PBKSvsLSG  
ಕ್ರಿಕೆಟ್

ಆರ್ಯ-ಕೊನೊಲಿ ಸಿಡಿಲಬ್ಬರದ ಬ್ಯಾಟಿಂಗ್‌: ಲಖನೌಗೆ 255 ರನ್‌ಗಳ ಬಿಗ್ ಟಾರ್ಗೆಟ್ ನೀಡಿದ ಪಂಜಾಬ್ ಕಿಂಗ್ಸ್! | PBKSvsLSG

PBKSvsLSG: ಇಂದು (ಏ.19) ಮುಲ್ಲನ್‌ಪುರದ ಅಂಗಳದಲ್ಲಿ ನಡೆಯುತ್ತಿರುವ ಲಖನೌ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಕಿಂಗ್ಸ್ 7 ವಿಕೆಟ್​ ನಷ್ಟಕ್ಕೆ 254 ರನ್​ ಕಲೆಹಾಕಿದೆ.
ಟಾಸ್​ ಗೆದ್ದ ಲಖನೌ ತಂಡದ ನಾಯಕ ರಿಷಭ್ ಪಂತ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ನಾಯಕನ ನಿರ್ಧಾರವನ್ನು ಸರಿ ಎಂದು ಸಾಬೀತುಪಡಿಸಿದ ಅನುಭವಿ ವೇಗಿ ಮೊಹಮ್ಮದ್ ಶಮಿ, ಪಂದ್ಯದ ಮೊದಲ ಓವರ್‌ನ ಮೂರನೇ ಎಸೆತದಲ್ಲೇ ಅಪಾಯಕಾರಿ ಪ್ರಭ್‌ಸಿಮ್ರಾನ್ ಸಿಂಗ್​ರನ್ನು ಪೆವಿಲಿಯನ್‌ಗೆ ಅಟ್ಟಿದರು. ಈ ಆರಂಭಿಕ ಆಘಾತದಿಂದ ಪಂಜಾಬ್ ಸಂಕಷ್ಟಕ್ಕೆ ಸಿಲುಕಬಹುದು ಎಂದು ಅನೇಕರು ಭಾವಿಸಿದ್ದರು. ಆದರೆ, ನಂತರ ಕ್ರೀಸ್‌ಗೆ ಬಂದ ಪ್ರಿಯಾಂಶ್ ಆರ್ಯ ಮತ್ತು ಕೂಪರ್ ಕೊನೊಲಿ ಪಂದ್ಯದ ಚಿತ್ರಣವನ್ನೇ ಬದಲಿಸಿದರು.
ಲಖನೌ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಪ್ರಿಯಾಂಶ್ ಆರ್ಯ ಮತ್ತು ಕೂಪರ್ ಕೊನೊಲಿ ಕೇವಲ 80 ಎಸೆತಗಳಲ್ಲಿ 182 ರನ್‌ಗಳ ದಾಖಲೆಯ ಜೊತೆಯಾಟವಾಡಿದರು. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದ ಈ ಜೋಡಿ ಲಖನೌ ಬೌಲಿಂಗ್ ಪಡೆಯನ್ನು ಅಕ್ಷರಶಃ ಹೈರಾಣಾಗಿಸಿತು. ಅತ್ಯಂತ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ಪ್ರಿಯಾಂಶ್ ಆರ್ಯ ಕೇವಲ 37 ಎಸೆತಗಳಲ್ಲಿ 93 ರನ್ ಸಿಡಿಸಿದರು. ಇವರ ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 4 ಆಕರ್ಷಕ ಬೌಂಡರಿ ಹಾಗೂ ಭರ್ಜರಿ 9 ಸಿಕ್ಸರ್‌ಗಳು ಸೇರಿದ್ದವು. ಪ್ರಿಯಾಂಶ್‌ಗೆ ತಕ್ಕ ಸಾಥ್ ನೀಡಿದ ಕೂಪರ್ ಕೊನೊಲಿ, ತಾನೇನು ಕಮ್ಮಿ ಇಲ್ಲ ಎನ್ನುವ ರೀತಿಯಲ್ಲಿ 46 ಎಸೆತಗಳಲ್ಲಿ 87 ರನ್‌ಗಳ ಅಮೂಲ್ಯ ಕಾಣಿಕೆ ನೀಡಿದರು.
ಶಮಿ ಆರಂಭಿಕ ಯಶಸ್ಸು ನೀಡಿದರೂ, ನಂತರದ ಓವರ್‌ಗಳಲ್ಲಿ ರನ್ ವೇಗಕ್ಕೆ ಕಡಿವಾಣ ಹಾಕಲು ಲಕ್ನೋ ಬೌಲರ್‌ಗಳು ವಿಫಲರಾದರು. ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 254 ರನ್‌ಗಳ ಶಿಖರವನ್ನೇ ನಿರ್ಮಿಸಿತು. ಯುವ ವೇಗಿ ಪ್ರಿನ್ಸ್ ಯಾದವ್​ ತಮ್ಮ ನಾಲ್ಕು ಓವರ್​ಗಳಲ್ಲಿ ಕೇವಲ 25 ರನ್​ ನೀಡಿ ಎರಡು ನಿರ್ಣಾಯಕ ವಿಕೆಟ್​ ಪಡೆದರು(ಏಜೆನ್ಸೀಸ್​).