ಅಂಬಟಿ ರಾಯುಡು, ವಿರಾಟ್ ಕೊಹ್ಲಿ
- ಐಪಿಎಲ್ 19ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಆರ್ಸಿಬಿಗೆ ಗೆಲುವು
- ಓಪನಿಂಗ್ ಪಂದ್ಯದಲ್ಲೇ ವಿರಾಟ್ ಕೊಹ್ಲಿ ಅಬ್ಬರದ ಇನ್ನಿಂಗ್ಸ್
- ಮೊದಲ ಬಾರಿಗೆ ಆರ್ಸಿಬಿ ಮತ್ತು ವಿರಾಟ್ ಬಗ್ಗೆ ಅಂಬಟಿ ರಾಯುಡು ಗುಣಗಾನ
ಬೆಂಗಳೂರು: ನಿನ್ನೆ (ಮಾ.28) ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 19ನೇ ಆವೃತ್ತಿಯ ಪಂದ್ಯದಲ್ಲಿ ಆರ್ಸಿಬಿ ಶುಭಾರಂಭ ಮಾಡಿತು. ಸನ್ರೈಸರ್ಸ್ ಹೈದರಾಬಾದ್ ನೀಡಿದ 202 ರನ್ಗಳ ಬೃಹತ್ ಗುರಿಯನ್ನು ಕೇವಲ 15.4 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳ ನಷ್ಟಕ್ಕೆ ತಲುಪಿತು. ಇದರೊಂದಿಗೆ, ಆರ್ಸಿಬಿ ತಂಡವು ಆರು ವಿಕೆಟ್‌ಗಳ ಭಾರಿ ಅಂತರದಿಂದ ಭರ್ಜರಿ ಜಯಗಳಿಸಿತು.
ಚೇಸಿಂಗ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ದೇವದತ್ತ ಪಡಿಕ್ಕಲ್ರಿಂದ ಬಂದ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತಂಡವನ್ನು ಮೊದಲ ಗೆಲುವಿನೆಡೆಗೆ ಸುಲಭವಾಗಿ ಕೊಂಡೊಯ್ಯಿತು. ಅಭಿಮಾನಿಗಳು ಮತ್ತು ಕ್ರಿಕೆಟ್ ದಿಗ್ಗಜರ ನೆಚ್ಚಿನ ಕಿಂಗ್ ಕೊಹ್ಲಿ, ಓಪನಿಂಗ್ ಮ್ಯಾಚ್ನಲ್ಲೇ ಆಕರ್ಷಕ ಅರ್ಧಶತಕ ಗಳಿಸಿದ್ದು ನೋಡುಗರ ಮೆಚ್ಚುಗೆಗೆ ಕಾರಣವಾಯಿತು. ಮತ್ತೊಂದೆಡೆ, ಸದಾ ಆರ್ಸಿಬಿ ಫ್ರಾಂಚೈಸಿ ಮತ್ತು ಆಟಗಾರರನ್ನು ಕಾಲೆಳೆಯುವ, ಒಂದಲ್ಲ ಒಂದು ನೆಗೆಟಿವ್ ಹೇಳಿಕೆ ನೀಡುವ ಮಾಜಿ ಸಿಎಸ್ಕೆ ಆಟಗಾರ ಅಂಬಟಿ ರಾಯುಡು ಇದೀಗ ಕೊಹ್ಲಿಯನ್ನು ಮೆಚ್ಚಿ ಮಾತನಾಡಿರುವುದು ಸದ್ಯ ಆರ್ಸಿಬಿ ಅಭಿಮಾನಿಗಳನ್ನು ಒಂದು ನಿಮಿಷ ಅಚ್ಚರಿಗೆ ದೂಡಿದೆ.
ಈಎಸ್ಪಿನ್ ಕ್ರಿಕ್ ಇನ್ಫೋ ಜೊತೆ ಮಾತನಾಡಿದ ರಾಯುಡು, ಕೊಹ್ಲಿ ಅವರ ಆಟವನ್ನು ನೋಡಿದರೆ, ಅವರ ಕ್ರಿಕೆಟ್ ಕರಿಯರ್ ಅಂತ್ಯದಲ್ಲಿದೆ ಎಂದು ನನಗೆ ಅನಿಸುತ್ತಿಲ್ಲ. ನನ್ನ ಪ್ರಕಾರ, ಇನ್ನೂ ಐದಾರು ವರ್ಷಗಳು ವಿರಾಟ್ ಹೀಗೆ ಆಡಬಹುದು. ನಾನು ಮತ್ತು ಸಂಜಯ್ ಬಂಗಾರ್ ಅವರು, ಕೊಹ್ಲಿ ನಿವೃತ್ತಿಯನ್ನು ವಾಪಾಸ್ ಪಡೆದು, ಟಿ20 ಹಾಗೂ ಟೆಸ್ಟ್ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಬೇಕು. ಭಾರತೀಯ ಕ್ರಿಕೆಟ್ನಲ್ಲಿ ಆತ ಒಬ್ಬ ಅತ್ಯುತ್ತಮ ರೆಡ್-ಬಾಲ್ ನಾಯಕ. ಈಗ ವಿರಾಟ್ರ ಬ್ಯಾಟಿಂಗ್ ನೋಡುತ್ತಿದ್ರೆ, ಅದು ಭಾರತೀಯ ಕ್ರಿಕೆಟ್ಗೆ ದೊಡ್ಡ ಲಾಸ್ ಎಂದು ಹೇಳಿದ್ದಾರೆ,(ಏಜೆನ್ಸೀಸ್).