ASIAN GAMES 2026: ಆಡದೆ ಉಪಾಂತ್ಯಕ್ಕೇರಿ ಬಾಂಗ್ಲಾ; ಭಾರತಕ್ಕೆ ಜಪಾನ್ ಎದುರಾಳಿ
ಐಚಿ-ನಗೋಯಾ: ಏಷ್ಯನ್ ಗೇಮ್ಸ್ (Asian Games) 20ನೇ ಆವೃತ್ತಿಯಲ್ಲಿ ಗುರುವಾರ ಆರಂಭಗೊಂಡ ಮಹಿಳಾ ಕ್ರಿಕೆಟ್ ಸ್ಪರ್ಧೆಯಲ್ಲಿ ಬಾಂಗ್ಲಾದೇಶ ತಂಡ ಮಳೆಯಿಂದಾಗಿ ಕ್ವಾರ್ಟರ್ಫೈನಲ್ ಪಂದ್ಯ ಆಡದೆಯೇ ಸೆಮಿಫೈನಲ್ ಪ್ರವೇಶಿಸಿದ್ದರೆ, ಪಾಕಿಸ್ತಾನ ತಂಡ ಥಾಯ್ಲೆಂಡ್ ಎದುರು ಪರದಾಡಿದರೂ, ಉಪಾಂತ್ಯಕ್ಕೇರುವಲ್ಲಿ ಯಶಸ್ವಿಯಾಯಿತು.
ಒದ್ದೆ ಮೈದಾನದಿಂದಾಗಿ ಬಾಂಗ್ಲಾ-ಚೀನಾ ನಡುವಿನ ಪಂದ್ಯದ ಟಾಸ್ ಕೂಡ ನಡೆಯಲಿಲ್ಲ. ಆದರೆ ಉನ್ನತ ಶ್ರೇಯಾಂಕದ ಆಧಾರದಲ್ಲಿ ಬಾಂಗ್ಲಾ ಉಪಾಂತ್ಯಕ್ಕೇರಿದರೆ, ಚೀನಾ ಮೈದಾನಕ್ಕಿಳಿಯದೆ ಹೊರಬಿದ್ದಿತು. 8ರ ಘಟ್ಟದ ಇನ್ನೊಂದು ಪಂದ್ಯ ಮಳೆಯಿಂದಾಗಿ 11 ಓವರ್ಗಳಿಗೆ ಕಡಿತಗೊಂಡಿತು. ಥಾಯ್ಲೆಂಡ್ 4 ವಿಕೆಟ್ಗೆ 91 ರನ್ ಗಳಿಸಿದರೆ, 77 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ತಿಣುಕಾಡಿದ ಪಾಕ್ ಅಂತಿಮವಾಗಿ 10.4 ಓವರ್ಗಳಲ್ಲಿ 7 ವಿಕೆಟ್ಗೆ 92 ರನ್ ಗಳಿಸಿ ಜಯಿಸಿತು.
ಭಾರತಕ್ಕೆ ಇಂದು ಜಪಾನ್ ಸವಾಲು
ಭಾರತ ಮಹಿಳಾ ತಂಡ ಶುಕ್ರವಾರ ಆತಿಥೇಯ ಜಪಾನ್ ವಿರುದ್ಧ ಕ್ವಾರ್ಟರ್ಫೈನಲ್ ಪಂದ್ಯ ಆಡಲಿದೆ. 8ರ ಘಟ್ಟದ ಇನ್ನೊಂದು ಪಂದ್ಯದಲ್ಲಿ ಶ್ರೀಲಂಕಾ-ಮಲೇಷ್ಯಾ ಮುಖಾಮುಖಿ ಆಗಲಿವೆ. ಇತ್ತೀಚೆಗೆ ಏಷ್ಯಾಕಪ್ ಗೆದ್ದ ವಿಶ್ವಾಸದಲ್ಲಿರುವ ಹರ್ಮಾನ್ಪ್ರೀತ್ ಕೌರ್ ಪಡೆ, ಗೆಲುವಿನ ಓಟ ಮುಂದುವರಿಸುವ ನಿರೀಕ್ಷೆ ಇದೆ. ಸತತ 2ನೇ ಬಾರಿ ಚಿನ್ನದ ಪದಕ ಬೇಟೆಯಾಡುವ ಅಭಿಯಾನವನ್ನು ಭಾರತದ ಮಹಿಳೆಯರು ಭರ್ಜರಿಯಾಗಿ ಆರಂಭಿಸುವ ಹಂಬಲದಲ್ಲಿದ್ದಾರೆ. ಗಾಯದಿಂದಾಗಿ ಏಷ್ಯಾಕಪ್ ತಪ್ಪಿಸಿಕೊಂಡಿದ್ದ ಕನ್ನಡತಿ ಶ್ರೇಯಾಂಕಾ ಪಾಟೀಲ್ ಇದೀಗ ಫಿಟ್ ಆಗಿ ಏಷ್ಯಾಡ್ ತಂಡ ಕೂಡಿಕೊಂಡಿದ್ದಾರೆ. ಇದು ಭಾರತದ ಬೌಲಿಂಗ್ ವಿಭಾಗಕ್ಕೆ ಹೆಚ್ಚಿನ ಬಲ ತಂದಿದೆ. ಸ್ಮೃತಿ ಮಂದನಾ-ಶೆಫಾಲಿ ವರ್ಮ ಭರ್ಜರಿ ಫಾರ್ಮ್ ಭಾರತಕ್ಕೆ ನೆರವಾಗಿದೆ. ಆದರೆ ನಾಯಕಿ ಹರ್ಮಾನ್ಪ್ರೀತ್ ಕೌರ್ ಮತ್ತು ರಿಚಾ ಘೋಷ್ ರನ್ಬರ ಕಳವಳ ಸೃಷ್ಟಿಸಿದೆ. ಇನ್ನು ದೀಪ್ತಿ ಶರ್ಮ ಆಲ್ರೌಂಡ್ ನಿರ್ವಹಣೆಯೊಂದಿಗೆ ಮಿಂಚುತ್ತಿದ್ದಾರೆ.
ನೇರಪ್ರಸಾರ: ಸೋನಿ ಸ್ಪೋರ್ಟ್ಸ್, ಸೋನಿ ಲಿವ್
ಟೆಕ್ಬಾಲ್ನಲ್ಲಿ ಭಾರತಕ್ಕೆ ನಿರಾಸೆ
ಟೆಕ್ಬಾಲ್ ಸ್ಪರ್ಧೆಯೊಂದಿಗೆ ಏಷ್ಯನ್ ಗೇಮ್ಸ್ ಅಧಿಕೃತ ಆರಂಭಕ್ಕೆ 2 ದಿನ ಮೊದಲೇ ಭಾರತದ ಅಭಿಯಾನ ಶುರುವಾಗಿದೆ. ಆದರೆ ಭಾರತದ ಡಕ್ಲಾನ್ ಮಾರ್ಷನ್ ಗೊನ್ಸಾಲ್ವೆಸ್ ಮತ್ತು ಮೊಹಮದ್ ಅನಾಸ್ ಇಮ್ರಾನ್ ಬೆಗ್ ಜೋಡಿ ಪುರುಷರ ಡಬಲ್ಸ್ ಟೆಕ್ಬಾಲ್ ಸ್ಪರ್ಧೆಯ ಗ್ರೂಪ್ ವಿಭಾಗದಲ್ಲೇ ಎರಡೂ ಪಂದ್ಯ ಸೋತು ನಿರಾಸೆ ಅನುಭವಿಸಿದೆ. ಬಿ ಗುಂಪಿನಲ್ಲಿದ್ದ ಭಾರತದ ಜೋಡಿ ವಿಯೇಟ್ನಾಂ ವಿರುದ್ಧ ಮತ್ತು ದಣ ಕೊರಿಯಾ ವಿರುದ್ಧ 0-2ರಿಂದ ಪರಾಭವಗೊಂಡು ಪದಕ ಸ್ಪರ್ಧೆಯಿಂದ ಹೊರಬಿದ್ದಿತು. ಟೆಕ್ಬಾಲ್ ಎಂಬುದು ುಟ್ಬಾಲ್ ಮತ್ತು ಟೇಬಲ್ ಟೆನಿಸ್ ಅಂಶಗಳನ್ನು ಸಂಯೋಜಿಸಿ ಬಾಗಿದ ಮೇಜಿನ ಮೇಲೆ ಆಡಲಾಗುವ ಒಂದು ಚೆಂಡಿನ ಕ್ರೀಡೆಯಾಗಿದೆ. ಇದು ಏಷ್ಯಾಡ್ಗೆ ಈ ಬಾರಿ ಹೊಸದಾಗಿ ಸೇರ್ಪಡೆಯಾಗಿರುವ 6 ಕ್ರೀಡೆಗಳಲ್ಲಿ ಒಂದಾಗಿದೆ.