ಲಂಕಾದಲ್ಲೂ ವಂಡರ್​ ಕಿಡ್​ ಹವಾ: ಸೀನಿಯರ್ಸ್‌ ಆಟಗಾರರನ್ನೇ ಮೀರಿಸಿದ ವೈಭವ್ ಸೂರ್ಯವಂಶಿ ಜನಪ್ರಿಯತೆ! Vaibhav Sooryavanshi 
ಕ್ರಿಕೆಟ್

ಲಂಕಾದಲ್ಲೂ ವಂಡರ್​ ಕಿಡ್​ ಹವಾ: ಸೀನಿಯರ್ಸ್‌ ಆಟಗಾರರನ್ನೇ ಮೀರಿಸಿದ ವೈಭವ್ ಸೂರ್ಯವಂಶಿ ಜನಪ್ರಿಯತೆ! Vaibhav Sooryavanshi

ಪ್ರಮುಖ ಮುಖ್ಯಾಂಶಗಳು

  • ಭಾರತೀಯ ಕ್ರಿಕೆಟ್​ ವಲಯದಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಹೆಸರೆಂದರೆ ಅದು ವೈಭವ್ ಸೂರ್ಯವಂಶಿ
  • ವಂಡರ್​ ಕಿಡ್​ ಜನಪ್ರಿಯತೆ ಹಿರಿಯ ಹಾಗೂ ಅನುಭವಿ ಆಟಗಾರರನ್ನೂ ಮೀರಿಸುತ್ತಿದೆ
  • ಶ್ರೀಲಂಕಾ ಪ್ರವಾಸದಲ್ಲೂ ವೈಭವ್​ ಕ್ರೇಜ್​ ಜೋರಾಗಿದ್ದು ಫೋಟೋಗಾಗಿ ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ
Vaibhav Sooryavanshi : ಪ್ರಸ್ತುತ ಭಾರತೀಯ ಕ್ರಿಕೆಟ್​ ವಲಯದಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಹೆಸರೆಂದರೆ ಅದು 15 ವರ್ಷದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ. ಇವರ ಜನಪ್ರಿಯತೆ ಹಿರಿಯ ಹಾಗೂ ಅನುಭವಿ ಆಟಗಾರರನ್ನೂ ಮೀರಿಸುತ್ತಿದೆ. ಅದಕ್ಕೆ ತಾಜಾ ಉದಾಹರಣೆಯೇ ಶ್ರೀಲಂಕಾ ಪ್ರವಾಸ.
ತ್ರಿಕೋಣ ಸರಣಿ ಆಡಲು ಶ್ರೀಲಂಕಾ ಪ್ರವಾಸ ಕೈಗೊಂಡಿರುವ ಭಾರತ 'ಎ' ತಂಡದ ಭಾಗವಾಗಿರುವ ವೈಭವ್, ಸದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ. ಮೈದಾನದಲ್ಲಿ ಹಿರಿಯ ಆಟಗಾರರಿಗಿಂತಲೂ ಮಿಗಿಲಾಗಿ ಈ ಕಿರಿಯ ವಯಸ್ಸಿನ ಆಟಗಾರನೇ ಪ್ರೇಕ್ಷಕರಿಂದ ಅತಿ ಹೆಚ್ಚು ಗಮನ ಮತ್ತು ಪ್ರೀತಿಯನ್ನು ಗಳಿಸುತ್ತಿರುವುದು ಸದ್ಯದ ವಿಶೇಷವಾಗಿದೆ.
ನಿನ್ನೆ (ಜೂನ್​ 10) ಪಂದ್ಯ ಮುಕ್ತಾಯದ ಬಳಿಕ ಭಾರತ 'ಎ' ತಂಡದ ಆಟಗಾರರು ಕ್ರೀಡಾಂಗಣದಿಂದ ಹೊರಡಲು ಆರಂಭಿಸುತ್ತಿದ್ದಂತೆ, ನೆಚ್ಚಿನ ಆಟಗಾರರನ್ನು ನೋಡಲು ಅಭಿಮಾನಿಗಳು ಹೊರಗಡೆ ಕಾಯುತ್ತಾ ನಿಂತಿದ್ದರು. ಈ ವೇಳೆ ರುತುರಾಜ್ ಗಾಯಕ್ವಾಡ್ ಹಾಗೂ ತಿಲಕ್ ವರ್ಮಾ ಅವರಂತಹ ಭಾರತೀಯ ಕ್ರಿಕೆಟ್‌ನ ಹಲವು ಪ್ರಮುಖ ಹಿರಿಯ ಆಟಗಾರರು ಅದೇ ಜನಸಮೂಹದ ನಡುವೆ ಹಾದುಹೋದರು. ಆದರೆ, ಅಲ್ಲಿ ನೆರೆದಿದ್ದ ಬಹುತೇಕ ಅಭಿಮಾನಿಗಳ ಕಣ್ಣುಗಳು ಮಾತ್ರ ಕೇವಲ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಮೇಲೆಯೇ ನೆಟ್ಟಿದ್ದವು.
ವೈಭವ್​ ಅವರನ್ನು ನೋಡುತ್ತಿದ್ದಂತೆ ಜೇನಿಗೆ ನೊಣ ಮುತ್ತಿಕೊಂಡ ರೀತಿ ಅಭಿಮಾನಿಗಳೆಲ್ಲ ವೈಭವ್​ ಅವರನ್ನು ಸುತ್ತುವರೆದರು. ಅಲ್ಲದೆ, ವೈಭವ್​ ಜತೆ ನಿಂತು ಫೋಟೋ ತೆಗೆಸಿಕೊಂಡರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ವೈಭವ್​ ಕ್ರೇಜ್​ ನೋಡಿ ಎಲ್ಲರು ಹುಬ್ಬೇರಿಸಿದ್ದಾರೆ.
ಇನ್ನು ಈ ಪಂದ್ಯದಲ್ಲಿ ವೈಭವ್ ಅವರ ಆನ್-ಫೀಲ್ಡ್ ಪ್ರದರ್ಶನದ ಬಗ್ಗೆ ಮಾತನಾಡುವುದಾದರೆ, ದಂಬುಲ್ಲಾದಲ್ಲಿ ಶ್ರೀಲಂಕಾ 'ಎ' ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅವರ ಇನ್ನಿಂಗ್ಸ್ ನಿರೀಕ್ಷೆಗಿಂತ ಮೊದಲೇ ಕೊನೆಗೊಂಡಿತು. ಆರಂಭಿಕ ಆಟಗಾರನಾಗಿ ಮೈದಾನಕ್ಕಿಳಿದ ಈ ಯುವ ಎಡಗೈ ಬ್ಯಾಟ್ಸ್‌ಮನ್ ಕೇವಲ 12 ಎಸೆತಗಳನ್ನು ಎದುರಿಸಿ 14 ರನ್ ಗಳಿಸಲಷ್ಟೇ ಶಕ್ತರಾದರು.
ಆದರೆ, ಮೈದಾನದ ಹೊರಗೆ ಈ 15 ವರ್ಷದ ಕಿರಿಯ ಆಟಗಾರ ಪ್ರೇಕ್ಷಕರ ಕಣ್ಣಿಗೆ ಬೀಳುತ್ತಿದ್ದಂತೆ ಇಡೀ ಕ್ರೀಡಾಂಗಣದ ವಾತಾವರಣವೇ ಜಯಘೋಷ ಮತ್ತು ಚಪ್ಪಾಳೆಗಳ ಸದ್ದಿನಿಂದ ಮೊಳಗಿಹೋಯಿತು. ಅಭಿಮಾನಿಗಳು ಅವರೊಂದಿಗೆ ಸೆಲ್ಫಿ ಹಾಗೂ ಫೋಟೋಗಳನ್ನು ತೆಗೆದುಕೊಳ್ಳಲು ಒಬ್ಬರಿಗಿಂತ ಒಬ್ಬರು ಪೈಪೋಟಿಗೆ ಬಿದ್ದಿದ್ದರಿಂದ, ವೈಭವ್ ಕ್ಷಣಾರ್ಧದಲ್ಲಿ ಕ್ರೀಡಾಂಗಣದ ಹೊರಗೆ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿ ಬದಲಾದರು. ಇವರ ಬ್ಯಾಟಿಂಗ್ ಪ್ರದರ್ಶನ ಕೈಕೊಟ್ಟರೂ ಸಹ ಅಭಿಮಾನಿಗಳಲ್ಲಿ ಇವರ ಮೇಲಿನ ಕ್ರೇಜ್ ಮಾತ್ರ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ.
ಈ ಯುವ ಬ್ಯಾಟರ್‌ನ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅಭೂತಪೂರ್ವ ಜನಪ್ರಿಯತೆಯನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಇಷ್ಟು ಸಣ್ಣ ಪ್ರಾಯದಲ್ಲೇ ಇಷ್ಟೊಂದು ಪ್ರೀತಿ ಗಳಿಸುತ್ತಿರುವ ವೈಭವ್ ಸೂರ್ಯವಂಶಿ ಅವರೇ ಭಾರತೀಯ ಕ್ರಿಕೆಟ್‌ನ "ಭವಿಷ್ಯದ ಸೂಪರ್ ಸ್ಟಾರ್" ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ, (ಏಜೆನ್ಸೀಸ್​).