ವೈಭವ್ ಸೂರ್ಯವಂಶಿ ಮತ್ತು ಶ್ರೀಲಂಕಾ ಆಟಗಾರನ ಮಧ್ಯೆ ತಳ್ಳಾಟ
- ಶ್ರೀಲಂಕನ್ ಆಟಗಾರನೊಂದಿಗೆ ವೈಭವ್ ಸೂರ್ಯವಂಶಿ ಜಗಳ
- ಮೈದಾನದಲ್ಲಿ ನಡೆದ ಹೈಡ್ರಾಮಾ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
- ವೈಭವ್ನನ್ನು ಒಂದು ಮ್ಯಾಚ್ನಿಂದ ಬ್ಯಾನ್ ಮಾಡಿ ಎಂದ ಶ್ರೀಲಂಕನ್
Vaibhav Sooryavanshi: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್, 15 ವರ್ಷದ ವೈಭವ್ ಸೂರ್ಯವಂಶಿ ಕಂಡರೆ ಕ್ರಿಕೆಟ್ ಜಗತ್ತಿಗೆ ಅದೇನೋ ವಿಶೇಷ ಅಭಿಮಾನ, ಪ್ರೀತಿ. ಹೀಗಿರುವಾಗ, ತ್ರಿಕೋನ ಸರಣಿಯ ಭಾಗವಾಗಿ ದಂಬುಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತ 'ಎ' ಮತ್ತು ಶ್ರೀಲಂಕಾ 'ಎ' ನಡುವಿನ ಪಂದ್ಯದಲ್ಲಿ ಶ್ರೀಲಂಕಾ ಆಟಗಾರ ಮತ್ತು ವೈಭವ್ ಮಧ್ಯೆ ನಡೆದ ತಳ್ಳಾಟ ಸದ್ಯ ವಿವಾದಕ್ಕೆ ಗುರಿಯಾಗಿದೆ.
ತನ್ನ ಅಮೋಘ ಮತ್ತು ಬಿರುಸಿನ ಬ್ಯಾಟಿಂಗ್ಗೆ ಹೆಸರುವಾಸಿಯಾಗಿರುವ ವೈಭವ್ ಸೂರ್ಯವಂಶಿ, ಪಂದ್ಯದಲ್ಲಿ ಸೋತ ಬೇಸರದಿಂದ ಪೆವಿಲಿಯನ್ಗೆ ಹೋಗುವಾಗ ಶ್ರೀಲಂಕಾ ಆಟಗಾರ ಹೋಗು ಮನೆಗೆ ಹೋಗು ಎಂಬ ಮಾತಿಗೆ ಏಕಾಏಕಿ ಕೆರಳಿದರು. ಈ ವಿಚಾರಕ್ಕೆ ಪೆವಿಲಿಯನ್ ಕಡೆ ಹೋಗುತ್ತಿದ್ದ ಸೂರ್ಯವಂಶಿ, ವಾಪಾಸ್ ಬಂದ ಆತನ ಜೊತೆ ವಾಗ್ವಾದಕ್ಕಿಳಿದರು. ಇದೇ ವೇಳೆ, ಮಾತಿಗೆ ಮಾತು ಬೆಳೆದು ಇಬ್ಬರೂ ತಳ್ಳಾಡಿದ್ದಾರೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ನೆಟ್ಟಿಗರ ಅಸಮಾಧಾನಕ್ಕೆ ಕಾರಣವಾಗಿದೆ.
ಅನೇಕರು ಈ ಘಟನೆಯ ವಿಡಿಯೋ ನೋಡಿ ಬಳಿಕ ಇಲ್ಲಿ ವೈಭವ್ ಅವರದ್ದೇ ತಪ್ಪು. ಅವರೇ ಮೊದಲು ನೂಕಿದ್ದು ಎಂದೆಲ್ಲ ದೂರುತ್ತಿದ್ದಾರೆ. ಅಸಲಿಗೆ ಅದೇ ಇಲ್ಲಿ ತಪ್ಪು. ದೃಶ್ಯವನ್ನು ಸರಿಯಾಗಿ ನೋಡಿದರೆ, ಸುಮ್ಮನೆ ಹೋಗುತ್ತಿದ್ದ ಸೂರ್ಯವಂಶಿಯನ್ನು ಕೆಣಕಿದ್ದೇ ಶ್ರೀಲಂಕನ್ ಆಟಗಾರರು. ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಎನ್ನುವಂತೆ, ವೈಭವ್ ನಡೆ ಸರಿಯಿಲ್ಲ, ಆತನ ವಿರುದ್ಧ ತಕ್ಷಣ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಅವರು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಮಾಜಿ ಮಾಧ್ಯಮ ವ್ಯವಸ್ಥಾಪಕ ಬ್ರೇನ್ ಥಾಮಸ್ ಒತ್ತಾಯಿಸಿದ್ದಾರೆ.
ಈತ 15 ವರ್ಷದ ಬಾಲಕ ಏನಲ್ಲ. ಐಪಿಎಲ್‌ನಲ್ಲಿ ಹೆಚ್ಚಿನ ರನ್ಗಳನ್ನು ಸಿಡಿಸಿದ್ದೇನೆ ಎಂಬ ದುರಂಹಕಾರದಲ್ಲಿ ನಮ್ಮ ಆಟಗಾರರ ಮೇಲೆ ದಾಳಿ ಮಾಡಿದ್ದಾನೆ. ಮುಂದಿನ ಒಂದು ಪಂದ್ಯದಿಂದ ವೈಭವ್ನನ್ನು ಬ್ಯಾನ್ ಮಾಡಬೇಕು. ಆಗ ಮಾತ್ರ, ವೈಭವ್ ಕೋಪ ಕೆಳಗಿಳಿಯಲು ಸಾಧ್ಯ. ಜೊತೆಗೆ ಸಹ ಕ್ರಿಕೆಟಿಗರೊಂದಿಗೆ ಹೇಗೆ ಆಟ ಆಡಬೇಕು ಎಂಬುದು ತಿಳಿಯುತ್ತದೆ ಎಂದು ಬ್ರಿಯಾನ್ ಥಾಮಸ್ ಹೇಳಿರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಅಸಲಿಗೆ, ಬ್ರಿಯಾನ್ ಅವರ ಈ ಮಾತುಗಳು ಕೇವಲ ಜಾಲತಾಣಗಳಲ್ಲಿ ಹರಿದಾಡುತ್ತಿದೆಯೇ ವಿನಃ ಅಧಿಕೃತವಾಗಿ ಎಲ್ಲಿಯೂ ಕಾಣಿಸದೆ ಇರುವುದು ಇಲ್ಲಿ ಗಮನಾರ್ಹ,(ಏಜೆನ್ಸೀಸ್).