ಟೀಮ್ ಇಂಡಿಯಾ ವೇಗಿ ಅರ್ಷದೀಪ್ ಸಿಂಗ್ 
ಕ್ರಿಕೆಟ್

ಟಿ20 ವಿಶ್ವಕಪ್​ ಗೆಲುವಿನ ಖುಷಿಯಲ್ಲಿದ್ದ ಅರ್ಷದೀಪ್​ಗೆ ಬಿಗ್ ಶಾಕ್​! ಐಸಿಸಿ ರೂಲ್ಸ್​ ಹೇಳುವುದೇನು? ಹೀಗಿದೆ ವರದಿ | Arshdeep Singh

ಪ್ರಮುಖ ಮುಖ್ಯಾಂಶಗಳು

  • ಟಿ20 ವಿಶ್ವಕಪ್​ ಗೆದ್ದು ದಾಖಲೆ ಬರೆದ ಟೀಮ್ ಇಂಡಿಯಾ
  • ಗೆಲುವಿನ ಸಂಭ್ರಮದಲ್ಲಿದ್ದ ವೇಗಿ ಅರ್ಷದೀಪ್​ ಸಿಂಗ್​ಗೆ ಐಸಿಸಿ ದಂಡ
  • ಮೈದಾನದಲ್ಲಿ ನಡೆದುಕೊಂಡ ರೀತಿಗೆ ಕಡೆಗೂ ದಂಡ ವಿಧಿಸಿದ ಐಸಿಸಿ
Arshdeep Singh: ಫೆಬ್ರವರಿ 7ರಂದು ಆರಂಭವಾಗಿ ಸುಮಾರು ಒಂದು ತಿಂಗಳುಗಳ ಕಾಲ ಕ್ರಿಕೆಟ್​ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದ ಟಿ20 ವಿಶ್ವಕಪ್ ಮೆಗಾಟೂರ್ನಿಗೆ ಟೀಮ್ ಇಂಡಿಯಾ ಗೆಲುವಿನ ಮೂಲಕ ತೆರೆಬಿದ್ದಿದೆ. ನ್ಯೂಜಿಲೆಂಡ್​ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ 96 ರನ್​ಗಳ ಭರ್ಜರಿ ಜಯ ದಾಖಲಿಸಿದ ಟೀಂ ಇಂಡಿಯಾ, ಮೂರನೇ ಬಾರಿ ವಿಶ್ವಕಪ್​ ಟ್ರೋಫಿ ಎತ್ತಿಹಿಡಿಯುವ ಮೂಲಕ ಹೊಸ ದಾಖಲೆಗಳನ್ನು ಸೃಷ್ಟಿಸಿದೆ. ಮತ್ತೊಂದೆಡೆ, ಇದೇ ಪಂದ್ಯದಲ್ಲಿ ಅರ್ಷದೀಪ್​ ಸಿಂಗ್ ಮಾಡಿದ ಎಡವಟ್ಟಿಗೆ ಈಗ ಐಸಿಸಿ ಭಾರೀ ದಂಡವನ್ನೇ ವಿಧಿಸಿದೆ.
ಫೈನಲ್ ಪಂದ್ಯದಲ್ಲಿ 256 ರನ್​ಗಳ ಬೃಹತ್​ ಗುರಿಯನ್ನು ಬೆನ್ನತ್ತಿದ ಕಿವೀಸ್​ ಪಡೆಗೆ 10 ಓವರ್​ನಲ್ಲೇ ಸ್ಟಾರ್ ಬ್ಯಾಟರ್​ಗಳ ಕೊರತೆ ಕಾಡಲಾರಂಭಿಸಿತು. ಒತ್ತಡದಲ್ಲಿದ್ದ ನ್ಯೂಜಿಲೆಂಡ್​ ಬ್ಯಾಟ್ಸ್‌ಮನ್ ಡರೈಲ್​ ಮಿಚೆಲ್ ಮತ್ತು ವೇಗಿ ಅರ್ಷದೀಪ್ ಸಿಂಗ್ ಮಧ್ಯೆ ನಡೆದ ಕಿತ್ತಾಟ ಎಲ್ಲರ ಗಮನ ಸೆಳೆಯಿತು. ಪಂದ್ಯದ ನಂತರ ಈ ಬಗ್ಗೆ ಅರ್ಷದೀಪ್ ಸಿಂಗ್ ಸ್ಪಷ್ಟನೆ ಸಹ ನೀಡಿದರು. ನಾನು ಚೆಂಡನ್ನು ಥ್ರೋ ಮಾಡಿದ್ದರಿಂದ ಅದು ಮಿಚೆಲ್​ಗೆ ಬಡಿಯಿತು. ಹೀಗಾಗಿ, ಸಣ್ಣ ವಾಗ್ವಾದ ನಡೆಯಿತು. ಆ ಓವರ್​ನ ಬಳಿಕ ನಾನು ಮಿಚೆಲ್‌ಗೆ ಕ್ಷಮೆಯಾಚಿಸಿದೆ ಕೂಡ ಎಂದು ತಿಳಿಸಿದರು.
ಟಿ20 ವಿಶ್ವಕಪ್​ ಗೆದ್ದ ಖುಷಿಯಲ್ಲಿ ತೇಲಾಡುತ್ತಿದ್ದ ಅರ್ಷದೀಪ್​ಗೆ ಕಡೆಗೂ ಬಿಸಿ ಮುಟ್ಟಿಸಿದ ಐಸಿಸಿ, ಸುಖಾಸುಮ್ಮನೆ ಎದುರಾಳಿ ತಂಡದ ಬ್ಯಾಟರ್​ ಮೇಲೆ ಬಾಲ್​ ಎಸೆದಿದ್ದು ತಪ್ಪು ಎಂದು ಎಚ್ಚರಿಸಿದೆ. ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವ ಟೀಮ್ ಇಂಡಿಯಾ ವೇಗಿ ಮಾಡಿರುವುದು ಅಕ್ಷರಶಃ ತಪ್ಪು ಎಂದಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್​, ಸಿಂಗ್​ಗೆ ಪಂದ್ಯ ಶುಲ್ಕದ ಶೇ.15ರಷ್ಟು ದಂಡ ಹಾಕಿದೆ.

ಯಾವ ರೂಲ್ಸ್​ ಬ್ರೇಕ್​?

ಆಟಗಾರರ ಹಿತದೃಷ್ಟಿಯಿಂದ ಮಾಡಿರುವ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.9 ಅನ್ನು ಅರ್ಷದೀಪ್​ ಸಿಂಗ್ ಉಲ್ಲಂಘಿಸಿದ್ದಾರೆ. ಈ ನಿಯಮ ಪ್ರಕಾರ, ಅಂತಾರಾಷ್ಟ್ರೀಯ ಪಂದ್ಯದ ಸಮಯದಲ್ಲಿ ಅನುಚಿತ ಮತ್ತು ಅಪಾಯಕಾರಿ ರೀತಿಯಲ್ಲಿ ಆಟಗಾರನ ಮೇಲೆ ಬಾಲ್​, ಬ್ಯಾಟ್​ ಅಥವಾ ಇತರ ಯಾವುದೇ ಕ್ರಿಕೆಟ್ ಉಪಕರಣಗಳನ್ನು ಎಸೆಯುವುದು ಅಕ್ಷಮ್ಯ ಎನ್ನಲಾಗಿದೆ.
ಐಸಿಸಿ ನಿಯಮಗಳ ಪ್ರಕಾರ, ಲೆವೆಲ್ 1 ಉಲ್ಲಂಘನೆಗೆ ಕನಿಷ್ಠ ವಾಗ್ದಂಡನೆ ಮತ್ತು ಆಟಗಾರರ ಪಂದ್ಯ ಶುಲ್ಕದ ಶೇ.50ರಷ್ಟು ದಂಡ ಮತ್ತು ಒಂದು ಅಥವಾ ಎರಡು ಡಿಮೆರಿಟ್ ಪಾಯಿಂಟ್​ಗಳನ್ನು ನೀಡಲಾಗುತ್ತದೆ. 24 ತಿಂಗಳೊಳಗೆ ಅಂದರೆ ಎರಡು ವರ್ಷದೊಳಗೆ 4 ಡಿಮೆರಿಟ್​ ಪಾಯಿಂಟ್​ ಏನಾದರೂ ಬಂದರೆ, ಅದು ಆಟಗಾರನ ನಿಷೇಧಕ್ಕೂ ಕಾರಣವಾಗಬಹುದು.

ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?

ಭಾರತ ನೀಡಿದ್ದ ಬೃಹತ್​ ಗುರಿಯನ್ನು ನ್ಯೂಜಿಲೆಂಡ್ ತಂಡ ಬೆನ್ನಟ್ಟುವಾಗ 11ನೇ ಓವರ್‌ ಅನ್ನು ಅರ್ಷದೀಪ್​ ಸಿಂಗ್​ ಎಸೆದರು. ಕಿವೀಸ್ ಬ್ಯಾಟರ್​ ಡರೈಲ್​ ಮಿಚೆಲ್ ಅರ್ಷದೀಪ್ ಸಿಂಗ್ ಅವರ ಬೌಲಿಂಗ್‌ನಲ್ಲಿ ಸತತ ಎರಡು ಸಿಕ್ಸರ್‌ಗಳನ್ನು ಬಾರಿಸಿದರು. ಆ ನಂತರ ಬಂದ ಚೆಂಡನ್ನು ನೇರವಾಗಿ ಹೊಡೆದಾಗ, ಅದು ನೇರವಾಗಿ ಅರ್ಷದೀಪ್ ಅವರ ಕೈಗೆ ಹೋಯಿತು. ತಕ್ಷಣ ಚೆಂಡನ್ನು ಹಿಡಿದುಕೊಂಡ ಅರ್ಷದೀಪ್,​ ಸ್ಟಂಪ್‌ಗಳ ಕಡೆಗೆ ಎಸೆದರು. ಆದಾಗ್ಯೂ, ಥ್ರೋ ಆಕಸ್ಮಿಕವಾಗಿ ಮಿಚೆಲ್ ಅವರ ತೊಡೆಗೆ ಬಡಿಯಿತು.
ಚೆಂಡು ಬಡಿದ ನಂತರ ತೀವ್ರ ಕೋಪಗೊಂಡ ಮಿಚೆಲ್, ಆಕ್ರೋಶದಿಂದ ಕೂಗಲು ಪ್ರಾರಂಭಿಸಿದರು ಮತ್ತು ಅರ್ಷದೀಪ್ ಕಡೆಗೆ ನಡೆದರು. ಇಬ್ಬರೂ ಪರಸ್ಪರ ವಾಗ್ವಾದ ನಡೆಸಿದ್ದರಿಂದ ಪರಿಸ್ಥಿತಿ ಉದ್ವಿಗ್ನವಾಯಿತು. ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಮತ್ತು ಅಂಪೈರ್‌ಗಳು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದರು. ಆದಾಗ್ಯೂ, ಉದ್ವಿಗ್ನತೆ ಹೆಚ್ಚು ಕಾಲ ಉಳಿಯಲಿಲ್ಲ. ಓವರ್ ನಂತರ, ಅರ್ಷದೀಪ್ ಮಿಚೆಲ್‌ಗೆ ಕ್ಷಮೆಯಾಚಿಸಿದರು ಮತ್ತು ಅವರನ್ನು ತಬ್ಬಿಕೊಂಡರು.