ಜಿಂಬಾಬ್ವೆ ವಿರುದ್ಧ ಆಸ್ಟ್ರೇಲಿಯಾಗೆ ( AUS vs ZIM ) ಹೀನಾಯ ಸೋಲು
- ಕ್ರಿಕೆಟ್ ಶಿಶು ಜಿಂಬಾಂಬ್ವೆ ವಿರುದ್ಧ ಬಲಿಷ್ಠ ಆಸ್ಟ್ರೇಲಿಯಾ ತಂಡಕ್ಕೆ ಹೀನಾಯ ಸೋಲು
- ಕೊಲಂಬೊದಲ್ಲಿ ನಡೆದ ಟಿ20 ವಿಶ್ವಕಪ್ನ ಲೀಗ್ ಪಂದ್ಯದಲ್ಲಿ ಆಸಿಸ್ಗೆ ಭಾರಿ ಹಿನ್ನೆಡೆ
- ಬ್ಯಾಟಿಂಗ್ ವೈಫಲ್ಯದಿಂದಾಗಿ ಜಿಂಬಾಬ್ವೆ ವಿರುದ್ಧ ಸೋತೆವು ಎಂದ ಹಂಗಾಮಿ ನಾಯಕ ಟ್ರಾವಿಸ್ ಹೆಡ್
ಕೊಲಂಬೊ: ತಮ್ಮ ಬ್ಯಾಟಿಂಗ್ ವೈಫಲ್ಯದಿಂದಾಗಿ ಜಿಂಬಾಬ್ವೆ ವಿರುದ್ಧದ ಪಂದ್ಯವನ್ನು ನಮ್ಮ ತಂಡ ಸೋತಿದೆ ಎಂದು ಬಲಿಷ್ಠ ಆಸ್ಟ್ರೇಲಿಯಾ ತಂಡದ ( AUS vs ZIM ) ಹಂಗಾಮಿ ನಾಯಕ ಟ್ರಾವಿಸ್ ಹೆಡ್ ಹೇಳಿದ್ದಾರೆ. ಪವರ್‌ಪ್ಲೇನಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡ ಬಳಿಕ ಮತ್ತೆ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೆಡ್ ಹೇಳಿದರು.
ಇಂದು (ಫೆ.13) ಶ್ರೀಲಂಕಾ ರಾಜಧಾನಿ ಕೊಲಂಬೊದಲ್ಲಿರುವ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ, ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು. ಜಿಂಬಾಬ್ವೆ ಪರ ಆರಂಭಿಕ ಆಟಗಾರ ಬ್ರಿಯಾನ್ ಬೆನೆಟ್ (ಔಟಾಗದೆ 64 ರನ್, 56 ಎಸೆತ, 7 ಬೌಂಡರಿ) ಅಜೇಯ ಅರ್ಧಶತಕ ಗಳಿಸಿದರು. ಮತ್ತೊಬ್ಬ ಆರಂಭಿಕ ಆಟಗಾರ ತಡಿವಾನಾಶೆ ಮರುಮಾನಿ (35 ರನ್, 21 ಎಸೆತ, 7 ಬೌಂಡರಿ), ಒನ್-ಡೌನ್ ಬ್ಯಾಟರ್ ರಯಾನ್ ಬರ್ಲ್ (35 ರನ್, 30 ಎಸೆತ, 4 ಬೌಂಡರಿ) ಮತ್ತು ನಾಯಕ ಸಿಕಂದರ್ ರಜಾ (ಔಟಾಗದೆ 19 ರನ್, 12 ಎಸೆತ , 2 ಬೌಂಡರಿ) ಉತ್ತಮ ಪ್ರದರ್ಶನ ನೀಡಿದರು. ಆಸೀಸ್ ಬೌಲರ್‌ಗಳಲ್ಲಿ ಮಾರ್ಕಸ್ ಸ್ಟೊಯಿನಿಸ್ ಮತ್ತು ಕ್ಯಾಮರೂನ್ ಗ್ರೀನ್ ತಲಾ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಆಸೀಸ್ ಪರ, ಮ್ಯಾಟ್ ರೆನ್ಶಾ (65 ರನ್, 44 ಎಸೆತ, 5 ಬೌಂಡರಿ, 1 ಸಿಕ್ಸರ್) ಅರ್ಧಶತಕ ಗಳಿಸಿದರು. ಗ್ಲೆನ್ ಮ್ಯಾಕ್ಸ್‌ವೆಲ್ (31 ರನ್, 32 ಎಸೆತ, 1 ಬೌಂಡರಿ, 1 ಸಿಕ್ಸರ್) ಉಪಯುಕ್ತ ರನ್ ಕಾಣಿಕೆ ನೀಡಿದರು. ನಾಯಕ ಟ್ರಾವಿಸ್ ಹೆಡ್ (17) ಪರಿಣಾಮಕಾರಿ ಆಟವಾಡಲಿಲ್ಲ. ಜೋಶ್ ಇಂಗ್ಲಿಷ್ (8) ಮತ್ತು ಮಾರ್ಕಸ್ ಸ್ಟೊಯಿನಿಸ್ (6) ಒಂದಂಕಿಗೆ ಸೀಮಿತವಾದರೆ, ಕ್ಯಾಮರೂನ್ ಗ್ರೀನ್ ಮತ್ತು ಟಿಮ್ ಡೇವಿಡ್ ಡಕ್ ಔಟ್ ಆದರು. ಜಿಂಬಾಬ್ವೆ ಪರ ಬ್ಲೆಸಿಂಗ್ ಮುಜರಬಾನಿ ನಾಲ್ಕು ವಿಕೆಟ್ ಪಡೆದರು. ಬ್ರಾಡ್ ಇವಾನ್ಸ್ ಮೂರು ವಿಕೆಟ್ ಪಡೆದರೆ, ವೆಲ್ಲಿಂಗ್ಟನ್ ಮಸಕಡ್ಜಾ ಮತ್ತು ರಯಾನ್ ಬರ್ಲೆ ತಲಾ ಒಂದು ವಿಕೆಟ್ ಪಡೆದರು.
ಪಂದ್ಯದ ನಂತರ ಮಾತನಾಡಿದ ಆಸೀಸ್ ಹಂಗಾಮಿ ನಾಯಕ ಟ್ರಾವಿಸ್ ಹೆಡ್, ತಮ್ಮ ತಂಡದ ಸೋಲಿಗೆ ಕಾರಣ ಏನೆಂಬುದನ್ನು ವಿವರಿಸಿದರು. ನಾವು ಪಿಚ್ ಅನ್ನು ತಪ್ಪಾಗಿ ನಿರ್ಣಯಿಸಿದೆವು. 170 ರನ್‌ಗಳ ಗುರಿಯನ್ನು ಬೆನ್ನಟ್ಟಬಹುದೆಂದು ಭಾವಿಸಿದೆವು. ಆದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಪಿಚ್ ಬದಲಾದಂತೆ ತೋರುತ್ತಿತ್ತು. ವಾಸ್ತವವಾಗಿ, ಪವರ್ ಪ್ಲೇನಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡ ನಂತರ ನಮ್ಮ ಮೇಲಿನ ಒತ್ತಡ ಹೆಚ್ಚಾಯಿತು ಎಂದು ಹೇಳಿದರು.
ಪವರ್ ಪ್ಲೇನಲ್ಲಿ ವಿಕೆಟ್ ಬಿದ್ದ ನಂತರ ಚೇತರಿಸಿಕೊಳ್ಳಲು ನಮ್ಮಿಂದ ಸಾಧ್ಯವಾಗಲಿಲ್ಲ. ನಮಗೆ ಬೇಕಾದ ರನ್ ರೇಟ್ ಕೂಡ ಹೆಚ್ಚಾಯಿತು. ಇದರ ಒತ್ತಡಕ್ಕೆ ಸಿಲುಕಿ ನಮ್ಮ ಬ್ಯಾಟ್ಸ್‌ಮನ್‌ಗಳು ತಪ್ಪು ಮಾಡಿದರು ಎಂದು ಹೆಡ್ ಹೇಳಿದರು.
ಮಧ್ಯ ಕ್ರಮಾಂಕದಲ್ಲಿ ಉತ್ತಮ ಜಟೆಯಾಟ (ಗ್ಲೆನ್ ಮ್ಯಾಕ್ಸ್‌ವೆಲ್, ಮ್ಯಾಟ್ ರೆನ್‌ಶಾ) ದಾಖಲಾದರು ಕೂಡ ಅದರ ಲಾಭವನ್ನು ಪಡೆಯಲು ನಮಗೆ ಸಾಧ್ಯವಾಗಲಿಲ್ಲ. ಈ ಸೋಲು ನಿರಾಶಾದಾಯಕವಾಗಿದೆ. ಆದರೂ, ಕ್ರಿಕೆಟ್‌ನಲ್ಲಿ ಏನು ಬೇಕಾದರೂ ಆಗಬಹುದು. ಇದು ಆಟವಷ್ಟೇ ಎಂದ ಹೆಡ್, ಜಿಂಬಾಬ್ವೆ ಆಟಗಾರರನ್ನು ಹೊಗಳಿದರು. ಅವರೆಲ್ಲರು ಉತ್ತಮವಾಗಿ ಆಡಿದರು ಮತ್ತು ಈ ಗೆಲುವಿಗೆ ಅವರೆಲ್ಲರು ಅರ್ಹರು ಎಂದರು.
ನಮ್ಮ ತಂಡದ ಕೆಲವು ಪ್ರಮುಖ ಆಟಗಾರರು ಗಾಯಗಳಿಂದ ಬಳಲುತ್ತಿದ್ದಾರೆ. ಅವರು ಚೇತರಿಸಿಕೊಂಡು ತಂಡ ಸೇರಿದರೆ ನಾವು ಗೆಲುವಿನಿಂದ ಹಿಂದೆ ಸರಿಯುವ ಮಾತೇ ಇಲ್ಲ. ಉಳಿದ ಎರಡು ಪಂದ್ಯಗಳಲ್ಲಿ ನಾವು ಗೆಲುವು ಸಾಧಿಸುತ್ತೇವೆ ಎಂದು ಹೆಡ್ ತಿಳಿಸಿದರು, (ಏಜೆನ್ಸೀಸ್).