ಮಹಿಳೆಯರ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟಿ20: ಸೆಮಿಫೈನಲ್ಗೇರಿದ ಭಾರತ ಎ
ಬ್ಯಾಂಕಾಕ್: ಎಡಗೈ ಸ್ಪಿನ್ನರ್ (Tanuja Kanwar) ತನುಜಾ ಕನ್ವರ್ (12ಕ್ಕೆ 4) ಸಹಿತ ಸ್ಪಿನ್ನರ್ಗಳ ಬಿಗಿ ದಾಳಿ ಮತ್ತು ಕನ್ನಡತಿ (Dinesh Vrinda) ವೃಂದಾ ದಿನೇಶ್ (39*ರನ್, 18 ಎಸೆತ, 9 ಬೌಂಡರಿ) ಸಮಯೋಚಿತ ಬ್ಯಾಟಿಂಗ್ ಬಲದಿಂದ ಭಾರತ ಎ ತಂಡ ಮಹಿಳೆಯರ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟಿ20 (Asia Cup Rising Stars) ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ರಾಧಾ ಯಾದವ್ ಬಳಗ ಮಂಗಳವಾರ ನಡೆದ 3ನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ನೇಪಾಳ ಎದುರು 7 ವಿಕೆಟ್ಗಳಿಂದ ಸುಲಭ ಗೆಲುವು ಸಾಧಿಸಿತು.
ಟೆರ್ಡ್ಥಾಯಿ ಕ್ರಿಕೆಟ್ ಗ್ರೌಂಡ್ನಲ್ಲಿ ಕಾದಾಟದಲ್ಲಿ ಭಾರತ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲ ಬ್ಯಾಟಿಂಗ್ಗೆ ಇಳಿದ ನೇಪಾಳ, ಭಾರತೀಯ ಸ್ಪಿನ್ ದಾಳಿ ಎದುರು ರನ್ ಗಳಿಸಲು ತಿಣುಕಾಡಿ 18 ಓವರ್ಗಳಲ್ಲಿ 78 ರನ್ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಭಾರತ 7.5 ಓವರ್ಗಳಲ್ಲೇ 3 ವಿಕೆಟ್ಗೆ 82 ರನ್ ಗಳಿಸಿ, ಇನ್ನೂ 73 ಎಸೆತ ಬಾಕಿ ಇರುವಂತೆ ಜಯಿಸಿತು.
ಟೂರ್ನಿಯ ಮೊದಲ ಪಂದ್ಯದಲ್ಲಿ ಯುಎಇ ವಿರುದ್ಧ ಆಘಾತ ಎದುರಿಸಿದ್ದ ಭಾರತ, ನಂತರ ಸತತ 2 ಜಯದೊಂದಿಗೆ ಪುಟಿದೆದ್ದಿದೆ. ಈ ಮೂಲಕ ಭಾರತ 4 ಅಂಕ ಮತ್ತು +3.042 ರನ್ರೇಟ್ನೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದರೆ, ಯುಎಇ ವಿರುದ್ಧ ಗೆದ್ದ ಪಾಕ್ 4 ಅಂಕ ಗಳಿಸಿದರೂ, ರನ್ರೇಟ್ನಲ್ಲಿ(0.457) ಹಿಂದೆ ಬಿದ್ದು, ಗುಂಪಿನ 2ನೇ ಸ್ಥಾನದೊಂದಿಗೆ ಉಪಾಂತ್ಯಕ್ಕೇರಿತು. ಯುಎಇ ಕೂಡ 4 ಅಂಕ ಗಳಿಸಿದರೂ, ಕಳಪೆ ರನ್ರೇಟ್ನಿಂದಾಗಿ (-0.765) ಹೊರಬಿದ್ದಿತು.
ನೇಪಾಳ: 18 ಓವರ್ಗಳಲ್ಲಿ 78 (ಬಿಂದು ರಾವಲ್ 11, ಸಂಜಾನಾ 22, ಪೂಜಾ 10, ರುಬಿ 12, ತನುಜಾ 12ಕ್ಕೆ 4, ರಾಧಾ 17ಕ್ಕೆ 2, ಮಿನ್ನು ಮಣಿ 8ಕ್ಕೆ 3), ಭಾರತ ಎ: 7.5 ಓವರ್ಗಳಲ್ಲಿ 3 ವಿಕೆಟ್ಗೆ 82 (ವೃಂದಾ 39*, ಅನುಷ್ಕಾ 10, ತೇಜಲ್ 18, ಮನೀಷಾ 28ಕ್ಕೆ 1, ಸೀತಾ ರಾಣಾ 9ಕ್ಕೆ 1), ಪಂದ್ಯಶ್ರೇಷ್ಠ: ತನುಜಾ ಕನ್ವರ್.
ಲಂಕಾ/ಥಾಯ್ಲೆಂಡ್ ಸೆಮೀಸ್ ಎದುರಾಳಿ
ಭಾರತ ತಂಡ ಇನ್ನು ಶುಕ್ರವಾರ ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಅಥವಾ ಥಾಯ್ಲೆಂಡ್ ತಂಡವನ್ನು ಎದುರಿಸಲಿದೆ. ಲಂಕಾ-ಥಾಯ್ಲೆಂಡ್ ನಡುವೆ ಬುಧವಾರ ಬಿ ಗುಂಪಿನ ಕೊನೇ ಲೀಗ್ ಪಂದ್ಯ ನಡೆಯಲಿದ್ದು, ಇದರಲ್ಲಿ ಗೆದ್ದ ತಂಡ ಭಾರತಕ್ಕೆ ಎದುರಾಳಿಯಾಗಲಿದೆ. ಬಾಂಗ್ಲಾದೇಶ ತಂಡ ಬಿ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ನಿರೀಕ್ಷೆ ಇದ್ದು, 2ನೇ ಸೆಮೀಸ್ನಲ್ಲಿ ಪಾಕಿಸ್ತಾನಕ್ಕೆ ಎದುರಾಳಿಯಾಗಲಿದೆ.