ಮಹಿಳಾ ಟಿ20 ವಿಶ್ವಕಪ್ ಟ್ರೋಫಿ ಗೆದ್ದ ಆಸ್ಟ್ರೇಲಿಯಾ ತಂಡ
- ಇಂಗ್ಲೆಂಡ್ ವಿರುದ್ಧ ಗೆದ್ದ ಆಸ್ಟ್ರೇಲಿಯಾ ಮಹಿಳಾ ಟಿ20 ವಿಶ್ವಚಾಂಪಿಯನ್ಸ್
- 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದ ಆಸ್ಟ್ರೇಲಿಯಾ ತಂಡ
- ದಾಖಲೆಯ 7ನೇ ಬಾರಿ ಟಿ20 ವಿಶ್ವಕಪ್ ಟ್ರೋಫಿಗೆ ಮುತ್ತಿಟ್ಟ ಆಸೀಸ್ ವನಿತೆಯರು
ಲಾರ್ಡ್ಸ್: ನಿನ್ನೆ (ಜು.05) ನಡೆದ ಮಹಿಳಾ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿ, ದಾಖಲೆಯ ಏಳನೇ ಬಾರಿ ಟಿ20 ವಿಶ್ವಕಪ್ ಟ್ರೋಫಿಗೆ ಮುತ್ತಿಟ್ಟಿತು.
ಆಸೀಸ್ ಬ್ಯಾಟ್ಸ್ವುಮನ್ಗಳಾದ ಬೆತ್ ಮೂನಿ (64 ರನ್) ಮತ್ತು ಫೋಬೆ ಲಿಚ್‌ಫೀಲ್ಡ್ (48) ಎರಡನೇ ವಿಕೆಟ್‌ಗೆ ಆಡಿದ 100 ರನ್‌ಗಳ ಜೊತೆಯಾಟ ಇಂಗ್ಲೆಂಡ್ ಟಿ20 ವಿಶ್ವಕಪ್ ಎತ್ತಿಹಿಡಿಯುವ ಕನಸಿಗೆ ತಣ್ಣೀರೆರಚಿತು. ಆಂಗ್ಲರ ಪಡೆ ನೀಡಿದ 151 ರನ್‌ಗಳ ಗುರಿಯನ್ನು ಇನ್ನೂ 17 ಎಸೆತಗಳು ಬಾಕಿ ಇರುವಂತೆಯೇ ಆಸ್ಟ್ರೇಲಿಯಾ ಮಹಿಳೆಯರು ತಲುಪಿದರು. ಈ ಮೂಲಕ ತಮ್ಮ ಸಾಂಪ್ರದಾಯಿಕ ಎದುರಾಳಿ ಇಂಗ್ಲೆಂಡ್ ವಿರುದ್ಧ ಏಕದಿನ ಅಂತಾರಾಷ್ಟ್ರೀಯ ಮತ್ತು ಟಿ20 ಕ್ರಿಕೆಟ್ ಎರಡರಲ್ಲೂ ತನ್ನ ಎಲ್ಲಾ ಏಳು ವಿಶ್ವ ಫೈನಲ್‌ಗಳನ್ನು ಆಸೀಸ್ ಗೆದ್ದಿದೆ.
2023ರ ಆವೃತ್ತಿಯ ನಂತರ ಆಸ್ಟ್ರೇಲಿಯಾ ಮತ್ತೆ ಪ್ರಶಸ್ತಿ ಒಲಿಸಿಕೊಂಡರೆ, ಇಂಗ್ಲೆಂಡ್ ತಂಡ ಎರಡನೇ ಬಾರಿಗೆ ರನ್ನರ್ ಅಪ್ ಸ್ಥಾನಕ್ಕೆ ಸಮಾಧಾನ ಕಂಡಿತು. ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ಕಾದಾಟದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. 32 ರನ್‌ಗಳಿಗೆ ಇಬ್ಬರು ಆರಂಭಿಕರನ್ನು ಕಳೆದುಕೊಂಡ ಇಂಗ್ಲೆಂಡ್ ಆಘಾತಕ್ಕೊಳಗಾಯಿತು. ಆಗ, ನ್ಯಾಟ್ ಸೀವರ್ ಬಂಟ್ ಹಾಗೂ ಅಲಿಸ್ ಕಾಫಿ (23) ಜೋಡಿ ಚೇತರಿಕೆ ನೀಡಿತು.
ಅದಾದ ನಂತರ, ಕ್ಯಾಪ್ಟನ್ ನ್ಯಾಟ್ ಸೀವ ಬ್ರಂಟ್ (58 ರನ್, 53 ಎಸೆತ, 5 ಬೌಂಡರಿ) ಅರ್ಧಶತಕದ ಜತೆಗೆ ಆಂಡ ಫೈಯಾ ಕೆಂಪ್ (ಅಜೇಯ 44 ರನ್, 28 ಎಸೆತ, 4 ಬೌಂಡರಿ, 1 ಸಿಕ್ಸರ್) ಉಪಯುಕ್ತ ಆಟದ ನೆರವಿನಿಂದ ಇಂಗ್ಲೆಂಡ್ 4 ವಿಕೆಟ್‌ಗೆ 150 ರನ್ ಕಲೆಹಾಕಿತು. ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ಆಸೀಸ್ ಪಡೆಗೆ ಅನುಭವಿ ಬೆಥ್ ಮೂನಿ (64 ರನ್, 49 ಎಸೆತ, 10 ಬೌಂಡರಿ) ಭರ್ಜರಿ ಬ್ಯಾಟಿಂಗ್ ಹಾಗೂ ಪೋಬಿ ಲಿಚ್‌ಫೀಲ್ಡ್ (48 ರನ್, 35 ಎಸೆತ, 6 ಬೌಂಡರಿ, 2 ಸಿಕ್ಸರ್) ದಿಟ್ಟ ಜತೆಯಾಟದ ನೆರವಿನಿಂದ ಆಸ್ಟ್ರೇಲಿಯಾ 17.1 ಓವರ್‌ಗಳಲ್ಲಿ 3 ವಿಕೆಟ್‌ಗೆ 153 ರನ್‌ಗಳಿಸಿ ಗೆದ್ದು ಬೀಗಿತು.