ಬಾಂಗ್ಲಾ ಕ್ರಿಕೆಟ್ ತಂಡ 
ಕ್ರಿಕೆಟ್

ಬಿಸಿಸಿಐ ವಿರುದ್ಧ ತಿರುಗಿಬಿದ್ದ ಬಾಂಗ್ಲಾ ಕ್ರಿಕೆಟ್​ಗೆ ಬಿಗ್ ಶಾಕ್​! ಇನ್ಮುಂದೆ ಜನಪ್ರಿಯ ಬ್ರ್ಯಾಂಡ್​ನ ಪ್ರಾಯೋಜಕತ್ವ ಡೌಟ್​ | Bangaldesh

ಪ್ರಮುಖ ಮುಖ್ಯಾಂಶಗಳು

  • ಬಿಸಿಸಿಐ ವಿರುದ್ಧ ತಿರುಗಿಬಿದ್ದ ಬಾಂಗ್ಲಾ ಕ್ರಿಕೆಟ್​ಗೆ ತಕ್ಕ ಪಾಠ ಕಲಿಸಲು ನಿರ್ಧಾರ
  • ಹೆಸರಾಂತ ಬ್ರ್ಯಾಂಡ್​ನಿಂದ ಇನ್ಮುಂದೆ ಪ್ರಾಯೋಜಕತ್ವ ಸ್ಥಗಿತ
  • ತಮ್ಮ ದೇಶದಲ್ಲಿ ಐಪಿಎಲ್ ಪ್ರಸಾರಕ್ಕೆ ತಡೆ ನೀಡಲು ಬಾಂಗ್ಲಾ ಸರ್ಕಾರ ಆದೇಶ
ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿಯನ್ನು ಭೀಕರವಾಗಿ ಹತ್ಯೆಗೈದ ಪ್ರಕರಣ ಸೇರಿದಂತೆ ಹಿಂದೂಗಳನ್ನು ಗುರಿಯಾಗಿಸಿಕೊಂಡಿರುವ ಬಾಂಗ್ಲಾದೇಶ ವಿರುದ್ಧ ಭಾರತ ಸಿಡಿದೆದ್ದಿದೆ. ಈ ಬಿಸಿ ಕ್ರೀಡೆಗೂ ತಟ್ಟಿದ್ದು, 2026ರ ಐಪಿಎಲ್​ನಿಂದ ಬಾಂಗ್ಲಾ ವೇಗಿ ಮುಸ್ತುಫಿಜುರ್​ ರೆಹಮಾನ್​ರನ್ನು ಕೈಬಿಡುವಂತೆ ಬಿಸಿಸಿಐ ಸೂಚಿಸಿತು. ಇದರಿಂದ ಕೆರಳಿರುವ ಬಿಸಿಬಿ, ಭಾರತೀಯ ಕ್ರಿಕೆಟ್​ ವಿರುದ್ಧ ತೀವ್ರ ಕಿಡಿಕಾರಿದೆ. ಬಿಸಿಸಿಐ ವಿರುದ್ಧ ತಿರುಗಿಬಿದ್ದ ಬಾಂಗ್ಲಾಗೆ ತಕ್ಕ ಪಾಠ ಕಲಿಸಲು ಮುಂದಾಗಿರುವ ಹೆಸರಾಂತ ಭಾರತೀಯ ಬ್ರ್ಯಾಂಡ್​ವೊಂದು ಇದೀಗ ತನ್ನ ಪ್ರಾಯೋಜಕತ್ವ ನಿಲ್ಲಿಸಲು ನಿರ್ಧರಿಸಿದೆ.
ಬಿಸಿಸಿಐ ವಿರುದ್ಧ ಬಾಂಗ್ಲಾ ಕೆಂಡಾಮಂಡಲ   
ಇಲ್ಲಿಯವರೆಗೆ ಬಾಂಗ್ಲಾದೇಶ ಕ್ರಿಕೆಟಿಗರನ್ನು ಪ್ರಾಯೋಜಿಸುತ್ತಿರುವ ಭಾರತ ಮೂಲದ ಕಂಪನಿ ಎಸ್‌ಜಿ, ಇನ್ಮುಂದೆ ತನ್ನ ಪ್ರಾಯೋಜಕತ್ವವನ್ನು ಬಾಂಗ್ಲಾಗೆ ಮುಂದುವರಿಸದಿರಲು ನಿರ್ಧರಿಸಿದೆ ಎನ್ನಲಾಗಿದೆ. ಲಿಟನ್ ದಾಸ್, ಮೊಮಿನುಲ್ ಹಕ್ ಮತ್ತು ಯಾಸಿರ್ ಅಲಿ ಅವರಂತಹ ಬಾಂಗ್ಲಾದೇಶದ ಸ್ಟಾರ್ ಆಟಗಾರರಿಗೆ ಸ್ಪಾನ್ಸರ್​ಶಿಪ್​ ನೀಡುತ್ತಿದ್ದ ಸಂಸ್ಥೆ, ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಕೊಡುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿದೆ ಎಂದು ವರದಿಗಳು ಉಲ್ಲೇಖಿಸಿವೆ. 

ಇದೇ ಇಷ್ಟಕ್ಕೆಲ್ಲ ಕಾರಣ

ಎಸ್‌ಜಿ ತಮ್ಮ ಒಪ್ಪಂದಗಳನ್ನು ಇನ್ನೂ ನವೀಕರಿಸದಿರುವ ನಿರ್ಧಾರದ ಬಗ್ಗೆ ಆಟಗಾರರಿಗೆ ಅಧಿಕೃತವಾಗಿ ತಿಳಿಸಿಲ್ಲ. ಆದರೆ, ಏಜೆಂಟರು ಮಾತ್ರ ಈ ಮಹತ್ವದ ಬೆಳವಣಿಗೆಯ ಬಗ್ಗೆ ಸುಳಿವು ನೀಡಿದ್ದಾರೆ. ಪ್ರಾಯೋಜಕತ್ವದಿಂದ ಹಿಂದೆ ಸರಿಯಲು ಕಾರಣ ಒಂದೇ. ಅದು ಬಾಂಗ್ಲಾದೇಶ ಬಿಸಿಸಿಐ ವಿರುದ್ಧ ತಿರುಗಿಬಿದ್ದದ್ದು. ಕಳೆದ ಕೆಲವು ಸಮಯದಿಂದ ಬಾಂಗ್ಲಾದೇಶದಲ್ಲಿ ರಾಜಕೀಯ ಅನಿಶ್ಚಿತತೆ ಮುಂದುವರೆದಿದೆ. ಈ ಸಂದರ್ಭದಲ್ಲಿ, ಹಿಂದೂಗಳ ಮೇಲೆ ಸರಣಿ ದಾಳಿಗಳು ನಡೆಯುತ್ತಿರುವುದು ಇಷ್ಟಕ್ಕೆಲ್ಲ ಕಾರಣ.

ಬಾಂಗ್ಲಾದಲ್ಲಿ ಐಪಿಎಲ್​ ಪ್ರಸಾರಕ್ಕೆ ತಡೆ 

ಭಾರತದ ನಿರ್ಧಾರದಿಂದ ಸಿಡಿಮಿಡಿಗೊಂಡಿರುವ ಬಾಂಗ್ಲಾದೇಶ ಸರ್ಕಾರ, ತನ್ನ ದೇಶದಲ್ಲಿ ಐಪಿಎಲ್ ಪ್ರಸಾರವನ್ನು ನಿಷೇಧಿಸಲು ಆದೇಶಗಳನ್ನು ಹೊರಡಿಸಿದೆ. ಅದೇ ಸಮಯದಲ್ಲಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಐಸಿಸಿಗೆ ಪತ್ರ ಬರೆದಿದ್ದು, ಭದ್ರತಾ ಕಾರಣಗಳಿಂದಾಗಿ ನಾವು ಭಾರತದಲ್ಲಿ ಪಂದ್ಯಗಳನ್ನಾಡಲು ಸಾಧ್ಯವಿಲ್ಲ. ಇದರ ಬದಲಿಗೆ ಶ್ರೀಲಂಕಾದಲ್ಲಿ ನಮ್ಮ ಪಂದ್ಯಗಳನ್ನು ಸ್ಥಳಾಂತರಿಸುವಂತೆ ಕೋರಿದೆ. ಆದಾಗ್ಯೂ, ಬಾಂಗ್ಲಾದೇಶದ ಎರಡನೇ ಮನವಿಗೆ ಐಸಿಸಿ ಇನ್ನೂ ಉತ್ತರಿಸಿಲ್ಲ,(ಏಜೆನ್ಸೀಸ್).