ಗುಜರಾತ್ ಜೈಂಟ್ಸ್ ತಂಡದ ಆಟಗಾರ್ತಿ ಆಯುಷಿ ಸೋನಿ 
ಕ್ರಿಕೆಟ್

ಪಾದರ್ಪಣೆ ಪಂದ್ಯದಲ್ಲೇ ಕಹಿ ಘಟನೆ: ಆಯುಷಿ ಸೋನಿ ರಿಟೈರ್ಡ್​ ಔಟ್, WPLನಲ್ಲೇ ಇದು ಮೊದಲು! Ayushi Soni

ಪ್ರಮುಖ ಮುಖ್ಯಾಂಶಗಳು

  • ಕ್ರೀಡಾಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ 2026
  • ರೋಚಕವಾಗಿತ್ತು ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ ಮಹಿಳೆಯರ ನಡುವೆ ನಡೆದ ಪಂದ್ಯ
  • ತಂಡದ ಆಟಗಾರ್ತಿ ಆಯುಷಿ ಸೋನಿ 11 ರನ್ ಗಳಿಸಿ ರಿಟೈರ್ಡ್ ಔಟ್ ಆದರು
  • ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲೇ ಇದುವರೆಗೆ ಯಾವುದೇ ರಿಟೈರ್ಡ್ ಔಟ್ ನಡೆದಿರಲಿಲ್ಲ
Ayushi Soni : ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ 2026 ಪಂದ್ಯಾವಳಿಯು ಕ್ರೀಡಾಭಿಮಾನಿಗಳಿಗೆ ಭರಪೂರ ಮನರಂಜನೆಯನ್ನು ನೀಡುತ್ತಿದೆ. ಈ ಮೆಗಾ ಟೂರ್ನಿಯಲ್ಲಿ ಇಲ್ಲಿಯವರೆಗೆ 6 ಪಂದ್ಯಗಳು ಪೂರ್ಣಗೊಂಡಿವೆ. ನಿನ್ನೆ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ ಮಹಿಳೆಯರ ನಡುವೆ ನಡೆದ ಪಂದ್ಯ ಬಹಳ ರೋಚಕವಾಗಿತ್ತು. ಅದೇ ರೀತಿ, ಈ ಪಂದ್ಯದ ನಡುವೆ ಒಂದು ಕುತೂಹಲಕಾರಿ ಘಟನೆ ನಡೆಯಿತು. ಅದೇನೆಂದರೆ, ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲೇ ಇದುವರೆಗೆ ಯಾವುದೇ ರಿಟೈರ್ಡ್ ಔಟ್ ಘಟನೆ ನಡೆದಿಲ್ಲ. ಆದರೆ, ಆ ಘಟನೆ ಮೊದಲ ಬಾರಿಗೆ ನಿನ್ನೆಯ ಪಂದ್ಯದಲ್ಲಿ ನಡೆಯಿತು.
ಆಗಿದ್ದೇನೆಂದರೆ, ಗುಜರಾತ ತಂಡದ ಆಟಗಾರ್ತಿ ಆಯುಷಿ ಸೋನಿ 11 ರನ್ ಗಳಿಸಿ ರಿಟೈರ್ಡ್ ಔಟ್ ಆದರು. ಸರಿಯಾಗಿ ರನ್ ಗಳಿಸದ ಮತ್ತು 14 ಎಸೆತಗಳಲ್ಲಿ ಒಂದೇ ಒಂದು ಬೌಂಡರಿ ಬಾರಿಸದ ಕಾರಣ ಗುಜರಾತ್ ನಾಯಕಿ ಆಶ್​ ಗಾರ್ಡ್ನರ್ ಆದೇಶದ ಮೇರೆಗೆ ಆಯುಷಿ ಸೋನಿ ಅವರನ್ನು ರಿಟೈರ್ಡ್​ ಔಟ್​ ಮಾಡಲಾಯಿತು.
ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತು. ಈ ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡಲು ಬಂದ ಆಯುಷಿ ಸೋನಿ, ರನ್​ ಗಳಿಸಲು ಪರದಾಡಿದರು. 14 ಎಸೆತಗಳನ್ನು ಎದುರಿಸಿದ ಸೋನಿ, ನಿರ್ಣಾಯಕ ಹಂತದಲ್ಲಿ ಕೇವಲ 11 ರನ್ ಮಾತ್ರ ಗಳಿಸಿದರು. ಗಮನಾರ್ಹ ಸಂಗತಿ ಏನೆಂದರೆ, ಸೋನಿ ಅವರಿಗೆ ತಮ್ಮ ವೃತ್ತಿಜೀವನದ ಮೊದಲ WPL ಪಂದ್ಯವಾಗಿತ್ತು. ಮೊದಲ ಪಂದ್ಯದಲ್ಲಿ ಒತ್ತಡಕ್ಕೆ ಒಳಗಾದ ಸೋನಿ, ರನ್​ ಗಳಿಸಲು ಪರದಾಡಿದರು.
ಸೋನಿ ಹೆಚ್ಚು ಹೊತ್ತು ಕ್ರೀಸ್​ನಲ್ಲಿದ್ದರೆ ತಂಡದ ರನ್​ ಗಳಿಕೆಯ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಮನಗಂಡ ಗುಜರಾತ್ ನಾಯಕಿ ಆಶ್​ ಗಾರ್ಡ್ನರ್, ಸೋನಿ ಅವರನ್ನು ರಿಟೈರ್ಡ್​ ಔಟ್​​ ಮೂಲಕ ವಾಪಸ್​ ಕರೆಸಿಕೊಂಡರು. ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಈವರೆಗೂ ಯಾರೂ ಈ ರೀತಿ ನಿವೃತ್ತಿ ಹೊಂದಿರಲಿಲ್ಲ. ಮೊದಲ ಪಂದ್ಯದಲ್ಲೇ ಇಂತಹ ಘಟನೆ ನಡೆದಿದ್ದರಿಂದ ಆಯುಷಿ ಸೋನಿ ಅವರಿಗೆ ಮುಜುಗರವಾಗಿದೆ. ಆದರೆ, ಧೃತಿಗೆಡಬೇಕಾದ ಅವಶ್ಯಕತೆ ಇಲ್ಲ. ಮುಂದೆ ಸಾಕಷ್ಟು ಅವಕಾಶಗಳು ಸಿಗಲಿವೆ. ತಮ್ಮ ಬ್ಯಾಟಿಂಗ್​ ಅನ್ನು ಸುಧಾರಣೆ ಮಾಡುವ ಕಡೆ ಸೋನಿ ಅವರು ಗಮನ ಹರಿಸಲಿ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬೆಂಬಲಕ್ಕೆ ನಿಂತಿದ್ದಾರೆ.

ಮೊಹಮ್ಮದ್​ ರಿಜ್ವಾನ್​ಗೆ ಅವಮಾನ

ಪಾಕಿಸ್ತಾನದ ಸ್ಟಾರ್​ ಆಟಗಾರ ಮೊಹಮ್ಮದ್ ರಿಜ್ವಾನ್ ಅವರು ಪ್ರಸ್ತುತ ನಡೆಯುತ್ತಿರುವ ಬಿಬಿಎಲ್ ಸೀಸನ್‌ನಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ತಂಡದ ಪರ ಆಡುತ್ತಿದ್ದಾರೆ. ಇತ್ತೀಚೆಗೆ ಸಿಡ್ನಿ ಥಂಡರ್ ವಿರುದ್ಧ ನಡೆದ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ (23 ಎಸೆತಗಳಲ್ಲಿ 26 ರನ್) ಮಾಡಿದ್ದಕ್ಕೆ ತಂಡದ ಆಗ್ರಹದಿಂದ ರಿಟೈರ್ಡ್ ಔಟ್ ಮಾಡಲಾಯಿತು. ಇದನ್ನು ಅನೇಕರು ರಿಜ್ವಾನ್​ ಅವರಿಗೆ ಮತ್ತು ಪಾಕಿಸ್ತಾನ ಕ್ರಿಕೆಟ್‌ಗೆ ದೊಡ್ಡ ಅವಮಾನ ಎಂದು ಪರಿಗಣಿಸಿದ್ದಾರೆ. ರೆನೆಗೇಡ್ಸ್​ ತಂಡದ ಕ್ಯಾಪ್ಟನ್ ವಿಲ್ ಸದರ್ಲ್ಯಾಂಡ್ ನೇರವಾಗಿ ಸನ್ನೆ ಮಾಡಿ ರಿಜ್ವಾನ್ ಅವರನ್ನು ಕ್ರೀಸ್‌ನಿಂದ ಹಿಂದಕ್ಕೆ ಕರೆದರು. ಇದು BBL ಇತಿಹಾಸದಲ್ಲಿ ಮೊದಲ ಬಾರಿಗೆ ವಿದೇಶಿ ಆಟಗಾರನಿಗೆ ಸಂಭವಿಸಿದ ಘಟನೆಯಾಗಿದೆ.

ರಿಟೈರ್ಡ್​ ಔಟ್​ ಮತ್ತು ರಿಟೈರ್ಡ್​ ಹರ್ಟ್​ ನಡುವಿನ ವ್ಯತ್ಯಾಸವೇನು?

ರಿಟೈರ್ಡ್​ ಔಟ್​ ಎಂದರೆ ಮತ್ತೆ ಬ್ಯಾಟಿಂಗ್ ಮಾಡಲು ಅವಕಾಶ ಇರುವುದಿಲ್ಲ. ನಾಯಕನ ನಿರ್ಧಾರದರಿಂದ ಮತ್ತು ಗಾಯ ಅಥವಾ ಇತರ ಸಮಸ್ಯೆಗಳಿಂದ ಆಟಗಾರ ಬ್ಯಾಟಿಂಗ್ ಮಾಡಲು ಸಾಧ್ಯವಾಗದಿದ್ದರೆ ಅವರನ್ನು ರಿಟೈರ್ಡ್​ ಔಟ್​ ಎಂದು ಘೋಷಿಸಲಾಗುತ್ತದೆ. ಇದರರ್ಥ ಅವರಿಗೆ ಮತ್ತೆ ಬ್ಯಾಟಿಂಗ್ ಮಾಡಲು ಅವಕಾಶವಿಲ್ಲ. ರಿಟೈರ್ಡ್​ ಹರ್ಟ್​ ಅಂದರೆ, ಪಂದ್ಯದ ನಡುವೆ ಆಟಗಾರ ಏನಾದರೂ ಗಾಯಗೊಂಡರೆ, ಅವರು ಹಿಂತಿರುಗಿ ಮತ್ತೆ ಬ್ಯಾಟಿಂಗ್ ಮಾಡಬಹುದು.
ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ನಿನ್ನೆ ನಡೆದ ಪಂದ್ಯದಲ್ಲಿ ಕೊನೆಯವರೆಗೂ ಹೋರಾಡಿದ ಮುಂಬೈ ಇಂಡಿಯನ್ಸ್ ತಂಡ ಗುಜರಾತ್ ಜೈಂಟ್ಸ್​ ವಿರುದ್ಧ ಗೆದ್ದಿತು, (ಏಜೆನ್ಸೀಸ್​).