ಆಕ್ರೋಶಗೊಂಡು ಕೂಗಾಡಿದ ಮಿಚೆಲ್... ಅಷ್ಟಕ್ಕೂ ಏನಾಯ್ತು? ಕಿತ್ತಾಟದ ಅಸಲಿ ಕತೆ ಬಿಚ್ಚಿಟ್ಟ ಅರ್ಷದೀಪ್ ಸಿಂಗ್! Arshdeep Singh
- ಒಂದು ತಿಂಗಳುಗಳ ಕಾಲ ಭರ್ಜರಿ ಮನರಂಜನೆ ನೀಡಿದ ಟಿ20 ವಿಶ್ವಕಪ್ ಮೆಗಾಟೂರ್ನಿಗೆ ವಿದ್ಯುಕ್ತ ತೆರೆ
- ನ್ಯೂಜಿಲೆಂಡ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಿದ ಟೀಂ ಇಂಡಿಯಾ
- ವಿಶ್ವಕಪ್ ಟ್ರೋಫಿ ಎತ್ತಿಹಿಡಿಯುವ ಮೂಲಕ ಹೊಸ ದಾಖಲೆಗಳನ್ನು ಸೃಷ್ಟಿಸಿದ ಭಾರತ
Arshdeep Singh : ಫೆಬ್ರವರಿ 7ರಂದು ಆರಂಭವಾಗಿ ಸುಮಾರು ಒಂದು ತಿಂಗಳುಗಳ ಕಾಲ ಭರ್ಜರಿ ಮನರಂಜನೆ ನೀಡಿದ ಟಿ20 ವಿಶ್ವಕಪ್ ಮೆಗಾಟೂರ್ನಿಗೆ ನಿನ್ನೆ (ಮಾರ್ಚ್ 08) ವಿದ್ಯುಕ್ತ ತೆರೆಬಿದ್ದಿದೆ. ನ್ಯೂಜಿಲೆಂಡ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಿದ ಟೀಂ ಇಂಡಿಯಾ, ವಿಶ್ವಕಪ್ ಟ್ರೋಫಿ ಎತ್ತಿಹಿಡಿಯುವ ಮೂಲಕ ಹೊಸ ದಾಖಲೆಗಳನ್ನು ಸೃಷ್ಟಿಸಿದೆ. ಒಂದು ತಂಡ ಬ್ಯಾಕ್ ಟು ಬ್ಯಾಕ್ ವಿಶ್ವಕಪ್ ಗೆದ್ದಿದ್ದು ಇದೇ ಮೊದಲು.
ಭಾನುವಾರ ಫೈನಲ್ ನಡೆದರೆ ಟೀಮ್ ಇಂಡಿಯಾ ಗೆಲ್ಲುವುದಿಲ್ಲ ಅದರಲ್ಲೂ ನ್ಯೂಜಿಲೆಂಡ್ ವಿರುದ್ಧ ಗೆಲ್ಲಲು ಸಾಧ್ಯವಿಲ್ಲ ಎಂಬ ಚರ್ಚೆ ನಡೆಯುತ್ತಿತ್ತು. ಇನ್ನೂ ಅಹಮದಾಬಾದ್ ಕ್ರೀಡಾಂಗಣ ಟೀಂ ಇಂಡಿಯಾದ ಪಾಲಿಗೆ ದುರಾದೃಷ್ಟಕರ ಎಂಬ ನಂಬಿಕೆಯೂ ಇತ್ತು. ಆದರೆ, ಈ ಎಲ್ಲ ನಂಬಿಕೆಗಳನ್ನು ಭಾನುವಾರ ನಡೆದ ಫೈನಲ್ ಪಂದ್ಯ ಪುಡಿಪುಡಿ ಮಾಡಿತು. ಟೀಮ್ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧ ಭಾರಿ ರನ್ ಅಂತರದಲ್ಲಿ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 255 ರನ್ ಗಳಿಸಿತು. 256 ರನ್ಗಳ ಬೃಹತ್ ಗುರಿಯೊಂದಿಗೆ ಮೈದಾನಕ್ಕೆ ಇಳಿದ ನ್ಯೂಜಿಲೆಂಡ್ ತಂಡ 19 ಓವರ್ಗಳಲ್ಲಿ 159 ರನ್ಗಳಿಗೆ ಆಲೌಟ್ ಆಯಿತು.
ಅಂದಹಾಗೆ, ಫೈನಲ್ ಪಂದ್ಯವು ತುಂಬಾ ಉತ್ಸಾಹಭರಿತವಾಗಿತ್ತು. ಈ ಪಂದ್ಯದ ಮಧ್ಯದಲ್ಲಿ ನಡೆದ ಕೆಲವು ಘಟನೆಗಳು ಇನ್ನಷ್ಟು ಸಂಚಲನ ಮೂಡಿಸಿದವು. ಇವುಗಳಲ್ಲಿ ಟೀಮ್ ಇಂಡಿಯಾ ವೇಗಿ ಅರ್ಷದೀಪ್ ಸಿಂಗ್ ಮತ್ತು ಕಿವೀಸ್ ತಂಡದ ಬ್ಯಾಟ್ಸ್‌ಮನ್ ಡರೈಲ್ ಮಿಚೆಲ್ ನಡುವಿನ ಕಿತ್ತಾಟ ಎಲ್ಲರ ಗಮನ ಸೆಳೆಯಿತು. ಪಂದ್ಯದ ನಂತರ ಈ ಬಗ್ಗೆ ಅರ್ಷದೀಪ್ ಸಿಂಗ್ ಸ್ಪಷ್ಟನೆ ಸಹ ನೀಡಿದರು. ನಾನು ಚೆಂಡನ್ನು ಥ್ರೋ ಮಾಡಿದ್ದರಿಂದ ಅದು ಮಿಚೆಲ್‌ಗೆ ಬಡಿಯಿತು. ಹೀಗಾಗಿ, ಸಣ್ಣ ವಾಗ್ವಾದ ನಡೆಯಿತು. ಆ ಓವರ್ನ ಬಳಿಕ ನಾನು ಮಿಚೆಲ್‌ಗೆ ಕ್ಷಮೆಯಾಚಿಸಿದೆ ಎಂದು ಅರ್ಷದೀಪ್ ಸಿಂಗ್ ತಿಳಿಸಿದರು.
ನಿಜಕ್ಕೂ ನಡೆದಿದ್ದೇನು?
ಭಾರತ ನೀಡಿದ್ದ ಬೃಹತ್ ಗುರಿಯನ್ನು ನ್ಯೂಜಿಲೆಂಡ್ ತಂಡ ಬೆನ್ನಟ್ಟುವಾಗ 11ನೇ ಓವರ್ ಅನ್ನು ಅರ್ಷದೀಪ್ ಸಿಂಗ್ ಎಸೆದರು. ಕಿವೀಸ್ ಬ್ಯಾಟರ್ ಡರೈಲ್ ಮಿಚೆಲ್ ಅರ್ಷದೀಪ್ ಸಿಂಗ್ ಅವರ ಬೌಲಿಂಗ್‌ನಲ್ಲಿ ಸತತ ಎರಡು ಸಿಕ್ಸರ್‌ಗಳನ್ನು ಬಾರಿಸಿದರು. ಆ ನಂತರ ಬಂದ ಚೆಂಡನ್ನು ನೇರವಾಗಿ ಹೊಡೆದಾಗ, ಅದು ನೇರವಾಗಿ ಅರ್ಷದೀಪ್ ಅವರ ಕೈಗೆ ಹೋಯಿತು. ತಕ್ಷಣ ಚೆಂಡನ್ನು ಹಿಡಿದುಕೊಂಡ ಅರ್ಷದೀಪ್, ಸ್ಟಂಪ್‌ಗಳ ಕಡೆಗೆ ಎಸೆದರು. ಆದಾಗ್ಯೂ, ಥ್ರೋ ಆಕಸ್ಮಿಕವಾಗಿ ಮಿಚೆಲ್ ಅವರ ತೊಡೆಗೆ ಬಡಿಯಿತು.
ಚೆಂಡು ಬಡಿದ ನಂತರ ತೀವ್ರ ಕೋಪಗೊಂಡ ಮಿಚೆಲ್, ಆಕ್ರೋಶದಿಂದ ಕೂಗಲು ಪ್ರಾರಂಭಿಸಿದರು ಮತ್ತು ಅರ್ಷದೀಪ್ ಕಡೆಗೆ ನಡೆದರು. ಇಬ್ಬರೂ ಪರಸ್ಪರ ವಾಗ್ವಾದ ನಡೆಸಿದ್ದರಿಂದ ಪರಿಸ್ಥಿತಿ ಉದ್ವಿಗ್ನವಾಯಿತು. ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಮತ್ತು ಅಂಪೈರ್‌ಗಳು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದರು. ಆದಾಗ್ಯೂ, ಉದ್ವಿಗ್ನತೆ ಹೆಚ್ಚು ಕಾಲ ಉಳಿಯಲಿಲ್ಲ. ಓವರ್ ನಂತರ, ಅರ್ಷದೀಪ್ ಮಿಚೆಲ್‌ಗೆ ಕ್ಷಮೆಯಾಚಿಸಿದರು ಮತ್ತು ಅವರನ್ನು ತಬ್ಬಿಕೊಂಡರು.
ಈ ಬಗ್ಗೆ ಮಾತನಾಡಿದ ಅರ್ಷದೀಪ್ ಅದು ದೊಡ್ಡ ವಾಗ್ವಾದವಾಗಿರಲಿಲ್ಲ. ನಾನು ಎಸೆದ ಚೆಂಡು ಸ್ವಲ್ಪ ಹೆಚ್ಚು ರಿವರ್ಸ್ ಸ್ವಿಂಗ್ ಆಗಿತ್ತು ಮತ್ತು ಅದು ಮಿಚೆಲ್ ಅವರಿಗೆ ತಗುಲಿತು. ಇದರಿಂದ ಮಿಚೆಲ್ ಅವರು ಕೋಪಗೊಂಡು ನನ್ನ ಮೇಲೆ ಕೂಗಿದರು. ಆದರೆ, ಆ ಓವರ್ ನಂತರ ನಾನು ಮಿಚೆಲ್ ಅವರಿಗೆ ಕ್ಷಮೆಯಾಚಿಸಿದೆ. ಅದು ಉದ್ದೇಶಪೂರ್ವಕವಲ್ಲ ಎಂದು ನಾನು ಹೇಳಿದೆ. ನಾನು ಹೇಳಿದ್ದೂ ಮಿಚೆಲ್ಗೂ ಅರ್ಥವಾಯಿತು. ನಾವು ಅದನ್ನು ಮರೆತಿದ್ದೇವೆ ಎಂದು ಅರ್ಷದೀಪ್ ಹೇಳಿದರು. ತಂಡದ ಸಾಮೂಹಿಕ ಪ್ರಯತ್ನದಿಂದ ಮಾತ್ರ ಈ ಗೆಲುವು ಸಾಧ್ಯವಾಯಿತು ಎಂದು ಇದೇ ಸಂದರ್ಭದಲ್ಲಿ ಹೇಳಿದರು, (ಏಜೆನ್ಸೀಸ್).