Asian Games: ಟಿ20 ಕ್ರಿಕೆಟ್ ಸ್ಪರ್ಧೆಯ ಡ್ರಾ ಪ್ರಕಟ; ಭಾರತ-ಪಾಕ್ ಸೆಮೀಸ್ ಫೈಟ್?
ನವದೆಹಲಿ: ಹಾಲಿ ಚಾಂಪಿಯನ್ ಭಾರತ ಹಾಗೂ ಪಾಕಿಸ್ತಾನ ತಂಡಗಳು ಏಷ್ಯನ್ ಗೇಮ್ಸ್ ಟಿ20 ಕ್ರಿಕೆಟ್ ಸ್ಪರ್ಧೆಯ ಸೆಮಿಫೈನಲ್‌ನಲ್ಲಿ ಎದುರಾಗುವ ನಿರೀಕ್ಷೆ ಹರಡಿದೆ. ಸೆಪ್ಟೆಂಬರ್ 19ರಿಂದ ಅಕ್ಟೋಬರ್ 4ರವರೆಗೆ ಜಪಾನ್‌ನ ಐಚಿ-ನಗೋಯಾದಲ್ಲಿ ನಿಗದಿಯಾಗಿರುವ ಕೂಟದ ಡ್ರಾ ಪ್ರಕಟಗೊಂಡಿದ್ದು, ಕ್ರಿಕೆಟ್ ಸ್ಪರ್ಧೆಯಲ್ಲಿ ಭಾರತ ಪುರುಷರ-ಮಹಿಳಾ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್‌ಗೆ ಬೈ ಪಡೆದಿವೆ. ಭಾರತ ಜತೆಗೆ ಅಗ್ರ ಶ್ರೇಯಾಂಕಿತ ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ ತಂಡಗಳಿಗೂ ನಾಕೌಟ್ ಅರ್ಹತೆ ಲಭಿಸಿದೆ.
ಟಿ20 ಕ್ರಿಕೆಟ್ ಏಷ್ಯನ್ ಗೇಮ್ಸ್‌ನಲ್ಲಿ 4ನೇ ಬಾರಿ ಆಡಲಾಗುತ್ತಿದ್ದು, ಪುರುಷರು ಹಾಗೂ ಮಹಿಳೆಯರ ವಿಭಾಗದಲ್ಲಿ ಭಾರತ ಹಾಲಿ ಚಾಂಪಿಯನ್ ಎನಿಸಿದೆ. ಪುರುಷರ ವಿಭಾಗದ ಪಂದ್ಯಗಳು ಸೆ.24 ರಿಂದ ಅ. 1ರವರೆಗೆ ನಿಗದಿಯಾಗಿದ್ದು, ಒಟ್ಟು 10 ತಂಡಗಳ ಪೈಕಿ 4 ತಂಡಗಳು ನೇರವಾಗಿ ನಾಕೌಟ್‌ಗೇರಿದ್ದು, ಉಳಿದಂತೆ ಅ್ಘಾನಿಸ್ತಾನ, ಜಪಾನ್, ನೇಪಾಳ (ಎ ಗುಂಪು), ಹಾಂಕಾಂಗ್, ಮಲೇಷ್ಯಾ, ಓಮನ್ (ಬಿ ಗುಂಪು) ಸಹಿತ ಆರು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಗುಂಪಿನ ಅಗ್ರ 2 ತಂಡಗಳು ಅಗ್ರ ಶ್ರೇಯಾಂಕಿತ 4 ತಂಡಗಳಿಗೆ ಕ್ವಾರ್ಟರ್ಫೈನಲ್ನಲ್ಲಿ ಸವಾಲೊಡ್ಡಲಿವೆ.
ಮಹಿಳಾ ವಿಭಾಗದ ಪಂದ್ಯಗಳು ಸೆ.17ರಂದು ಕ್ವಾರ್ಟರ್ಫೈನಲ್ ಹಂತದಿಂದ ಆರಂಭವಾಗಲಿದ್ದು,
22ರಂದು ಫೈನಲ್ ನಿಗದಿಯಾಗಿದೆ. ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕ್ ಫೈನಲ್‌ಗೇರಿದರೆ ಮಾತ್ರ ಪರಸ್ಪರ ಎದುರಾಗಲಿವೆ. ಎಂಟು ತಂಡಗಳು ಭಾಗವಹಿಸಲಿದ್ದು, ಹಾಲಿ ಚಾಂಪಿಯನ್ ಭಾರತ ಕ್ವಾರ್ಟರ್ಫೈನಲ್ನಲ್ಲಿ ಜಪಾನ್ ಎದುರು ಅಭಿಯಾನ ಆರಂಭಿಸಲಿದೆ. ಸೆಮಿಫೈನಲ್‌ನಲ್ಲಿ ಚೀನಾ ಅಥವಾ ಬಾಂಗ್ಲಾದೇಶ ಎದುರಾಗುವ ಸಾಧ್ಯತೆಗಳಿವೆ. ಏಷ್ಯಾಡ್‌ನಲ್ಲಿ ಶ್ರೇಯಸ್ ಅಯ್ಯರ್ ಮತ್ತು ಹರ್ಮಾನ್‌ಪ್ರೀತ್ ಕೌರ್ ಕ್ರಮವಾಗಿ ಭಾರತ ಪುರುಷರ-ಮಹಿಳಾ ತಂಡಗಳನ್ನು ಮುನ್ನಡೆಸಲಿದ್ದಾರೆ.