Asian Games T20: ಮಹಿಳಾ ಕ್ರಿಕೆಟ್‌ನಲ್ಲಿ ಮೆಡಲ್ ಖಚಿತ, ಹಲವು ದಾಖಲೆ ಬರೆದ ಶೆಫಾಲಿ-ಸ್ಮೃತಿ! 
ಕ್ರಿಕೆಟ್

Asian Games T20: ಮಹಿಳಾ ಕ್ರಿಕೆಟ್‌ನಲ್ಲಿ ಮೆಡಲ್ ಖಚಿತ, ಹಲವು ದಾಖಲೆ ಬರೆದ ಶೆಫಾಲಿ-ಸ್ಮೃತಿ!

ಪ್ರಮುಖ ಮುಖ್ಯಾಂಶಗಳು

  • ಚಿನ್ನದ ಪದಕಕ್ಕೆ ಭಾರತ-ಶ್ರೀಲಂಕಾ ಹೋರಾಟ
ನಿಶ್ಶಿನ್: ಹಾಲಿ ಚಾಂಪಿಯನ್ ಭಾರತ ತಂಡ ಏಷ್ಯನ್ ಗೇಮ್ಸ್ ಟಿ20 ಕ್ರಿಕೆಟ್ ಸ್ಪರ್ಧೆಯ ಮಹಿಳಾ ವಿಭಾಗದಲ್ಲಿ ಸತತ ಎರಡನೇ ಸ್ವರ್ಣ ಪದಕ ಜಯಿಸುವ ಸನಿಹದಲ್ಲಿದೆ. ಶೆಫಾಲಿ ವರ್ಮ (100* ರನ್, 49 ಎಸೆತ, 3 ಬೌಂಡರಿ, 9 ಸಿಕ್ಸರ್) ಚೊಚ್ಚಲ ಶತಕದ ನೆರವಿನಿಂದ ಹರ್ಮಾನ್‌ಪ್ರೀತ್ ಕೌರ್ ಪಡೆ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ಎದುರು 114 ರನ್ ಅಂತರದಿಂದ ಗೆದ್ದು, ಫೈನಲ್‌ಗೇರಿತು. ಇದರೊಂದಿಗೆ ಕನಿಷ್ಠ ಬೆಳ್ಳಿ ಪದಕ ಖಾತ್ರಿಪಡಿಸಿರುವ ಭಾರತ ತಂಡ ಮಂಗಳವಾರ ಚಿನ್ನದ ಪದಕಕ್ಕಾಗಿ ಶ್ರೀಲಂಕಾ ಎದುರು ಹೋರಾಡಲಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡ ಶೆಫಾಲಿ ವರ್ಮ ಶತಕದಾಟ ಹಾಗೂ ಹರ್ಮಾನ್‌ಪ್ರೀತ್ ಕೌರ್ (40) ಬಿರುಸಿನಾಟದ ನೆರವಿನಿಂದ 4 ವಿಕೆಟ್‌ಗೆ 195 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಪ್ರತಿಯಾಗಿ ವೇಗಿ ನಂದಿನಿ ಶರ್ಮ (25ಕ್ಕೆ 3) ಮತ್ತು ದೀಪ್ತಿ ಶರ್ಮ (7ಕ್ಕೆ 3) ದಾಳಿಗೆ ನಲುಗಿದ ಬಾಂಗ್ಲಾ 15.4 ಓವರ್‌ಗಳಲ್ಲಿ 81 ರನ್‌ಗೆ ಸರ್ವಪತನ ಕಂಡಿತು. ಈ ಮೂಲಕ 9 ದಿನಗಳ ಅಂತರದಲ್ಲಿ ಭಾರತ-ಶ್ರೀಲಂಕಾ ಮರುಮುಖಾಮುಖಿ ಆಗಲಿದ್ದು, ಕಳೆದ ಆವೃತ್ತಿಯ ಫೈನಲ್‌ನ ಪುನರಾವರ್ತನೆಯೂ ಇದಾಗಿದೆ. ಇನ್ನೊಂದು ಸೆಮಿೈನಲ್‌ನಲ್ಲಿ ಶ್ರೀಲಂಕಾ ತಂಡ, ಪಾಕ್ ಎದುರು 8 ವಿಕೆಟ್‌ಗಳಿಂದ ಗೆಲುವು ದಾಖಲಿಸಿತು.  
ಭಾರತ: 4 ವಿಕೆಟ್‌ಗೆ 195 (ಸ್ಮತಿ ಮಂದನಾ 37, ಶೆಫಾಲಿ 100*, ಕಮಲಿನಿ 3, ಹರ್ಮಾನ್‌ಪ್ರೀತ್ 40, ರಿಚಾ 2, ಭಾರತಿ 9*, ಸಂಜಿದಾ 25ಕ್ಕೆ 1). ಬಾಂಗ್ಲಾದೇಶ: 15.4 ಓವರ್‌ಗಳಲ್ಲಿ 81 (ದಿಲಾರಾ 27, ಫಿರ್ದೋಸ್ 0, ಶೋಭನಾ 4, ನೀಗರ್ 9, ಶೋರ್ನಾ 5, ಶರ್ಮಿನಾ 4, ಸುಲ್ತಾನಾ 12*, ದೀಪ್ತಿ ಶರ್ಮ 7ಕ್ಕೆ 3, ನಂದನಿ 25ಕ್ಕೆ 33, ಶ್ರೀಚರಣಿ 7ಕ್ಕೆ 2).
ಸ್ವರ್ಣ ಪದಕ ಪಂದ್ಯ 
ಯಾವಾಗ: ಮಂಗಳವಾರ
ಭಾರತ-ಶ್ರೀಲಂಕಾ
ಆರಂಭ: ಬೆಳಗ್ಗೆ 10.30
ಕಂಚಿನ ಪದಕ ಪಂದ್ಯ
ಪಾಕ್ -ಬಾಂಗ್ಲಾ
ಆರಂಭ: ಬೆಳಗ್ಗೆ 5.30 
ನೇರಪ್ರಸಾರ: ಸೋನಿ ಸ್ಪೋರ್ಟ್ಸ್, ಸೋನಿ ಲಿವ್
1. ಶೆಫಾಲಿ ವರ್ಮ ಏಷ್ಯನ್ ಗೇಮ್ಸ್‌ನಲ್ಲಿ ಶತಕ ಸಿಡಿಸಿದ ಮೊದಲ ಹಾಗೂ ಟಿ20ಯಲ್ಲಿ ಈ ಸಾಧನೆ ಮಾಡಿದ ಭಾರತದ 3ನೇ ಆಟಗಾರ್ತಿ ಎನಿಸಿದರು. ಸ್ಮತಿ ಮಂದನಾ (2), ಹರ್ಮಾನ್‌ಪ್ರೀತ್ ಹಿಂದಿನ ಸಾಧಕಿಯರು. 
9. ಶೆಫಾಲಿ ವರ್ಮ ಟಿ20 ಇನಿಂಗ್ಸ್‌ವೊಂದರಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ (9) ಡಿಯಾಂಡ್ರಾ ಡಾಟಿನ್ ದಾಖಲೆ ಸರಗಟ್ಟಿದರು. ಬ್ರೆಜಿಲ್‌ನ ಲೌರಾ ಅಗಥಾ (11) ಅಗ್ರಸ್ಥಾನದಲ್ಲಿದ್ದಾರೆ. 
1. ಸ್ಮತಿ ಮಂದನಾ (4,788) ಅಂತಾರಾಷ್ಟ್ರೀಯ ಮಹಿಳಾ ಟಿ20ಯಲ್ಲಿ ಸರ್ವಾಧಿಕ ರನ್‌ಗಳಿಸಿದ ನ್ಯೂಜಿಲೆಂಡ್‌ನ ಸುಜು ಬೇಟ್ಸ್ (4,758) ದಾಖಲೆ ಹಿಂದಿಕ್ಕಿದರು. 
100. ಸ್ಮತಿ ಮಂದನಾ (100) ಟಿ20ಯಲ್ಲಿ 100 ಸಿಕ್ಸರ್ ಪೂರೈಸಿದ ಭಾರತ ಮೊದಲ ಮಹಿಳಾ ಕ್ರಿಕೆಟರ್ ಎನಿಸಿದರು. ಇದರ ಬೆನ್ನಲ್ಲೇ ಶೆಫಾಲಿ ವರ್ಮ (104) ಈ ಸಾಧನೆ ಮಾಡಿದ 2ನೇ ಭಾರತೀಯ ಬ್ಯಾಟುಗಾರ್ತಿ ಎನಿಸಿದರು.