ಏಷ್ಯನ್ ಗೇಮ್ಸ್: ಟೆಕ್‌ಬಾಲ್‌ನಲ್ಲಿ ಮೊದಲ ಪದಕ ಸನಿಹ ಭಾರತ
ನಗೋಯಾ: ಏಷ್ಯನ್ ಗೇಮ್ಸ್ 20ನೇ ಆವೃತ್ತಿಗೆ ಆವೃತ್ತಿಗೆ ಅಧಿಕೃತ ಚಾಲನೆ ಸಿಗುವ ಮುನ್ನವೇ ಟೆಕ್‌ಬಾಲ್ ಸ್ಪರ್ಧೆಯಲ್ಲಿ ಭಾರತಕ್ಕೆ ಐತಿಹಾಸಿಕ ಪದಕ ಸಿಗುವ ನಿರೀಕ್ಷೆ ಹರಡಿದೆ. ಟೆಕ್‌ಬಾಲ್ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕ್ವಿಮ್ಸಿ ಜೋಕಿಮ್ ಡಿಸೋಜಾ ಸೆಮಿಫೈನಲ್‌ಗೇರಿದ್ದಾರೆ.
ನಗೋಯಾ ಸಿಟಿಯ ಹಿಗಶಿ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ಶುಕ್ರವಾರ ನಡೆದ ಸ್ಪರ್ಧೆಯ ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಕ್ವಿಮ್ಸಿ ಜೋಕಿಮ್ಗೆ ಕ್ವಾರ್ಟರ್ ಫೈನಲ್‌ನಲ್ಲಿ ಬೈ ಲಭಿಸಿತು. ಶನಿವಾರ ನಡೆಯಲಿರುವ ಸೆಮೀಸ್‌ನಲ್ಲಿ ಇಂಡೋನೇಷ್ಯಾದ ಸುಮಾಯಾ ಸವಾಲು ಎದುರಿಸಲಿರುವ ಕ್ವಿಮ್ಸಿ ಜೋಕಿಮ್, ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಟೆಕ್‌ಬಾಲ್‌ನಲ್ಲಿ ಭಾರತಕ್ಕೆ ಮೊದಲ ಪದಕ ಖಚಿತವಾಗಲಿದೆ. ಸೋತರೂ ಕಂಚಿನ ಪದಕ್ಕಾಗಿ ಪ್ಲೇಆಫ್ ಪಂದ್ಯ ಆಡುವ ಅವಕಾಶ ಹೊಂದಿರಲಿದ್ದಾರೆ. ಏಷ್ಯನ್ ಗೇಮ್ಸ್‌ಗೆ ಇದೇ ಮೊದಲ ಬಾರಿಗೆ ಟೆಕ್‌ಬಾಲ್ ಸೇರ್ಪಡೆ ಮಾಡಲಾಗಿದೆ.
ಇದಕ್ಕೆ ಮುನ್ನ ನಡೆದ ಗುಂಪಿನ ಮೊದಲ ಪಂದ್ಯದಲ್ಲಿ 24 ವರ್ಷದ ಕ್ವಿಮ್ಸಿ ಜೋಕಿಮ್, ಅಗ್ರಶ್ರೇಯಾಂಕಿತೆ ಜಪಾನ್‌ನ ಯುಯಿನಾ ಸಕಮೊಟೊಗೆ 2-1 (10-12, 12-11, 13-11) ಅಂತರದಿಂದ ಸೋಲಿನ ಶಾಕ್ ನೀಡಿದರು. ನಂತರ 2ನೇ ಪಂದ್ಯದಲ್ಲಿ ಅದೇ ಲಯ ಮುಂದುವರಿಸಿದ ಮಹಾರಾಷ್ಟ್ರದ ಕ್ವಿಮ್ಸಿ ಜೋಕಿಮ್ 2-0 ರಿಂದ (12-9, 12-7) ಕಂಬೋಡಿಯಾದ ಕೋಮ್ಯನ್ ಡಿವೈ ಎದುರು ಗೆದ್ದು ಗುಂಪಿನಲ್ಲಿ ಅಗ್ರಸ್ಥಾನ ಪಡೆದರು. ಮಿಶ್ರ ಡಬಲ್ಸ್‌ನಲ್ಲಿ ಮೊಹಮದ್ ಅನಾಸ್ ಇಮ್ರಾನ್ ಬೇಗ್ ಹಾಗೂ ಕ್ವಿಮ್ಸಿ ಜೋಕಿಮ್ ಕ್ವಾರ್ಟರ್ ಫೈನಲ್ ಸೋತರೂ, ಕಂಚಿನ ಪದಕಕ್ಕಾಗಿ ರೆಪಷಾಷ್‌ನಲ್ಲಿ ಆಡುವ ಅರ್ಹತೆ ಪಡೆದಿದೆ. 2022ರಲ್ಲಿ ಟೆಕ್‌ಬಾಲ್ ಕ್ರೀಡೆ ಆಯ್ಕೆ ಮಾಡಿಕೊಂಡ ಫುಟ್‌ಬಾಲ್ ಮಾಜಿ ಆಟಗಾರ್ತಿ ಆಗಿರುವ ಕ್ವಿಮ್ಸಿ ಜೋಕಿಮ್ 7 ಬಾರಿ ರಾಷ್ಟ್ರೀಯ ಚಾಂಪಿಯನ್ ಎನಿಸಿದ್ದು, ವಿಶ್ವ ರ‌್ಯಾಂಕಿಂಗ್‌ನಲ್ಲಿ 24ನೇ ಸ್ಥಾನವೂ ಸಂಪಾದಿಸಿದ್ದಾರೆ. ಟೆಕ್‌ಬಾಲ್ ಆಟವೂ ಫುಟ್‌ಬಾಲ್ ಮತ್ತು ಟೇಬಲ್ ಟೆನಿಸ್‌ನ ಸಮ್ಮಿಶ್ರಣವಾಗಿದ್ದು, ಕೈಗಳು ಮತ್ತು ತೋಳುಗಳನ್ನು ಹೊರತುಪಡಿಸಿ ದೇಹದ ಇತರ ಭಾಗಗಳ ಸಹಾಯದೊಂದಿಗೆ ಆಡಬಹುದಾಗಿದೆ.