ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ಕುಟುಂಬ
- ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ಮತ್ತೆ ತಂದೆಯಾಗಿದ್ದಾರೆ
- ರಾಯುಡು ಅವರ ಪತ್ನಿ ವಿದ್ಯಾ ಸೋಮವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ
- ಪತ್ನಿ ಮತ್ತು ಮಗನೊಂದಿಗೆ ತೆಗೆದುಕೊಂಡಿರುವ ಸೆಲ್ಫಿ ಫೋಟೋವನ್ನು ರಾಯುಡು ಹಂಚಿಕೊಂಡಿದ್ದಾರೆ
ಹೈದರಾಬಾದ್: ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ( Ambati Rayudu ) ಮತ್ತೆ ತಂದೆಯಾಗಿದ್ದಾರೆ. ಅವರ ಪತ್ನಿ ವಿದ್ಯಾ, ಸೋಮವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಚಾರವನ್ನು ಸ್ವತಃ ರಾಯುಡು ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ತಮ್ಮ ಪತ್ನಿ ಮತ್ತು ಮಗನೊಂದಿಗೆ ತೆಗೆದುಕೊಂಡಿರುವ ಸೆಲ್ಫಿ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ರಾಯುಡು ಹಂಚಿಕೊಂಡಿದ್ದಾರೆ. "ಮಗನನ್ನು ಪಡೆದಿದ್ದಕ್ಕೆ ತುಂಬಾ ಸಂತೋಷ" ಎಂದು ಫೋಟೋಗೆ ಶೀರ್ಷಿಕೆ ನೀಡಿದ್ದಾರೆ. ಸದ್ಯ ಈ ಫೋಟೋ ಈಗ ವೈರಲ್ ಆಗಿದ್ದು, ಸಹ ಆಟಗಾರರು ಮತ್ತು ನೆಟ್ಟಿಗರು ರಾಯುಡು ಕುಟುಂಬಕ್ಕೆ ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಅಂದಹಾಗೆ, ಅಂಬಟಿ ರಾಯುಡು ಮತ್ತು ವಿದ್ಯಾ ಅವರು 2009 ರಲ್ಲಿ ವಿವಾಹವಾದರು. ದಂಪತಿಗೆ 2020 ಜುಲೈ ತಿಂಗಳಲ್ಲಿ ಮೊದಲು ಹೆಣ್ಣು ಮಗು ಜನಿಸಿತು. ಆ ಮಗುವಿಗೆ ವಿವಿಯಾ ಎಂದು ಹೆಸರಿಡಲಾಗಿದೆ. 2023 ರಲ್ಲಿ ಎರಡನೇ ಮಗಳು ಜನಿಸಿದಳು. ಇದೀಗ ಗಂಡು ಮಗು ಜನಿಸಿದ್ದು, 40ನೇ ವಯಸ್ಸಿನಲ್ಲಿ ರಾಯುಡು ಮೂರನೇ ಬಾರಿಗೆ ತಂದೆಯಾಯಾಗಿದ್ದಾರೆ.
ಇನ್ನು ಕ್ರಿಕೆಟ್ ವಿಚಾರಕ್ಕೆ ಬರುವುದಾದರೆ, 2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ರಾಯುಡು, ಟೀಮ್ ಇಂಡಿಯಾ ಪರ 55 ಏಕದಿನ ಮತ್ತು 6 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಕೊನೆಯ ಬಾರಿಗೆ 2019 ರಲ್ಲಿ ಭಾರತವನ್ನು ಪ್ರತಿನಿಧಿಸಿದರು. 2023 ರಲ್ಲಿ ಎಲ್ಲಾ ಸ್ವರೂಪಗಳಿಂದ ನಿವೃತ್ತಿ ಘೋಷಿಸಿದರು.
ರಾಯುಡು ಅವರು ಭಾರತದ ಪರ ಏಕದಿನ ಪಂದ್ಯಗಳಲ್ಲಿ 47.1 ರ ಸರಾಸರಿಯಲ್ಲಿ 1694 ರನ್ ಗಳಿಸಿದ್ದಾರೆ. ಇದರಲ್ಲಿ 3 ಶತಕಗಳು ಮತ್ತು 10 ಅರ್ಧಶತಕಗಳು ಸೇರಿವೆ. ಅವರು ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 42 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ 204 ಪಂದ್ಯಗಳನ್ನು ಆಡಿದ್ದು, 28.2 ರ ಸರಾಸರಿಯಲ್ಲಿ 4348 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 22 ಅರ್ಧಶತಕಗಳು ಸೇರಿವೆ, (ಏಜೆನ್ಸೀಸ್).