ಅರ್ಷದೀಪ್ ಸಿಂಗ್ ಪೋಸ್ಟ್ಗಳು ಡಿಲೀಟ್! ಹೀಗಿದೆ ಕಾರಣ...
ನವದೆಹಲಿ: ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ 14 ಪಂದ್ಯಗಳಲ್ಲಿ 14 ವಿಕೆಟ್ಗಳಿಗೆ ತೃಪ್ತಿಪಟ್ಟಿದ್ದಲ್ಲದೆ, ಪ್ರತಿ ಓವರ್ಗೆ 10ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟು ನಿರಾಸೆ ಅನುಭವಿಸಿದ್ದ ಟೀಮ್ ಇಂಡಿಯಾದ ಎಡಗೈ ವೇಗಿ ಅರ್ಷದೀಪ್ ಸಿಂಗ್ (Arshdeep Singh), ಸಾಮಾಜಿಕ ಜಾಲತಾಣದಿಂದ ದೂರ ಉಳಿಯಲು ಮುಂದಾಗಿದ್ದಾರೆ.
ಐಪಿಎಲ್ ವೇಳೆ ಆನ್ಲೈನ್ನಲ್ಲೇ ಹೆಚ್ಚಿನ ಸಮಯ ಕಳೆದಿದ್ದ ಅರ್ಷದೀಪ್, ಫಾರ್ಮ್ ಕಳೆದುಕೊಳ್ಳಲು ಇದೇ ಕಾರಣ ಎಂಬ ಟೀಕೆಗಳೂ ಬಂದಿದ್ದವು. ಇದರಿಂದಾಗಿ ಅವರು ಇನ್ಸ್ಟಾಗ್ರಾಂನಲ್ಲಿದ್ದ (Instagram) ತನ್ನ ನೂರಾರು ಪೋಸ್ಟ್ ಮತ್ತು ರೀಲ್ಸ್ಗಳನ್ನು ಡಿಲೀಟ್ ಮಾಡಿದ್ದಾರೆ. ಅವರೀಗ 44 ಪೋಸ್ಟ್ಗಳನ್ನು ಮಾತ್ರ ಉಳಿಸಿಕೊಂಡಿದ್ದಾರೆ. ಕಳೆದ ವರ್ಷ ಡಿಸೆಂಬರ್ನಲ್ಲಿ ವಿರಾಟ್ ಕೊಹ್ಲಿ ಏಕದಿನದಲ್ಲಿ ಸತತ 2 ಶತಕ ಸಿಡಿಸಿದ ಬಳಿಕ ಅವರೊಂದಿಗೆ ಮಾಡಿದ್ದ ವೈರಲ್ ವಿಡಿಯೋವನ್ನು ಕೂಡ ಅರ್ಷದೀಪ್ ಡಿಲೀಟ್ ಮಾಡಿದ್ದಾರೆ.
ಐಪಿಎಲ್ ವೇಳೆ ಅರ್ಷದೀಪ್ ಕೆಲ ವಿವಾದಗಳನ್ನೂ ಎದುರಿಸಿದ್ದರು. ತಿಲಕ್ ವರ್ಮ ಬಣ್ಣದ ಬಗ್ಗೆ ಅವರು ತನ್ನ ವ್ಲಾಗ್ನಲ್ಲಿ ಮಾಡಿದ ಕಮೆಂಟ್, ಜನಾಂಗೀಯ ನಿಂದನೆಯ ಆರೋಪ ಎದುರಿಸಿತ್ತು. ಅಲ್ಲದೆ ಅವರು ಐಪಿಎಲ್ ವೇಳೆ ಗರ್ಲ್ಫ್ರೆಂಡ್ ಜತೆಯಲ್ಲೇ ಹೆಚ್ಚಿನ ಸಮಯ ಕಳೆದಿದ್ದರು. ಇದರಿಂದಾಗಿ ಬಿಸಿಸಿಐ, ಕ್ರಿಕೆಟಿಗರ ಗೆಳತಿಯರಿಂದ ಮಾಹಿತಿ ಸೋರಿಕೆಯ ಭೀತಿ ವ್ಯಕ್ತಪಡಿಸಿ, ಕೆಲ ನಿರ್ಬಂಧಗಳನ್ನೂ ಹೇರಿತ್ತು.