ಮುಂಬೈನ ವಿವ್ ರಿಚರ್ಡ್ಸ್ ಖ್ಯಾತಿಯ ಮಾಜಿ ಕ್ರಿಕೆಟಿಗ ಅನಿಲ್ ಗೌರವ್ ಇನ್ನಿಲ್ಲ
ಮುಂಬೈ: ದಿಗ್ಗಜ ಸಚಿನ್ ತೆಂಡುಲ್ಕರ್ಗೆ ಮುನ್ನ ರಮಾಕಾಂತ್ ಆಚ್ರೇಕರ್ ಅವರ ನೆಚ್ಚಿನ ಶಿಷ್ಯರಾಗಿದ್ದ ಮತ್ತು "ಮುಂಬೈನ ವಿವಿಯನ್ ರಿಚರ್ಡ್ಸ್' ಎಂದೇ ಜನಪ್ರಿಯರಾಗಿದ್ದ ಮಾಜಿ ಕ್ರಿಕೆಟಿಗ (cricket) ಅನಿಲ್ ಗೌರವ್ (61 ವರ್ಷ) ಮಂಗಳವಾರ ನಿಧನರಾದರು.
ಅತ್ಯಂತ ಪ್ರತಿಭಾನ್ವಿತ ಕ್ರಿಕೆಟಿಗರಾಗಿದ್ದರೂ, ಕೌಟುಂಬಿಕ ಸಮಸ್ಯೆಯಿಂದಾಗಿ ಅನಿಲ್ ಗೌರವ್ (Anil Gurav) ಎಂದೂ, ಕನಿಷ್ಠ ಮುಂಬೈ ಪರ ಆಡುವ ಅವಕಾಶವನ್ನೂ ಪಡೆಯದೆ, ಕ್ಲಬ್ ಮಟ್ಟದ ಕ್ರಿಕೆಟಿಗರಾಗಿಯೇ ಉಳಿದಿದ್ದರು. ವಿವ್ ರಿಚರ್ಡ್ಸ್ ಮಾದರಿಯ ಸ್ಕ್ವೇರ್ ಕಟ್ ಮತ್ತು ಲೆಗ್ಸೈಡ್ನ ಬಲಿಷ್ಠ ಆಟದಿಂದ 16 ಮತ್ತು 19 ವಯೋಮಿತಿ ವಿಭಾಗದಲ್ಲಿ ಮಿಂಚಿದ್ದರು. ಆದರೆ ಸಹೋದರ ಗ್ಯಾಂಗ್ಸ್ಟರ್ ಆಗಿದ್ದರಿಂದ ಅವರ ಕುಟುಂಬ ಪೊಲೀಸರಿಂದ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿತ್ತು ಮತ್ತು ಗೌರವ್ ಕೂಡ ಕುಡಿತದ ಚಟಕ್ಕೆ ಸಿಲುಕಿ ಕ್ರಿಕೆಟ್ನಿಂದ ದೂರವಾಗಿದ್ದರು.
ಗೌರವ್ ಶಾರದಾಶ್ರಮ ವಿದ್ಯಾಮಂದಿರದಲ್ಲಿ ತೆಂಡುಲ್ಕರ್ ಮತ್ತು ವಿನೋದ್ ಕಾಂಬ್ಳಿಗೆ ಸೀನಿಯರ್ ಆಗಿದ್ದರು. ಗೌರವ್ ನೆಟ್ಸ್ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಆಚ್ರೇಕರ್ ಅವರ ಆಟವನ್ನೇ ನೋಡಿ ಕಲಿಯುವಂತೆ ಸಚಿನ್ ಮತ್ತು ಇತರರಿಗೆ ಹೇಳುತ್ತಿದ್ದರು. ಇದಲ್ಲದೆ ಗೌರವ್ ಉಡುಗೊರೆಯಾಗಿ ನೀಡಿದ್ದ ತನ್ನ ಬ್ಯಾಟ್ನಿಂದಲೇ ತೆಂಡುಲ್ಕರ್ ಶಾಲಾ ದಿನಗಳಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್ನ ಮೊದಲ ಶತಕ ಸಿಡಿಸಿದ್ದರು ಎಂದೂ ಹೇಳಲಾಗುತ್ತದೆ.
ಮುಂಬೈ ಕ್ರಿಕೆಟ್ನಲ್ಲಿ ಸುನೀಲ್ ಗಾವಸ್ಕರ್ ಉತ್ತರಾಧಿಕಾರಿಯಾಗಿ ಸಚಿನ್ ತೆಂಡುಲ್ಕರ್ ಬರುವ ಮುನ್ನ ಆ ಸ್ಥಾನಕ್ಕೆ ಅನಿಲ್ ಗೌರವ್ ಬರುತ್ತಾರೆ ಎಂಬ ಮಾತುಗಳು ಇದ್ದವು. ಆದರೆ ಗೌರವ್ ವೈಯಕ್ತಿಕ ಬದುಕಿನ ಸಂಕಷ್ಟಗಳು ಅವರಿಗೆ ನಿರೀಕ್ಷಿತ ಹಾದಿಯಲ್ಲಿ ಸಾಗಲು ಅವಕಾಶ ಕಲ್ಪಿಸಲಿಲ್ಲ. ಬದಲಾಗಿ ಅವರು ದಾರಿ ತಪ್ಪಿ ಮುಂಬೈನ ಕೊಳೆಗೇರಿಯಲ್ಲೇ ಜೀವನವನ್ನು ಕೊನೆಗೊಳಿಸಿದರು.
ರಮಾಕಾಂತ್ ಆಚ್ರೇಕರ್ ಬ್ಯಾಟಿಂಗ್ ಅಭ್ಯಾಸ ಮಾಡಿಸುವ ವೇಳೆ ವಿಕೆಟ್ ಮೇಲೆ ಒಂದು ರೂಪಾಯಿಯ ನಾಣ್ಯ ಇಟ್ಟು, ಆತನ ವಿಕೆಟ್ ಉರುಳಿಸಿದರೆ ಆ ನಾಣ್ಯ ಬೌಲರ್ಗೆ. ಇಲ್ಲದಿದ್ದರೆ ಆ ನಾಣ್ಯ ಬ್ಯಾಟರ್ಗೆ ಎಂಬ ಸವಾಲು ಒಡ್ಡುತ್ತಿದ್ದರು. ಅವರು ಆ ರೀತಿ ನಾಣ್ಯ ಇಟ್ಟು ಅಭ್ಯಾಸ ಮಾಡಿಸಿದರೆ ಆತ ದೊಡ್ಡ ಬ್ಯಾಟರ್ ಆಗಿ ಬೆಳೆಯುತ್ತಾನೆ ಎಂದೇ ಅರ್ಥವಾಗಿತ್ತು. ಸಚಿನ್ ತೆಂಡುಲ್ಕರ್ ಇದೇ ರೀತಿಯ ಅಭ್ಯಾಸದಿಂದ ಹಲವು ನಾಣ್ಯಗಳನ್ನು ತಮ್ಮದಾಗಿಸಿಕೊಂಡಿದ್ದರು. ಆದರೆ ಸಚಿನ್ಗಿಂತ ಮುನ್ನ ಆಚ್ರೇಕರ್, ಅನಿಲ್ ಗೌರವ್ರಿಂದ ಈ ರೀತಿ ನಾಣ್ಯವನ್ನು ವಿಕೆಟ್ ಮೇಲೆ ಇಟ್ಟು ಬ್ಯಾಟಿಂಗ್ ಅಭ್ಯಾಸ ಮಾಡಿಸುತ್ತಿದ್ದರು. ಆದರೆ ಗೌರವ್ ಗುರುವಿನ ನಿರೀಕ್ಷೆಯ ರೀತಿಯಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ಬೆಳೆಯಲು ಸಾಧ್ಯವಾಗದಿದ್ದುದು ವಿಪರ್ಯಾಸ.