ಪಾಕ್ ಜತೆ ದ್ವಿಪಕ್ಷೀಯ ಕ್ರೀಡೆ ಇಲ್ಲ: ಕ್ರೀಡಾ ಸಚಿವಾಲಯ ಪುನರುಚ್ಚಾರ
ನವದೆಹಲಿ: ಪಾಕಿಸ್ತಾನದೊಂದಿಗೆ ಯಾವುದೇ ಕ್ರೀಡೆಯಲ್ಲಿ ದ್ವಿಪಕ್ಷೀಯ ಸರಣಿಗಳನ್ನು (bilateral sports) ಆಡಲು ಅವಕಾಶವಿಲ್ಲ. ಬಹುರಾಷ್ಟ್ರಗಳು ಪಾಲ್ಗೊಳ್ಳುವ ಕ್ರೀಡಾಕೂಟಗಳಲ್ಲಿ ಮಾತ್ರ ಪಾಕಿಸ್ತಾನದ ವಿರುದ್ಧ ಆಡಲು ವಿನಾಯಿತಿ ನೀಡಲಾಗುವುದು ಎಂದು ಕೇಂದ್ರ ಕ್ರೀಡಾ ಸಚಿವಾಲಯ (Sports Ministry) ಬುಧವಾರ ಪುನರುಚ್ಚರಿಸಿದೆ. ಈ ಮೂಲಕ ಕಳೆದ ವರ್ಷ ಪಾಕ್ ಮೇಲೆ ಹೇರಿದ್ದ ಕ್ರೀಡಾ ಸಂಬಂಧಗಳ ನಿರ್ಬಂಧ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದೆ. ಕ್ರೀಡಾಪಟುಗಳು, ತಂಡ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಮತ್ತು ಅಂತಾರಾಷ್ಟ್ರೀಯ ಕ್ರೀಡಾ ಆಡಳಿತಾಧಿಕಾರಿಗಳ ವೀಸಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಚಿವಾಲಯ ಈ ಸ್ಪಷ್ಟನೆ ನೀಡಿದೆ.
ದ್ವಿಪಕ್ಷೀಯ ಸರಣಿಗಳಿಗಾಗಿ ಪಾಕಿಸ್ತಾನಕ್ಕೆ ಭಾರತದ ತಂಡಗಳು ಹೋಗುವಂತಿಲ್ಲ ಮತ್ತು ಪಾಕಿಸ್ತಾನದ ತಂಡಗಳು ಭಾರತಕ್ಕೆ ಬಂದು ಆಡುವಂತಿಲ್ಲ. ಆದರೆ ಭಾರತ ಅಥವಾ ವಿದೇಶದಲ್ಲಿ ನಡೆಯುವ ಬಹುರಾಷ್ಟ್ರಗಳ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪಾಕ್ ತಂಡ ಅಥವಾ ಕ್ರೀಡಾಪಟುಗಳ ವಿರುದ್ಧ ಸ್ಪರ್ಧಿಸಬಹುದು. ಭಾರತದಲ್ಲಿ ನಡೆಯುವ ಬಹುರಾಷ್ಟ್ರಗಳ ಕ್ರೀಡಾಕೂಟಗಳಲ್ಲಿ ಪಾಕ್ ತಂಡ ಅಥವಾ ಕ್ರೀಡಾಪಟುಗಳೂ ಭಾಗವಹಿಸಬಹುದು. ಆದರೆ ಪಾಕಿಸ್ತಾನದಲ್ಲಿ ನಡೆಯುವ ಬಹುರಾಷ್ಟ್ರಗಳ ಕ್ರೀಡಾಕೂಟದಲ್ಲೂ ಭಾರತೀಯರು ಭಾಗವಹಿಸುವುದಕ್ಕೆ ನಿರ್ಬಂಧವಿದೆ ಎಂದು ಕ್ರೀಡಾ ಸಚಿವಾಲಯವು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್), ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ) ಮತ್ತು ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ (ಎನ್ಎಸ್ಎ್) ಕಳುಹಿಸಿರುವ ಸುತ್ತೋಲೆಯಲ್ಲಿ ತಿಳಿಸಿದೆ.
ಪಾಕಿಸ್ತಾನದ ಜತೆಗಿನ ಕ್ರೀಡಾ ಸಂಬಂಧದ ಪಾಲಿಸಿಯನ್ನು ಕಳೆದ ವರ್ಷ ಆಗಸ್ಟ್ನಲ್ಲಿ ಕ್ರೀಡಾ ಸಚಿವಾಲಯ ಮೊದಲ ಬಾರಿಗೆ ಪ್ರಕಟಿಸಿತ್ತು. ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಆಡುವುದಕ್ಕೆ ಸಂಬಂಧಿಸಿ ಸರ್ಕಾರ ಈ ಸ್ಪಷ್ಟನೆ ನೀಡಿತ್ತು.
2030ರ ಕಾಮನ್ವೆಲ್ತ್ ಗೇಮ್ಸ್ ಮತ್ತು 2036ರ ಒಲಿಂಪಿಕ್ಸ್ ಆತಿಥ್ಯಕ್ಕೆ ಸಂಬಂಧಿಸಿ ಒಲಿಂಪಿಕ್ಸ್ ಚಾರ್ಟರ್ ಗೌರವಿಸುವ ನಿಟ್ಟಿನಲ್ಲಿ ಭಾರತ ಈ ಪಾಲಿಸಿ ಅನುಸರಿಸಿದೆ.