ಐಪಿಎಲ್ಗಾಗಿ ಪಿಎಸ್ಎಲ್ ತೊರೆದ ಶನಕ! ಪಾಕ್ ಲೀಗ್ಗೆ ಕೈಕೊಡುತ್ತಿರುವ ಕ್ರಿಕೆಟಿಗರ ಸಂಖ್ಯೆ ಹೆಚ್ಚಳ
ನವದೆಹಲಿ: ವಿಶ್ವದ ಶ್ರೀಮಂತ ಟಿ20 ಲೀಗ್ ಎನಿಸಿರುವ ಐಪಿಎಲ್ನಲ್ಲಿ (IPL) ಆಡುವ ಸಲುವಾಗಿ ಪಾಕಿಸ್ತಾನ ಸೂಪರ್ ಲೀಗ್ಗೆ (Pakistan Super League) ಕೈಕೊಡುತ್ತಿರುವ ಆಟಗಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಶ್ರೀಲಂಕಾ ಟಿ20 ತಂಡದ ನಾಯಕ ಹಾಗೂ ಆಲ್ರೌಂಡರ್ ದಸುನ್ ಶನಕ (Dasun Shanaka) ಈ ಪಟ್ಟಿಗೆ ಹೊಸ ಸೇರ್ಪಡೆಯಾಗಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಕಾನೂನು ಕ್ರಮದ ಬೆದರಿಕೆ ಒಡ್ಡಿರುವ ನಡುವೆಯೂ ಶನಕ ಐಪಿಎಲ್ ಟೂರ್ನಿಗೆ ಆದ್ಯತೆ ನೀಡಿದ್ದಾರೆ.
ಶನಕ ಐಪಿಎಲ್ನಲ್ಲಿ ಸ್ಯಾಮ್ ಕರನ್ ಅವರಿಂದ ತೆರವಾಗಿರುವ ರಾಜಸ್ಥಾನ ರಾಯಲ್ಸ್ ತಂಡದ ವಿದೇಶಿ ಆಲ್ರೌಂಡರ್ ಸ್ಥಾನವನ್ನು ತುಂಬಲಿದ್ದಾರೆ ಎನ್ನಲಾಗಿದೆ. ಈ ಮುನ್ನ ಜಿಂಬಾಬ್ವೆಯ ವೇಗಿ ಬ್ಲೆಸಿಂಗ್ ಮುಜರಬಾನಿ ಕೂಡ ಐಪಿಎಲ್ನಲ್ಲಿ ಆಡುವ ಸಲುವಾಗಿ ಪಿಎಸ್ಎಲ್ನಿಂದ ಹಿಂದೆ ಸರಿದಿದ್ದರು. ಮುಜರಬಾನಿ ಈಗಾಗಲೆ ಕೆಕೆಆರ್ ತಂಡದ ಶಿಬಿರವನ್ನು ಸೇರಿಕೊಂಡಿದ್ದಾರೆ. ಈ ನಡುವೆ ವೆಸ್ಟ್ ಇಂಡೀಸ್ ಸ್ಪಿನ್ನರ್ ಗುಡಾಕೇಶ್ ಮೋತಿ ಕೂಡ ಪಿಎಸ್ಎಲ್ನಿಂದ ಹಿಂದೆ ಸರಿದಿದ್ದು, ಐಪಿಎಲ್ನಲ್ಲಿ ಯಾವ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಶನಕ ಕಳೆದ ವರ್ಷ ಐಪಿಎಲ್ ಮಿನಿ ಹರಾಜಿನಲ್ಲಿ ಪಾಲ್ಗೊಂಡಿದ್ದರೂ, ಯಾವುದೇ ತಂಡಕ್ಕೆ ಮಾರಾಟವಾಗಿರಲಿಲ್ಲ. ಶ್ರೀಲಂಕಾದ ಕುಮಾರ ಸಂಗಕ್ಕರ ಆರ್ಆರ್ ತಂಡದ ಮುಖ್ಯ ಕೋಚ್ ಆಗಿದ್ದು, ಅವರ ಶಿಾರಸಿನ ಮೇಲೆ ಶನಕ ಬದಲಿಗರಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ಶನಕ ಈ ಮುನ್ನ 2023, 2025ರಲ್ಲಿ ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದರು.