳಿದ್ದಾರೆ.
ಟಿ20 ವಿಶ್ವಕಪ್‌ಗೆ ಆಯ್ಕೆಯಾದ 15 ಆಟಗಾರರ ತಂಡದಲ್ಲಿ ಮಹೇದಿ ಹಸನ್ ಕೂಡ ಒಬ್ಬರು. 'ಡೈಲಿ ಸ್ಟಾರ್' ಜತೆ ಮಾತಾಡಿರುವ ಹಸನ್, "ಇದೆಲ್ಲವೂ ಮ್ಯಾನೇಜ್ಮೆಂಟ್ ಸಮಸ್ಯೆಗಳು. ಅಧಿಕಾರಿಗಳೇ ಇದನ್ನು ಡೀಲ್ ಮಾಡಬೇಕೇ ವಿನಃ ಆಟಗಾರರಿಗೆ ಸಮಸ್ಯೆ ತಂದಿಡುವುದಲ್ಲ. ಆಟಗಾರರ ಕೆಲಸವೇನಿದ್ದರೂ ಮೈದಾನಕ್ಕೆ ಬಂದು ಆಡುವುದಷ್ಟೇ. ಕ್ರಿಕೆಟಿಗರನ್ನು ಮಾರ್ಸ್ಗೆ ಕಳುಹಿಸಿದ್ರೂ, ಅವರಾಡುವುದು ಆಟವನ್ನಷ್ಟೇ. ನನ್ನ ಪ್ರಕಾರ, ಈ ವಿಚಾರದಲ್ಲಿ ಯಾರಿಗೂ ಯಾವುದೇ ಅನುಮಾನವಿಲ್ಲ" ಎಂದಿದ್ದಾರೆ,(ಏಜೆನ್ಸೀಸ್).