ಬಾಂಗ್ಲಾ ಕ್ರಿಕೆಟ್​ ತಂಡ  
ಕ್ರಿಕೆಟ್

ಕೋಪದಲ್ಲಿ ಕೂಯ್ದ ಮೂಗು ಮತ್ತೆ ಬಂದಿತೇ? ಟಿ20 ವಿಶ್ವಕಪ್​ ಆಡೋದಿಲ್ಲ ಎಂದ ಬಿಸಿಬಿಗೆ ಈಗ ಮತ್ತೊಂದು ಸಂಕಷ್ಟ!

ಪ್ರಮುಖ ಮುಖ್ಯಾಂಶಗಳು

  • ಐಸಿಸಿ ತಮ್ಮ ಮನವಿ ತಿರಸ್ಕರಿಸಿದ್ದಕ್ಕೆ ಬಿಸಿಬಿ ಕಟು ನಿರ್ಧಾರ
  • ಕಡೆಗೂ ನಾವು ಟೂರ್ನಿಯಲ್ಲಿ ಆಡುವುದಿಲ್ಲ ಎಂದ ಬಿಸಿಬಿ
  • ಟಿ20 ವಿಶ್ವಕಪ್‌ನಿಂದ ಹೊರಗುಳಿದ ಬಾಂಗ್ಲಾ ಕ್ರಿಕೆಟ್​ಗೆ ಬರೋಬ್ಬರಿ 240 ಕೋಟಿ ರೂ.ಗೂ ಅಧಿಕ ಆರ್ಥಿಕ ನಷ್ಟ!
ಢಾಕಾ: ಎರಡೂ ದೇಶಗಳ ನಡುವಿನ ಉದ್ವಿಗ್ನತೆ ಇದೀಗ ಕ್ರೀಡೆಗೂ ತಟ್ಟಿದ್ದು, ಫೆಬ್ರವರಿ 7ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ನಾವು ಪಾಲ್ಗೊಳ್ಳುವುದಿಲ್ಲ ಎಂದು ಬಾಂಗ್ಲಾದೇಶ ಕ್ರಿಕೆಟ್​ ಮಂಡಳಿ ತಿಳಿಸಿದೆ. ಈ ಕಟು ನಿರ್ಧಾರ ಐಸಿಸಿ ತಮ್ಮ ಮನವಿಯನ್ನು ತಿರಸ್ಕರಿಸಿದ ಬೆನ್ನಲ್ಲೇ ಹೊರಬಿದ್ದಿರುವುದು ಗಮನಾರ್ಹ.
ಭಾರತದಲ್ಲಿ ನಮ್ಮ ಆಟಗಾರರಿಗೆ ಸುರಕ್ಷತೆ ಇಲ್ಲ. ಹೀಗಾಗಿ, ಟಿ20 ವಿಶ್ವಕಪ್​ನಲ್ಲಿ ನಮ್ಮ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿಸಬೇಕು ಎಂದು ಬಿಸಿಬಿ ಐಸಿಸಿಗೆ ಪತ್ರದ ಮುಖೇನ ಮನವಿ ಮಾಡಿಕೊಂಡಿತ್ತು. ಇದಕ್ಕೆ ಸ್ಪಂದಿಸದ ಐಸಿಸಿ, ತಿರಸ್ಕರಿಸುವ ಮೂಲಕ ಅಪಾರ ನಿರೀಕ್ಷೆಯಲ್ಲಿದ್ದ ಬಿಸಿಬಿಗೆ ಭಾರೀ ಮುಖಭಂಗವನ್ನೇ ಉಂಟುಮಾಡಿತು. ಹೀಗಾಗಿಯೇ, ಭಾರತಕ್ಕೆ ನಾವು ಪ್ರವಾಸ ಮಾಡಲ್ಲ. ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಭಾಗವಹಿಸುವುದಿಲ್ಲ ಎಂದು ಬಾಂಗ್ಲಾ ತಿಳಿಸಿತು. ಆದರೀಗ, ಅದೊಂದು ನಿರ್ಧಾರದಿಂದ ಬಿಸಿಬಿಗೆ ದೊಡ್ಡ ನಷ್ಟವೇ ಉಂಟಾಗಲಿದೆ ಎಂದು ಪಿಟಿಐ ವರದಿ ಉಲ್ಲೇಖಿಸಿದೆ.

240 ಕೋಟಿ ರೂ.

ಮಧ್ಯಂತರ ಸರ್ಕಾರದ ನಿರ್ಧಾರವು ಇದೀಗ ಬಾಂಗ್ಲಾದೇಶ ಕ್ರಿಕೆಟ್‌ಗೆ ಆರ್ಥಿಕವಾಗಿ ದೊಡ್ಡ ಹೊಡೆತ ನೀಡುವ ಸಾಧ್ಯತೆಯಿದೆ. ಕೊನೆಯದಾಗಿ ಒಮ್ಮೆ ತಮ್ಮ ನಿರ್ಧಾರದಲ್ಲಿ ಬದಲಾವಣೆ ತರಲು ಚಿಂತಿಸುತ್ತಿರುವ ಬಾಂಗ್ಲಾದೇಶ, ಈಗಾಗಲೇ ಐಸಿಸಿಗೆ ತಿಳಿಸಿರುವ ನಿರ್ಧಾರಕ್ಕೆ ಬದ್ಧವಾಗಿ, ಟಿ20 ವಿಶ್ವಕಪ್‌ನಿಂದ ಹಿಂದೆ ಸರಿದರೆ, ಐಸಿಸಿಯಿಂದ ವಾರ್ಷಿಕವಾಗಿ ಪಡೆಯುವ ಸುಮಾರು 27 ಮಿಲಿಯನ್ ಡಾಲರ್ (ಸುಮಾರು 240 ಕೋಟಿ ರೂ.) ಕಳೆದುಕೊಳ್ಳುವುದು ಖಚಿತ ಎನ್ನಲಾಗಿದೆ.  
ಇದಲ್ಲದೆ, ಪ್ರಸಾರ ಹಕ್ಕುಗಳು, ಪ್ರಾಯೋಜಕತ್ವಗಳು ಮತ್ತು ಇತರ ವಾಣಿಜ್ಯ ಆದಾಯವನ್ನು ಸೇರಿಸಿದರೆ, ಇಡೀ ಹಣಕಾಸು ವರ್ಷದಲ್ಲಿ, ಈ ನಷ್ಟವು ಶೇ.60 ಅಥವಾ ಅದಕ್ಕಿಂತ ಹೆಚ್ಚು ಇರಬಹುದು ಎಂದು ಅಂದಾಜಿಸಲಾಗಿದೆ. ಈ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಸಂಬಂಧಗಳ ಮೇಲೆ ಇನ್ನಷ್ಟು ಪರಿಣಾಮ ಬೀರುವ ಸಾಧ್ಯತೆಯಿದೆ. 

ಬಾಂಗ್ಲಾ ಇಲ್ಲವಾದ್ರೆ ಈ ತಂಡಗಳಿಗೆ ಅವಕಾಶ?

ಪ್ರಸ್ತುತ, ಕೊನೆಯ ಬಾರಿಗೆ ಸಮಯ ತೆಗೆದುಕೊಂಡಿರುವ ಬಾಂಗ್ಲಾದೇಶ ಕ್ರಿಕೆಟ್​ ಮಂಡಳಿ, ತಮ್ಮ ನಿರ್ಧಾರವೇ ಅಂತಿಮ ಎಂದು ಮತ್ತೊಮ್ಮೆ ಹೇಳಿದರೆ, ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅವರ ಸ್ಥಾನಕ್ಕೆ ಜಿಂಬಾಬ್ವೆ ಅಥವಾ ಸ್ಕಾಟ್​ಲ್ಯಾಂಡ್​ ತಂಡಗಳ ಪೈಕಿ ಯಾವುದಾದರೂ ಒಂದಕ್ಕೆ ಅವಕಾಶ ನೀಡುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ,(ಏಜೆನ್ಸೀಸ್).