ನವದೆಹಲಿ: ಐಪಿಎಲ್ 2026ರ ಮಧ್ಯೆ ಪಂಜಾಬ್ ಕಿಂಗ್ಸ್ ವೇಗದ ಬೌಲರ್ ಅರ್ಷದೀಪ್ ಸಿಂಗ್(Arshdeep Singh) ವಿರುದ್ಧ ದೊಡ್ಡ ವಿವಾದ ಭುಗಿಲೆದ್ದಿದೆ. ಮುಂಬೈ ಇಂಡಿಯನ್ಸ್ ಆಟಗಾರ ತಿಲಕ್ ವರ್ಮಾ ಅವರ ಚರ್ಮದ ಬಣ್ಣ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆ ಸಾಮಾಜಿಕ ಜಾಲತಾಣಗಳಲ್ಲಿ ಅರ್ಷದೀಪ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ವಿವಾದದ ನಡುವೆ ಮಾಜಿ ಭಾರತೀಯ ಕ್ರಿಕೆಟಿಗ ಲಕ್ಷ್ಮಣ ಶಿವರಾಮಕೃಷ್ಣನ್ ಕಠಿಣ ಕ್ರಮಕ್ಕೆ ಆಗ್ರಹಿಸಿ, “ಅರ್ಷದೀಪ್‌ಗೆ ಈ ಸೀಸನ್ ಸಂಪೂರ್ಣ ನಿಷೇಧ ಹೇರಬೇಕು” ಎಂದು ಹೇಳಿದ್ದಾರೆ.
ವೈರಲ್ ಆದ ವಿಡಿಯೊದಿಂದ ವಿವಾದ
ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯಕ್ಕೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಡಿಯೊವೊಂದು ವಿವಾದಕ್ಕೆ ಕಾರಣವಾಯಿತು. ವಿಡಿಯೊದಲ್ಲಿ ಅರ್ಷದೀಪ್ ಸಿಂಗ್, ತಿಲಕ್ ವರ್ಮಾ ಅವರ ಚರ್ಮದ ಬಣ್ಣದ ಬಗ್ಗೆ ಟೀಕೆ ಮಾಡಿದಂತೆ ಕಾಣಿಸಿದೆ ಎಂದು ಹಲವರು ಆರೋಪಿಸಿದ್ದಾರೆ. “ಅಂಧೇರೇ” ಹಾಗೂ ಸನ್‌ಸ್ಕ್ರೀನ್ ಕುರಿತು ಮಾಡಿದ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ.
ಈ ವಿಡಿಯೊ ವೈರಲ್ ಆದ ತಕ್ಷಣ ಅನೇಕ ಕ್ರಿಕೆಟ್ ಅಭಿಮಾನಿಗಳು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರು ಇದನ್ನು ಜಾತೀಯ ಹಾಗೂ ಬಣ್ಣ ಆಧಾರಿತ ಟೀಕೆ ಎಂದು ಖಂಡಿಸಿದ್ದಾರೆ.
ಶಿವರಾಮಕೃಷ್ಣನ್ ಆಕ್ರೋಶ
ಈ ವಿವಾದಕ್ಕೆ ಮಾಜಿ ಸ್ಪಿನ್ನರ್ ಲಕ್ಷ್ಮಣ ಶಿವರಾಮಕೃಷ್ಣನ್ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಮಾಡಿರುವ ಅವರು, “ಯಾರೂ ನನ್ನನ್ನು ನಂಬಲಿಲ್ಲ. ಎಲ್ಲರೂ ನನ್ನನ್ನು ಟ್ರೋಲ್ ಮಾಡಿದರು. ಅರ್ಷದೀಪ್‌ಗೆ ಈ ಸೀಸನ್ ನಿಷೇಧ ಹೇರಬೇಕು” ಎಂದು ಬರೆದಿದ್ದಾರೆ.
ಅವರು ಇನ್ನೂ ಮುಂದೆ ಹೋಗಿ, “ಬಿಸಿಸಿಐ ಕ್ರಮ ಕೈಗೊಂಡರೆ ನನ್ನ ಮೇಲೂ ಜಾತೀಯ ಟೀಕೆ ಮಾಡಿದವರ ಹೆಸರುಗಳನ್ನು ಬಹಿರಂಗಪಡಿಸುತ್ತೇನೆ” ಎಂದು ಎಚ್ಚರಿಕೆ ನೀಡಿದ್ದಾರೆ.
“ಕ್ರಿಕೆಟ್‌ನಲ್ಲಿ ಜಾತೀಯ ಟೀಕೆ ಸಾಮಾನ್ಯವಾಗಬಾರದು”
ಶಿವರಾಮಕೃಷ್ಣನ್ ತಮ್ಮದೇ ಅನುಭವವನ್ನು ಉಲ್ಲೇಖಿಸಿ ಮಾತನಾಡಿದ್ದಾರೆ. ತಮ್ಮ ಆಟದ ದಿನಗಳಲ್ಲಿ ಕೂಡ ಚರ್ಮದ ಬಣ್ಣದ ಆಧಾರದ ಮೇಲೆ ಅವಮಾನ ಎದುರಿಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಇಂತಹ ಘಟನೆಗಳನ್ನು ತಮಾಷೆಯಾಗಿ ತೆಗೆದುಕೊಳ್ಳಬಾರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
“ಇದು ಕೇವಲ ಮಜಾ ಅಥವಾ ಸ್ನೇಹಿತರ ನಡುವಿನ ಮಾತಲ್ಲ. ವೃತ್ತಿಪರ ಕ್ರಿಕೆಟ್‌ನಲ್ಲಿ ಇಂತಹ ವರ್ತನೆಗಳಿಗೆ ಅವಕಾಶ ಇರಬಾರದು” ಎಂದು ಅವರು ಹೇಳಿದ್ದಾರೆ.
ತಿಲಕ್ ವರ್ಮಾ ಮೌನ
ವಿವಾದ ಭುಗಿಲೆದ್ದಿದ್ದರೂ ತಿಲಕ್ ವರ್ಮಾ ಈ ವಿಷಯದ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವಿಡಿಯೊದಲ್ಲಿ ಅವರು ನಗುತ್ತಾ ಪರಿಸ್ಥಿತಿಯನ್ನು ಸಮಾಧಾನಪಡಿಸಲು ಪ್ರಯತ್ನಿಸಿದಂತೆ ಕಂಡುಬಂದಿದೆ ಎಂದು ವರದಿಗಳು ಹೇಳಿವೆ.
ಇನ್ನೊಂದೆಡೆ, ಅರ್ಷದೀಪ್ ಸಿಂಗ್ ಅಥವಾ ಪಂಜಾಬ್ ಕಿಂಗ್ಸ್ ತಂಡದಿಂದಲೂ ಅಧಿಕೃತ ಸ್ಪಷ್ಟನೆ ಇನ್ನೂ ಹೊರಬಂದಿಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ
ಈ ಘಟನೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಶುರುವಾಗಿದೆ. ಕೆಲವರು ಅರ್ಷದೀಪ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರೆ, ಇನ್ನೂ ಕೆಲವರು ಇದನ್ನು ಸ್ನೇಹಿತರ ನಡುವಿನ ಸಾಮಾನ್ಯ ಮಾತುಕತೆ ಎಂದು ಪರಿಗಣಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಆದರೆ ಹೆಚ್ಚಿನವರು ಸಾರ್ವಜನಿಕ ವ್ಯಕ್ತಿಗಳು ಹಾಗೂ ರಾಷ್ಟ್ರೀಯ ತಂಡದ ಆಟಗಾರರು ಮಾತನಾಡುವಾಗ ಹೆಚ್ಚು ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಹೇಳಿದ್ದಾರೆ.
ಬಿಸಿಸಿಐ ಕ್ರಮ ಕೈಗೊಳ್ಳುತ್ತದೆಯೇ?
ಈ ವಿವಾದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ವಿಷಯ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಹಿನ್ನೆಲೆ ಮಂಡಳಿ ಪರಿಸ್ಥಿತಿಯನ್ನು ಗಮನಿಸುತ್ತಿದೆ ಎಂದು ವರದಿಗಳು ಸೂಚಿಸಿವೆ.
ಕ್ರಿಕೆಟ್‌ನಲ್ಲಿ ಜಾತೀಯ ಹಾಗೂ ಬಣ್ಣ ಆಧಾರಿತ ಟೀಕೆಗಳ ವಿರುದ್ಧ ವಿಶ್ವದಾದ್ಯಂತ ಕಠಿಣ ನಿಲುವು ಇರುವುದರಿಂದ, ಈ ಪ್ರಕರಣ ಮುಂದಿನ ದಿನಗಳಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.
ಮೈದಾನದಲ್ಲಿ ತಿಲಕ್ ಮಿಂಚು
ವಿವಾದದ ನಡುವೆಯೇ ಟಿಲಕ್ ವರ್ಮಾ ಮೈದಾನದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅಜೇಯ 75 ರನ್ ಗಳಿಸಿ ಮುಂಬೈ ಇಂಡಿಯನ್ಸ್‌ಗೆ ಗೆಲುವು ತಂದುಕೊಟ್ಟಿದ್ದಾರೆ,(ಏಜೆನ್ಸೀಸ್).