- ಈ ವರ್ಷದ ಸೆ.19ರಿಂದ ಏಷ್ಯನ್ ಗೇಮ್ಸ್
- ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಬೆನ್ನಲ್ಲೇ ಮಹಿಳಾ ತಂಡ ಪ್ರಕಟ
- ತಂಡದ ನಾಯಕಿಯಾಗಿ ಹರ್ಮನ್‌ಪ್ರೀತ್ ಕೌರ್, ಉಪನಾಯಕಿಯಾಗಿ ಸ್ಮೃತಿ ಮಂಧಾನ
Asian Games 2026: ಟಿ20 ವಿಶ್ವಕಪ್ ಟೂರ್ನಿಯ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತಲೇ ಬಂದಿದ್ದ ಭಾರತ ಮಹಿಳಾ ತಂಡ, ಬಲಿಷ್ಠ ಆಸ್ಟ್ರೇಲಿಯಾ ಎದುರು ಗೆಲುವು ಸಾಧಿಸಲು ವಿಫಲವಾಯಿತು. ನಿರ್ಣಾಯಕ ಪಂದ್ಯದಲ್ಲೇ ಸೋಲು ಅನುಭವಿಸಿದ ಟೀಮ್ ಇಂಡಿಯಾಗೆ ವಿಶ್ವಕಪ್ ಎತ್ತಿಹಿಡಿಯುವ ಆಸೆ ಕಮರಿತು. ಇದರ ಬೆನ್ನಲ್ಲೇ ಬಿಸಿಸಿಐ ಈಗ ಮುಂಬರುವ ಏಷ್ಯನ್ ಗೇಮ್ಸ್ಗೆ ಮಹಿಳಾ ತಂಡವನ್ನು ಪ್ರಕಟಿಸಿದೆ.
ಗ್ರೂಪ್ ಸ್ಟೇಜ್ ಹಂತದಲ್ಲೇ ಟಿ20 ವಿಶ್ವಕಪ್ನಿಂದ ಹೊರಬಿದ್ದ ಕೂಡಲೇ ಹರ್ಮನ್‌ಪ್ರೀತ್ ಕೌರ್ ನಾಯಕತ್ವ ಕುರಿತು ಸಾಕಷ್ಟು ವದಂತಿಗಳು ಹರಿದಾಡಿತು. ಇಲ್ಲಿಗೆ ಬಿಸಿಸಿಐ ಹರ್ಮನ್ರಿಂದ ಕ್ಯಾಪ್ಟನ್ಸಿಯನ್ನು ಕಸಿದುಕೊಳ್ಳಲಿದೆ. ಇನ್ಮುಂದೆ ಮಹಿಳಾ ತಂಡಕ್ಕೆ ಹೊಸಬರು ಕ್ಯಾಪ್ಟನ್ ಜವಾಬ್ದಾರಿ ಹೊರಬಹುದು ಎಂಬ ಸುದ್ದಿಗಳು ಕ್ರಿಕೆಟ್ ವಲಯದಲ್ಲಿ ಚರ್ಚೆಯಾಯಿತು. ಆದರೆ, ಇದ್ಯಾವುದಕ್ಕೂ ಆಸ್ಪದ ಕೊಡದ ಬಿಸಿಸಿಐ, ಮತ್ತೊಮ್ಮೆ ಹರ್ಮನ್ ಮೇಲೆ ಸಂಪೂರ್ಣ ನಂಬಿಕೆಯಿಟ್ಟಿದೆ.
ಈ ವರ್ಷದ ಏಷ್ಯನ್ ಗೇಮ್ಸ್ ಸೆ.19ರಿಂದ ಅ.4ರವರೆಗೆ ಜಪಾನ್‌ನಲ್ಲಿ ನಡೆಯಲಿದ್ದು, ಮೆಗಾ ಟೂರ್ನಮೆಂಟ್‌ಗಾಗಿ ಭಾರತೀಯ ಮಹಿಳಾ ತಂಡವನ್ನು ಬಿಸಿಸಿಐ ಅಧಿಕೃತವಾಗಿ ಘೋಷಿಸಿದೆ. ತಂಡದ ನಾಯಕಿಯಾಗಿ ಹರ್ಮನ್‌ಪ್ರೀತ್ ಕೌರ್ ಮತ್ತು ಉಪನಾಯಕಿಯಾಗಿ ಸ್ಮೃತಿ ಮಂಧಾನ ಕಣಕ್ಕಿಳಿಯಲಿದ್ದಾರೆ. ಟಿ20 ತಂಡದಲ್ಲಿದ್ದ ಬಹುತೇಕ ಆಟಗಾರ್ತಿಯರೇ ಇಲ್ಲಿಗೂ ಆಯ್ಕೆಯಾಗಿದ್ದಾರೆ.
ಕನ್ನಡತಿ, 'ಟಗರು ಪುಟ್ಟಿ'ಗೂ ಅವಕಾಶ
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗಂಭೀರವಾಗಿ ಗಾಯಗೊಂಡ ಕನ್ನಡತಿ, ಶ್ರೇಯಾಂಕಾ ಪಾಟೀಲ್, ಇಂಜುರಿಯ ಕಾರಣ ತಂಡದಿಂದ ಹೊರಗುಳಿದಿದ್ದಾರೆ. ಪ್ರಸ್ತುತ ಚಿಕಿತ್ಸೆ ಪಡೆದು ವಿಶ್ರಾಂತಿಯಲ್ಲಿರುವ ಟಗರು ಪುಟ್ಟಿಗೂ ಏಷ್ಯನ್ ಗೇಮ್ಸ್ ಮಹಿಳಾ ತಂಡದಲ್ಲಿ ಚಾನ್ಸ್ ನೀಡಲಾಗಿದೆ. ಆದ್ರೆ, ಅದು ಅವರ ಸಂಪೂರ್ಣ ಚೇತರಿಕೆ ಮೇಲೆ ನಿಂತಿದೆ. ಇನ್ನೆರೆಡು ತಿಂಗಳಲ್ಲಿ ಶ್ರೇಯಾಂಕಾ ಫಿಟ್ ಆಗಿ ಕಣಕ್ಕಿಳಿಯುವ ಭರವಸೆ ನೀಡಿದರೆ, ಅವರಿಗೆ ಟೀಮ್ ಇಂಡಿಯಾದಲ್ಲಿ ಅವಕಾಶ ಸಿಗಲಿದೆ. ಇಲ್ಲದಿದ್ದಲ್ಲಿ, ಅವರ ಸ್ಥಾನ ಮತ್ತೊಬ್ಬರ ಪಾಲಾಗಲಿದೆ.
ಭಾರತ ಮಹಿಳಾ ತಂಡ
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶೆಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್, ಜಿ. ಕಮಿಲಿನಿ, ಭಾರತಿ ಪುಲ್ಮಾಲಿ, ಶ್ರೀ ಚರಣಿ, ರೇಣುಕಾ ಠಾಕೂರ್, ಕ್ರಾಂತಿ ಗೌಡ್, ಅರುಂಧತಿ ರೆಡ್ಡಿ, ಶ್ರೇಯಾಂಕ ಪಾಟೀಲ್, ರಾಧಾ ಯಾದವ್, ನಂದಿನಿ ಶರ್ಮಾ,(ಏಜೆನ್ಸೀಸ್).