ಏಷ್ಯನ್ ಗೇಮ್ಸ್: ಭಾರತ-ಬಾಂಗ್ಲಾ ಸೆಮೀಸ್ ಕದನ, ಹರ್ಮಾನ್‌ಪ್ರೀತ್ ಜತೆಗೆ ಹ್ಯಾಂಡ್ ಶೇಕ್ ನಿರಾಕರಿಸಿದ್ದ ಬಾಂಗ್ಲಾ ನಾಯಕಿ!
ನಿಶ್ಶಿನ್: ಹಾಲಿ ಚಾಂಪಿಯನ್ ಭಾರತ ತಂಡ ಏಷ್ಯನ್ ಗೇಮ್ಸ್ ಮಹಿಳಾ ಕ್ರಿಕೆಟ್ ಸ್ಪರ್ಧೆಯಲ್ಲಿ ತನ್ನ ಕನಸಿನ ಓಟವನ್ನು ಮುಂದುವರಿಸುವ ಮೂಲಕ ಪ್ರಾಬಲ್ಯ ಕಾಯ್ದುಕೊಳ್ಳುವ ನಿರೀಕ್ಷೆ ಇದೆ. ಏಷ್ಯಾಕಪ್ ಗೆದ್ದ ಜೋಶ್‌ನಲ್ಲಿರುವ ಹರ್ಮಾನ್‌ಪ್ರೀತ್ ಕೌರ್ ಪಡೆ ಭಾನುವಾರ ಎರಡನೇ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ಸವಾಲು ಎದುರಿಸಲಿದೆ. ಭಾರತ ತಂಡ ಸತತ ಎರಡನೇ ಬಾರಿಯೂ ಫೈನಲ್‌ಗೇರುವ ಮೂಲಕ ಚಿನ್ನದ ಪದಕ ರಕ್ಷಿಸಿಕೊಳ್ಳುವ ಹಂಬಲದಲ್ಲಿದೆ.
ಕ್ವಾರ್ಟರ್ಫೈನಲ್ನಲ್ಲಿ ಜಪಾನ್ ಎದುರು ಸುಲಭ ಜಯ ಒಲಿಸಿಕೊಂಡಿದ್ದ ಭಾರತ ಉತ್ತಮ ಲಯದಲ್ಲಿದ್ದು, ಕಳೆದ ವಾರ ಏಷ್ಯಾಕಪ್‌ನಲ್ಲೂ ಬಾಂಗ್ಲಾ ತಂಡವನ್ನು 40 ರನ್‌ಗಳಿಂದ ಮಣಿಸಿತ್ತು. ಇನ್ನು ಬಾಂಗ್ಲಾದೇಶ, ಚೀನಾ ಎದುರು ಕಣಕ್ಕಿಳಿಯದೇ ಸೆಮೀಸ್‌ಗೇರಿದ್ದು, ಭಾರತ ವಿರುದ್ಧದ ಹಿಂದಿನ 9 ಮುಖಾಮುಖಿಗಳಲ್ಲಿ ಸೋಲು ಕಂಡಿದೆ. ಆದರೆ, ಏಷ್ಯಾಕಪ್ ಪಂದ್ಯದ ಟಾಸ್ ಪ್ರಕ್ರಿಯೆ ವೇಳೆ ಹರ್ಮಾನ್‌ಪ್ರೀತ್ ಕೌರ್ ಜತೆಗೆ ಹ್ಯಾಂಡ್ ಶೇಕ್ ಮಾಡಲು ನಿರಾಕರಿಸಿದ್ದ ನಡೆಗೆ ಟೀಕೆ ಎದುರಿಸಿದ್ದ ಬಾಂಗ್ಲಾ ನಾಯಕಿ ನೀಗರ್ ಸುಲ್ತಾನಾ ಏಷ್ಯನ್ ಗೇಮ್ಸ್ ಬಳಿಕ ನಾಯಕತ್ವ ತ್ಯಜಿಸಲಿದ್ದಾರೆ. ಇದಕ್ಕೆ ಮುನ್ನ ಏಷ್ಯಾಡ್ ಸೆಮೀಸ್‌ನಲ್ಲಿ ಹಸ್ತ ಲಾಘವ ಮಾಡಲು ಒಪ್ಪುವವರೇ ಎಂಬುದು ಕುತೂಹಲ ಮೂಡಿಸಿದೆ.
ಟಿ20 ವಿಶ್ವಕಪ್ ಬಳಿಕ ಆಡಿದ 6ರಲ್ಲೂ ಅಜೇಯವಾಗಿರುವ ಭಾರತ ತಂಡಕ್ಕೆ ದೀಪ್ತಿ ಶರ್ಮ, ಶ್ರೀಚರಣಿ ಸ್ಪಿನ್ ಜೋಡಿ ಪ್ರಮುಖ ಬಲ. ಈ ಜೋಡಿ ಹಾಲಿ ವರ್ಷ ಇದುವರೆಗೆ 74 ವಿಕೆಟ್ ಕಬಳಿಸಿದೆ. ಮೂರು ತಿಂಗಳ ನಂತರ ಶ್ರೇಯಾಂಕಾ ಪಾಟೀಲ್ ಪುನರಾಗಮನ ಮತ್ತಷ್ಟು ಬಲ ತುಂಬಿದೆ. ಜಪಾನ್‌ನ ಹೈಬ್ರಿಡ್ ಪಿಚ್ ಹೆಚ್ಚು ಪುಟಿತ ಜತೆಗೆ ತಿರುವು ಹೊಂದಿದ್ದು, ಭಾರತ ಮಧ್ಯಮ ಕ್ರಮಾಂಕಕ್ಕೂ ಸವಾಲೆನಿಸಿದೆ. ನಹಿದಾ ಅಖ್ತರ್, ರಬೀಯಾ ಖಾನ್ ಬಾಂಗ್ಲಾದೇಶದ ಬೌಲಿಂಗ್‌ಗೆ ಶಕ್ತಿ ತುಂಬಲಿದ್ದಾರೆ. 2023ರಲ್ಲಿ ಕೊನೆಯದಾಗಿ ಭಾರತ ಎದುರು ಬಾಂಗ್ಲಾ ಜಯ ಸಾಧಿಸಿತ್ತು.
ನೇರಪ್ರಸಾರ: ಸೋನಿ ಸ್ಪೋರ್ಟ್ಸ್, ಸೋನಿ ಲಿವ್.