- ಮುಂಬೈ ಇಂಡಿಯನ್ಸ್ ಪರ ಆಡಿದ್ದ ಅರ್ಜುನ್ ತೆಂಡೂಲ್ಕರ್
- ಈ ವರ್ಷ ಲಖನೌ ಸೂಪರ್ ಜೈಂಟ್ಸ್ ತಂಡದಲ್ಲಿ ಆಟ
- ಮುಂಬೈ ತೊರೆದಿದ್ದೇಕೆ ಎಂದು ಕಡೆಗೂ ಮೌನ ಮುರಿದ ಅರ್ಜುನ್
ಮುಂಬೈ: ಒಂದಷ್ಟು ವರ್ಷಗಳ ಕಾಲ ಮುಂಬೈ ಇಂಡಿಯನ್ಸ್ ಪರ ಆಡಿದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್, ಇದೀಗ ಐಪಿಎಲ್ 19ನೇ ಆವೃತ್ತಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ಪರ ಆಡಲು ಸಜ್ಜಾಗಿದ್ದಾರೆ. ಎಂಐ ತಂಡದಿಂದ ಹೊರನಡೆದ ಬಳಿಕ ಎಲ್ಲಿಯೂ ತುಟಿ ಬಿಚ್ಚದ ಅರ್ಜುನ್, ತಾವು ಫ್ರಾಂಚೈಸಿಯನ್ನು ತೊರೆದಿದ್ದೇಕೆ? ಎಂಬುದನ್ನು ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.
ಶುಭಂಕರ್ ಮಿಶ್ರಾ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಮನಬಿಚ್ಚಿ ಮಾತನಾಡಿದ ಅರ್ಜುನ್, ಯಾರೂ ಬೆಂಚ್‌ನಲ್ಲಿ ಅವಕಾಶಗಳಿಲ್ಲದೇ ಕುಳಿತುಕೊಳ್ಳಲು ಬಯಸುವುದಿಲ್ಲ. ಆದರೆ, ನಮಗೆ ಅವಕಾಶ ಸಿಕ್ಕಾಗ, ಉತ್ತಮ ಪ್ರದರ್ಶನದಿಂದ ಕಮ್ಬ್ಯಾಕ್ ಮಾಡಬೇಕು ಎಂದು ಪರೋಕ್ಷವಾಗಿ ಮುಂಬೈ ಇಂಡಿಯನ್ಸ್ ವಿರುದ್ಧ ಗುಡುಗಿದರು.
ಇನ್ನು ಇತ್ತೀಚಿನ ದಿನಗಳಲ್ಲಿ ಹಲವಾರು ಭಾರತೀಯ ಅಂತಾರಾಷ್ಟ್ರೀಯ ಕ್ರಿಕೆಟಿಗರು ಐಪಿಎಲ್‌ನ ಇಂಪ್ಯಾಕ್ಟ್ ಪ್ಲೇಯರ್ ರೂಲ್ ಬಗ್ಗೆ ಟೀಕಿಸಿದ್ದರು. ಈ ಬಗ್ಗೆಯೂ ತಮ್ಮ ಅಭಿಪ್ರಾಯ ಹಂಚಿಕೊಂಡ ಅರ್ಜುನ್, ಕ್ರಿಕೆಟ್ 11 ಆಟಗಾರರ ಆಟ. ಇದನ್ನು ಹಾಗೆಯೇ ಆಡಬೇಕು. ಪಿಕ್ 11 ಅಂಡ್ ಪ್ಲೇ ಆಗಿರಬೇಕು. ಏಕೆಂದರೆ, ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಮತ್ತು ಇತರ ಲೀಗ್‌ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಇಲ್ಲ. ಆದ್ದರಿಂದ, ನಾನು ವೈಯಕ್ತಿಕವಾಗಿ ಈ ನಿಯಮವನ್ನು ವಿರೋಧಿಸುತ್ತೇನೆ ಎಂದಿದ್ದಾರೆ.
ಪ್ರಸ್ತುತ, ಎಲ್ಎಸ್ಜಿ ಪರ ಆಡಲು ಸಜ್ಜಾಗಿರುವ ಅರ್ಜುನ್, ಆಲ್ರೌಂಡರ್ ಆಗಿ ಕಣಕ್ಕಿಳಿಯಲಿದ್ದಾರೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಯೂನಿಟ್ನಲ್ಲಿ ಕಮಾಲ್ ಮಾಡಲು ಎದುರುನೋಡುತ್ತಿರುವ ಸಚಿನ್ ತೆಂಡೂಲ್ಕರ್ ಪುತ್ರ, ತನಗೆ ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಕಳುಹಿಸಿದರೂ ಓಕೆ ಎಂದು ಹೇಳಿದ್ದಾರೆ. ಇಂದಿನ ಪಂದ್ಯದಲ್ಲಿ ಅವರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹೇಗೆ ಪ್ರದರ್ಶನ ಮಾಡಲಿದ್ದಾರೆ? ಮುಂದಿನ ದಿನಗಳಲ್ಲಿ ಅವಕಾಶಗಳು ಹೆಚ್ಚಾಗಲಿದೆಯೇ? ಎಂಬುದನ್ನು ಕಾದು ತಿಳಿಯಬೇಕಿದೆ,(ಏಜೆನ್ಸೀಸ್).