ನೀವು ಕೊಹ್ಲಿಯಂತೆ ಮ್ಯಾಚ್ ಫಿನಿಶ್ ಮಾಡಲ್ಲ ಏಕೆ? ಸಿಡುಕುಮೋರೆ ಹಾಕ್ಕೊಂಡು ಬಾಬರ್ ಕೊಟ್ಟ ಉತ್ತರ ವೈರಲ್...Babar Azam
- ಕ್ರಿಕೆಟ್ ಅಭಿಮಾನಿಗಳಿಗೆ ಪಾಕಿಸ್ತಾನಿ ಕ್ರಿಕೆಟಿಗ ಬಾಬರ್ ಅಜಮ್ ಅವರ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ
- ಬಾಬರ್ ಅವರನ್ನು ಟೀಮ್ ಇಂಡಿಯಾ ಲೆಜೆಂಡ್ ವಿರಾಟ್ ಕೊಹ್ಲಿ ಜೊತೆ ಹೋಲಿಕೆ ಮಾಡುತ್ತಾರೆ
- ಇದೇ ಹೋಲಿಕೆ ಇದೀಗ ಬಾಬಾರ್ ಅಜಮ್ ಅವರು ಮುಖಭಂಗ ಅನುಭವಿಸಲು ಕಾರಣವಾಗಿದೆ
- ಪಾಕಿಸ್ತಾನಿ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಬಾಬರ್ ಅಜಮ್ ಅಸಮಾಧಾನಗೊಂಡಿದ್ದಾರೆ
Babar Azam : ಕ್ರೀಡಾಭಿಮಾನಿಗಳಿಗೆ ಬಾಬರ್ ಅಜಮ್ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಏಕೆಂದರೆ, ಬಾಬರ್ ಪಾಕಿಸ್ತಾನದ ಸ್ಟಾರ್ ಕ್ರಿಕೆಟಿಗರಲ್ಲಿ ಒಬ್ಬರು. ಕೆಲವರು ಅವರನ್ನು ಟೀಮ್ ಇಂಡಿಯಾದ ದಂತಕಥೆ ವಿರಾಟ್ ಕೊಹ್ಲಿಗೆ ಹೋಲಿಸಿ ಮಾತನಾಡುತ್ತಾರೆ. ಪ್ರಸ್ತುತ, ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ನಲ್ಲಿ ಬಿಜಿಯಾಗಿರುವ ಬಾಬರ್, ಪೇಶಾವರ್ ಝಲ್ಮಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದರ ನಡುವೆ ಮಾಧ್ಯಮಗೋಷ್ಠಿಯಲ್ಲಿ ಬಾಬರ್ ಭಾರಿ ಮುಖಭಂಗ ಅನುಭವಿಸಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಪಿಎಸ್‌ಎಲ್ 2026ರ ಭಾಗವಾಗಿ ಬುಧವಾರ (ಏಪ್ರಿಲ್ 08) ಕರಾಚಿಯಲ್ಲಿ ಪೇಶಾವರ್ ಝಲ್ಮಿ ಮತ್ತು ಹೈದರಾಬಾದ್ ಕಿಂಗ್ಸ್‌ಮೆನ್ ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ 18.2 ಓವರ್‌ಗಳಲ್ಲಿ 145 ರನ್‌ಗಳಿಗೆ ಆಲೌಟ್ ಆಯಿತು. ನಂತರ, ಪೇಶಾವರ್ ಝಲ್ಮಿ 20 ಓವರ್‌ಗಳಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು 146 ರನ್‌ಗಳ ಗುರಿಯನ್ನು ತಲುಪಿತು. ಪೇಶಾವರ್ ಬ್ಯಾಟ್ಸ್‌ಮನ್‌ಗಳ ಪರವಾಗಿ ನಾಯಕ ಬಾಬರ್ ಅಜಮ್ (43 ರನ್, 37 ಎಸೆತ, 6 ಬೌಂಡರಿ) ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಈ ಪಂದ್ಯದಲ್ಲಿ ಬಾಬರ್ ಅವರು ಟಾಪ್ ಸ್ಕೋರರ್ ಆಗಿದ್ದರು ಕೊನೆಯವರೆಗೂ ಕ್ರೀಸ್‌ನಲ್ಲಿ ಉಳಿಯಲಿಲ್ಲ. ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಬಾಬರ್ ಅಜಮ್ ಅವರನ್ನು ಈ ಬಗ್ಗೆ ಪ್ರಶ್ನೆ ಕೇಳಲಾಯಿತು. ವಿರಾಟ್ ಕೊಹ್ಲಿಯಂತೆ ನೀವು ಪಂದ್ಯಗಳನ್ನು ಮುಗಿಸುವುದಿಲ್ಲ ಏಕೆ? ನಿಮ್ಮನ್ನು ಕೊಹ್ಲಿ ಜತೆ ಹೋಲಿಕೆ ಮಾಡಿ ಮಾತನಾಡುತ್ತಾರೆ. ಈ ಹೋಲಿಕೆ ಬಗ್ಗೆ ನಿಮ್ಮ ಅಭಿಪ್ರಾಯಗಳೇನು? ಎಂದು ವರದಿಗಾರರೊಬ್ಬರು ಬಾಬರ್ ಅವರನ್ನು ಪ್ರಶ್ನೆ ಮಾಡಿದರು.
ಪ್ರಶ್ನೆ ಕೇಳುತ್ತಿದ್ದಂತೆ ಅಸಮಾಧಾನಗೊಂಡ ಬಾಬರ್, ಸಿಡುಕುಮೋರೆ ಹಾಕ್ಕೊಂಡು "ಈ ವಿಷಯಗಳನ್ನು ಇಲ್ಲಗೇ ಮುಗಿಸಿಬಿಡಿ. ಇದನ್ನು ನಿಮ್ಮಲ್ಲೇ ಇಟ್ಟುಕೊಳ್ಳಿ. ಹೋಲಿಕೆ ಮಾಡುವುದನ್ನು ಬಿಟ್ಟು ಮುಂದೆ ಸಾಗಿ. ಪಂದ್ಯಗಳನ್ನು ಫಿನಿಶ್ ಮಾಡಿಲ್ಲ ಎಂಬುದು ನಿಮ್ಮ ತಪ್ಪು ಕಲ್ಪನೆ ಅಷ್ಟೇ" ಎಂದು ಹೇಳಿದರು. ಸದ್ಯಕ್ಕೆ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಟೀಮ್ ಇಂಡಿಯಾ ಅಭಿಮಾನಿಗಳು ಬಾಬರ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.
ಪಾಕಿಸ್ತಾನದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದರೂ, ಬಾಬರ್ ಅಜಮ್ ಅವರು ಟಿ20 ಕ್ರಿಕೆಟ್‌ನಲ್ಲಿ ಸದಾ ಟೀಕೆಗೆ ಗುರಿಯಾಗುತ್ತಿದ್ದಾರೆ. ವಿಶೇಷವಾಗಿ ಅವರ ಸ್ಟ್ರೈಕ್-ರೇಟ್ (ರನ್ ಗಳಿಸುವ ವೇಗ) ಮತ್ತು ದೊಡ್ಡ ಮೊತ್ತವನ್ನು ಬೆನ್ನಟ್ಟುವಾಗ ಜವಾಬ್ದಾರಿಯುತವಾಗಿ ಆಡಲು ವಿಫಲರಾಗುತ್ತಿರುವುದು ವಿಮರ್ಶಕರ ಅಸಮಾಧಾನಕ್ಕೆ ಕಾರಣವಾಗಿದೆ.
ಪ್ರಸ್ತುತ ನಡೆಯುತ್ತಿರುವ ಪಾಕಿಸ್ತಾನ ಸೂಪರ್ ಲೀಗ್ (PSL) ನಲ್ಲಿ ಬಾಬರ್ ಅವರು ಆಡಿದ ಎರಡು ಪಂದ್ಯಗಳಲ್ಲಿ 126.15 ರ ಸ್ಟ್ರೈಕ್-ರೇಟ್‌ನಲ್ಲಿ 82 ರನ್ ಗಳಿಸಿದ್ದಾರೆ. ಆದರೆ, ಅವರ ಬೌಂಡರಿಗಳ ಸಂಖ್ಯೆ ನಿರಾಶಾದಾಯಕವಾಗಿದ್ದು, ಕೇವಲ 10 ಫೋರ್ ಮತ್ತು ಒಂದೇ ಒಂದು ಸಿಕ್ಸ್ ಬಾರಿಸುವಲ್ಲಿ ಮಾತ್ರ ಅವರು ಯಶಸ್ವಿಯಾಗಿದ್ದಾರೆ, (ಏಜೆನ್ಸೀಸ್).