ಒಂದಲ್ಲ ಎರಡಲ್ಲ ಐದು ಪಟ್ಟು ಹೆಚ್ಚಾಯ್ತು ವಂಡರ್​ ಕಿಡ್​ ಬ್ರ್ಯಾಂಡ್​ ವ್ಯಾಲ್ಯೂ: ಕೇವಲ 15 ವರ್ಷಕ್ಕೆ ಇಷ್ಟೊಂದು ಆಸ್ತಿನಾ? Vaibhav Suryavanshi  
ಕ್ರಿಕೆಟ್

ಒಂದಲ್ಲ ಎರಡಲ್ಲ ಐದು ಪಟ್ಟು ಹೆಚ್ಚಾಯ್ತು ವಂಡರ್​ ಕಿಡ್​ ಬ್ರ್ಯಾಂಡ್​ ವ್ಯಾಲ್ಯೂ: ಕೇವಲ 15 ವರ್ಷಕ್ಕೆ ಇಷ್ಟೊಂದು ಆಸ್ತಿನಾ? Vaibhav Suryavanshi

ಪ್ರಮುಖ ಮುಖ್ಯಾಂಶಗಳು

  • ಕೇವಲ ಹದಿನೈದನೇ ವಯಸ್ಸಿಗೆ ಭಾರತದ ಪರ ಪದಾರ್ಪಣೆ ಮಾಡಿ ಸಚಿನ್ ದಾಖಲೆ ಮುರಿದ ವೈಭವ್ ಸೂರ್ಯವಂಶಿ
  • ಐಪಿಎಲ್ ಮತ್ತು ಜಾಹೀರಾತು ಒಪ್ಪಂದಗಳ ಮೂಲಕ ಸೂರ್ಯವಂಶಿಯವರ ನಿವ್ವಳ ಆಸ್ತಿ ಮೌಲ್ಯ ಏರಿಕೆ
  • ಮಾರುಕಟ್ಟೆಯಲ್ಲಿ ಸರೀನ್ ಸ್ಪೋರ್ಟ್ಸ್ ಸಂಸ್ಥೆಯಿಂದ ವಿಶೇಷ ವೈಭವ್ ಸೂರ್ಯವಂಶಿ ಎಡಿಷನ್ ಬ್ಯಾಟ್ ಬಿಡುಗಡೆ
  • ಕಾಂಪ್ಲಾನ್ ಮತ್ತು ಗೂಗಲ್ ಪೇ ಸೇರಿದಂತೆ ಪ್ರಮುಖ ಬ್ರ್ಯಾಂಡ್‌ಗಳ ಜಾಹೀರಾತು ಅಭಿಯಾನಗಳಲ್ಲಿ ಭಾಗಿ
  • ಯುವಕರಿಗೆ ಸ್ಪೂರ್ತಿಯಾಗಲು ಜಾರ್ಖಂಡ್ ಆರೋಗ್ಯ ಇಲಾಖೆಯಿಂದ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕ
Vaibhav Suryavanshi : ಟೀಮ್​ ಇಂಡಿಯಾ ಇದುವರೆಗೂ ಜಗತ್ತಿಗೆ ಪರಿಚಯಿಸಿರುವ ಎಷ್ಟೋ ಕ್ರಿಕೆಟ್ ಪ್ರತಿಭೆಗಿಂತ ವೈಭವ್ ಸೂರ್ಯವಂಶಿ ಅವರು ಭಿನ್ನವಾಗಿ ನಿಲ್ಲುತ್ತಾರೆ. ಏಕೆಂದರೆ, ಕೇವಲ 15ನೇ ವಯಸ್ಸಿನಲ್ಲಿ ತನ್ನ ಬ್ರ್ಯಾಂಡ್​ ಮೌಲ್ಯವನ್ನು ಅತಿವೇಗವಾಗಿ ಹೆಚ್ಚಿಸಿಕೊಳ್ಳುವ ಮೂಲಕ ಕ್ರಿಕೆಟ್​ ದಂತಕತೆ ಸಚಿನ್ ತೆಂಡೂಲ್ಕರ್ ಅವರು ಹದಿಹರೆಯದವರಾಗಿದ್ದಾಗ ಯಾವ ಮಟ್ಟಿಗೆ ಉತ್ತುಂಗಕ್ಕಕ್ಕೇರಿದ್ದರು ಎಂಬುದನ್ನು ಮತ್ತೊಮ್ಮೆ ನೆನಪಿಸುವಂತೆ ಮಾಡಿದೆ.
ಕೇವಲ 15ನೇ ವಯಸ್ಸಿನಲ್ಲಿ ಭಾರತದ ಪರ ಪದಾರ್ಪಣೆ ಮಾಡುವ ಮೂಲಕ ಸೂರ್ಯವಂಶಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಅತ್ಯಂತ ಕಿರಿಯ ಆಟಗಾರ ಎಂಬ 'ಮಾಸ್ಟರ್ ಬ್ಲಾಸ್ಟರ್' ಸಚಿನ್ ಅವರ ದಾಖಲೆಯನ್ನು ಮುರಿದಿದ್ದಾರೆ. ಸೂರ್ಯವಂಶಿ ಅವರ ಕ್ರಿಕೆಟ್ ಪಯಣವು ಇನ್ನೂ ಆರಂಭಿಕ ಹಂತದಲ್ಲಿದ್ದರೂ, ಅವರು ಈಗಾಗಲೇ ಜಾಗತಿಕ ಕ್ರಿಕೆಟ್ ವಲಯದಲ್ಲಿ ದೊಡ್ಡ ಹೆಸರು ಮಾಡಿಕೊಂಡಿದ್ದಾರೆ. ಮೈದಾನದಲ್ಲಿ ವೈಭವ್​ ಅವರ ಸ್ಫೋಟಕ ಬ್ಯಾಟಿಂಗ್​ ಶೈಲಿಯು ಭಾರಿ ಜನಪ್ರಿಯತೆ ತಂದುಕೊಟ್ಟಿದ್ದು, ಪ್ರಮುಖ ಬ್ರ್ಯಾಂಡ್‌ಗಳ ಗಮನವನ್ನು ಸೆಳೆಯುವಂತೆ ಮಾಡಿದೆ.
ಕೆಲವು ಬ್ರ್ಯಾಂಡ್‌ಗಳು ದೀರ್ಘಕಾಲೀನ ಒಪ್ಪಂದಗಳನ್ನು ಕುದುರಿಸಲು ಮುಂದಾಗಿದ್ದರೆ, ಇನ್ನು ಕೆಲವು ಬ್ರ್ಯಾಂಡ್‌ಗಳು ಸೂಕ್ತ ಸಮಯಕ್ಕಾಗಿ ಕಾಯುತ್ತಿವೆ. 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL)ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದ ಬಳಿಕ, ವೈಭವ್ ಸೂರ್ಯವಂಶಿ ಅವರು ತಮ್ಮ ಬ್ರ್ಯಾಂಡ್ ಎಂಡೋರ್ಸ್‌ಮೆಂಟ್ ಶುಲ್ಕವನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ ಇವರ ಒಪ್ಪಂದವೊಂದರ ವಾಣಿಜ್ಯ ಮೌಲ್ಯವು 1 ಕೋಟಿ ರೂಪಾಯಿ ಗಡಿಯನ್ನು ದಾಟಿದೆ.
ಪ್ರಸ್ತುತ ವೈಭವ್​ ಅವರ ಒಟ್ಟು ಆಸ್ತಿ ಮೌಲ್ಯವು (ನೆಟ್‌ವರ್ತ್) ಅಂದಾಜು 7 ರಿಂದ 10 ಕೋಟಿ ರೂಪಾಯಿಗಳಷ್ಟಿದೆ ಎಂದು ಅಂದಾಜಿಸಲಾಗಿದ್ದು, ಐಪಿಎಲ್ ಸಂಬಳ, ಮ್ಯಾಚ್ ಫೀಸ್, ದೇಶೀಯ ಕ್ರಿಕೆಟ್ ಮತ್ತು ಹೆಚ್ಚುತ್ತಿರುವ ಬ್ರ್ಯಾಂಡ್ ಎಂಡೋರ್ಸ್‌ಮೆಂಟ್ ಒಪ್ಪಂದಗಳು ಇದಕ್ಕೆ ಪ್ರಮುಖ ಕೊಡುಗೆ ನೀಡಿವೆ. ಇನ್ನೂ ಹದಿಹರೆಯದವರಾಗಿರುವ ಕಾರಣ, ಸೂರ್ಯವಂಶಿಯವರ ಕುಟುಂಬವು ಅವರ ವೃತ್ತಿಜೀವನದ ಈ ಮಹತ್ವದ ಹಂತದಲ್ಲಿ ಅತಿಯಾದ ಜಾಹೀರಾತು ಒಪ್ಪಂದಗಳಿಂದ ವೈಭವ್​ರನ್ನು ರಕ್ಷಿಸಲು ಬಯಸುತ್ತದೆ. ಆದಾಗ್ಯೂ, ವೈಭವ್​ ಅವರ ವಾಣಿಜ್ಯ ಪಯಣವು ಈಗ ಅಧಿಕೃತವಾಗಿ ಆರಂಭಗೊಂಡಿದೆ.
15ನೇ ವಯಸ್ಸಿನಲ್ಲಿ ವೈಭವ್ ಸೂರ್ಯವಂಶಿ ಅನುಮೋದಿಸಿದ ಪ್ರಮುಖ ಬ್ರ್ಯಾಂಡ್‌ಗಳು ಯಾವುವು ಎಂಬುದನ್ನು ನಾವೀ ತಿಳಿದುಕೊಳ್ಳೋಣ.

ಎಸ್‌ಎಸ್ ಬ್ಯಾಟ್ಸ್

ಸಚಿನ್ ತೆಂಡೂಲ್ಕರ್ ಅವರು ಎಂ.ಆರ್‌ಎಫ್ (MRF) ಬ್ಯಾಟ್ ಸ್ಪಾನ್ಸರ್‌ಶಿಪ್‌ನೊಂದಿಗೆ ಗುರುತಿಸಿಕೊಂಡಂತೆ, ಸೂರ್ಯವಂಶಿ ಇನ್ನೂ ಯಾವುದೇ ಬೃಹತ್ ಕಾರ್ಪೊರೇಟ್ ದೈತ್ಯರೊಂದಿಗೆ ದೊಡ್ಡ ಒಪ್ಪಂದ ಮಾಡಿಕೊಂಡಿಲ್ಲ. ಆದಾಗ್ಯೂ, ಅವರು ಪ್ರಸ್ತುತ ಸರೀನ್ ಸ್ಪೋರ್ಟ್ಸ್ (SS) ಜೊತೆ ವಾರ್ಷಿಕ ಅಂದಾಜು 50 ಲಕ್ಷ ರೂಪಾಯಿ ಮೌಲ್ಯದ ಎಕ್ವಿಪ್‌ಮೆಂಟ್ ಒಪ್ಪಂದವನ್ನು ಹೊಂದಿದ್ದಾರೆ. ಎಸ್‌ಎಸ್ ಸಂಸ್ಥೆಯು ಮಾರುಕಟ್ಟೆಯಲ್ಲಿ ವಿಶೇಷವಾದ "ವೈಭವ್ ಸೂರ್ಯವಂಶಿ ಎಡಿಷನ್" ಬ್ಯಾಟ್‌ಗಳನ್ನು ಸಹ ಬಿಡುಗಡೆ ಮಾಡಿದೆ.

ಕಾಂಪ್ಲಾನ್

2026ರ ಆರಂಭದಲ್ಲಿ ಕಾಂಪ್ಲಾನ್‌ನ "ಥೋಡಾ ಪ್ಲಾನ್, ಥೋಡಾ ಕಾಂಪ್ಲಾನ್" ಜಾಹೀರಾತು ಅಭಿಯಾನದ ಮುಖವಾಗಿದ್ದಾರೆ. ಈ ಜಾಹೀರಾತು ಸರಿಯಾದ ಪೋಷಣೆ ಮತ್ತು ಸಮರ್ಪಣಾ ಭಾವದ ಮೇಲೆ ಗಮನಹರಿಸುವ ಮೂಲಕ ಸೂರ್ಯವಂಶಿ ಅವರ ನಿಜ ಜೀವನದ ಯುವ ಅಥ್ಲೀಟ್​ ದಿನಚರಿಯನ್ನು ಬಿಂಬಿಸುತ್ತದೆ.

ಗೂಗಲ್ ಪೇ

ವೈಭವ್​ ಅವರು ಗೂಗಲ್ ಪೇನ ಯುವಕ-ಯುವತಿಯರನ್ನು ಕೇಂದ್ರೀಕರಿಸಿದ ಅಭಿಯಾನದಲ್ಲಿ ನಟಿಸಿದ್ದಾರೆ. ಈ ಜಾಹೀರಾತಿನಲ್ಲಿ ಅವರು ತಮ್ಮ ಪೋಷಕರ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿರುವ ಯುಪಿಐ (UPI) ಬಳಸಿ ಹಣ ನಿರ್ವಹಿಸುವುದನ್ನು ತೋರಿಸಲಾಗಿದ್ದು, ಹದಿಹರೆಯದವರಿಗೆ ಸುರಕ್ಷಿತ ಹಣಕಾಸು ನಿರ್ವಹಣೆಯ ಬಗ್ಗೆ ತಿಳಿಸಲಾಗಿದೆ.

ರೆಡ್ ಬುಲ್

2026ರ ಐಪಿಎಲ್ ಸಮಯದಲ್ಲಿ, ಸೂರ್ಯವಂಶಿ ಅವರು ತಮ್ಮ ರಾಜಸ್ಥಾನ ರಾಯಲ್ಸ್ ತಂಡದ ಸಹ ಆಟಗಾರ ಧ್ರುವ ಜುರೆಲ್ ಅವರೊಂದಿಗೆ ರೆಡ್ ಬುಲ್ ಸವಾಲಿನಲ್ಲಿ ಪಾಲ್ಗೊಂಡಿದ್ದರು. ಈ ಸವಾಲಿನಲ್ಲಿ ಅವರು 30 ಎಸೆತಗಳಲ್ಲಿ 60 ರನ್ ಗಳಿಸಬೇಕಿತ್ತು.

ಜಾರ್ಖಂಡ್ ಆರೋಗ್ಯ ಇಲಾಖೆ

ರಾಜ್ಯದ ಯುವಕರು ಸಕ್ರಿಯವಾಗಿ, ಸದೃಢವಾಗಿ ಮತ್ತು ಆರೋಗ್ಯವಾಗಿರಲು ಪ್ರೇರೇಪಿಸಲು ವೈಭವ್ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸುವುದಾಗಿ ಜಾರ್ಖಂಡ್ ಆರೋಗ್ಯ ಸಚಿವರು 2026ರ ಮೇ ತಿಂಗಳಲ್ಲಿ ಘೋಷಿಸಿದರು.
ವೈಭವ್ ಸೂರ್ಯವಂಶಿ ಅವರ ಪ್ರಸ್ತುತ ನಿವ್ವಳ ಆಸ್ತಿ ಮೌಲ್ಯವು ಅಂದಾಜು 10 ಕೋಟಿ ರೂಪಾಯಿಗಳಷ್ಟಿದ್ದು, ಇದು ಅವರ ಐಪಿಎಲ್ ಸಂಬಳ, ಮ್ಯಾಚ್ ಫೀಸ್, ದೇಶೀಯ ಕ್ರಿಕೆಟ್ ಆದಾಯ ಹಾಗೂ ವಿವಿಧ ಬ್ರ್ಯಾಂಡ್ ಎಂಡೋರ್ಸ್‌ಮೆಂಟ್‌ಗಳಿಂದ ಬಂದಿದೆ. ಇವರು ಪ್ರಸ್ತುತ ಸರೀನ್ ಸ್ಪೋರ್ಟ್ಸ್ (SS), ಕಾಂಪ್ಲಾನ್, ಗೂಗಲ್ ಪೇ, ರೆಡ್ ಬುಲ್ ಮತ್ತು ಜಾರ್ಖಂಡ್ ಆರೋಗ್ಯ ಇಲಾಖೆಯಂತಹ ಪ್ರತಿಷ್ಠಿತ ಬ್ರ್ಯಾಂಡ್‌ಗಳೊಂದಿಗೆ ಒಪ್ಪಂದಗಳನ್ನು ಹೊಂದಿದ್ದು, ಅವರ ವಾಣಿಜ್ಯ ಮೌಲ್ಯವು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ, (ಏಜೆನ್ಸೀಸ್​).