ನವದೆಹಲಿ: ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರು, ಟೀಮ್ ಇಂಡಿಯಾ ದಿಗ್ಗಜ ಆಟಗಾರ ರೋಹಿತ್ ಶರ್ಮಾ ಭವಿಷ್ಯದ ಬಗ್ಗೆ ವರದಿ ಮಾಡಲಾದ ನಿಲುವಿನ ಕುರಿತು ಪಶ್ಚಾತಾಪಪಡುತ್ತಿರಬಹುದು ಎಂದು ಮಾಜಿ ಕ್ರಿಕೆಟಿಗ ಸದಾಗೋಪನ್ ರಮೇಶ್ (Sadagopan Ramesh) ಅಭಿಪ್ರಾಯಪಟ್ಟಿದ್ದಾರೆ.
ಈ ವರ್ಷದ ಆರಂಭದಲ್ಲಿ ಭಾರತದ ಇಂಗ್ಲೆಂಡ್ ಪ್ರವಾಸದ ಸಂದರ್ಭದಲ್ಲಿ ಬಂದ ವರದಿಗಳ ಪ್ರಕಾರ, ರೋಹಿತ್ ತಂಡದೊಂದಿಗೆ ಮುಂದುವರಿಯುವುದು ಅಗರ್ಕರ್ಗೆ ಇಷ್ಟವಿರಲಿಲ್ಲ ಮತ್ತು ಇಂಗ್ಲೆಂಡ್ ಸರಣಿಯೇ ಅವರ ಕೊನೆಯದು ಎಂದು ಸೂಚಿಸಿದ್ದರು ಎಂದು ಹೇಳಲಾಗಿತ್ತು. ಆದರೆ ಬಿಸಿಸಿಐ ಆ ಎಲ್ಲಾ ಊಹಾಪೋಹಗಳನ್ನು ತಳ್ಳಿಹಾಕಿತ್ತು. ರೋಹಿತ್ ಆಯ್ಕೆಗಾರರ ಯೋಜನೆಗಳ ಭಾಗವಾಗಿರುವವರೆಗೆ ಅವರನ್ನು ಪರಿಗಣಿಸುವುದನ್ನು ಮುಂದುವರಿಸಲಾಗುವುದು ಎಂದು ಅದು ಸ್ಪಷ್ಟಪಡಿಸಿತ್ತು.
ಇಂಗ್ಲೆಂಡ್ ವಿರುದ್ಧ ಕೊನೆಯ ಏಕದಿನ ಪಂದ್ಯದಲ್ಲಿ ರೋಹಿತ್ 138 ರನ್‌ಗಳನ್ನು ಸಿಡಿಸುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದರು ಮತ್ತು ಬುಧವಾರ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಮತ್ತೊಂದು ಶತಕ ಸಿಡಿಸಿ ಮಿಂಚಿದ್ದರು.
ಇದನ್ನೂ ಓದಿ:ರೋಹಿತ್ ಶರ್ಮಾ ವಿಶಿಷ್ಟ ಸಂಭ್ರಮಾಚರಣೆ: ತಂಡದ ಮಾಜಿ ಆಟಗಾರನಿಂದಲೇ ವಿರೋಧ...? | Rohit Sharma New Celebration
ರೋಹಿತ್ ಬಗ್ಗೆ ಅಗರ್ಕರ್ ನಿಲುವಿನ ವಿಷಯವಾಗಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ರಮೇಶ್, ಅಗರ್ಕರ್ ಅವರ ಅಧಿಕಾರಾವಧಿ ಮುಕ್ತಾಯಗೊಳ್ಳಲು ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ, ಹಿರಿಯ ಬ್ಯಾಟರ್ ರೋಹಿತ್ ಶರ್ಮಾ ಅವರ ಇತ್ತೀಚಿನ ಪ್ರದರ್ಶನದ ನಂತರ ಅವರ ಭವಿಷ್ಯದ ಬಗ್ಗೆ ತಾವು ತೆಗೆದುಕೊಂಡಿದ್ದ ನಿಲುವಿನ ಬಗ್ಗೆ ಪಶ್ಚಾತಾಪಪಡುತ್ತಿರಬಹುದು ಎಂದು ತಿಳಿಸಿದ್ದಾರೆ.
ಮುಂದಿನ ವರ್ಷದ ವಿಶ್ವಕಪ್ ತಂಡದಲ್ಲಿ ರೋಹಿತ್ ಇರಬಾರದು ಎಂದು ಅಜಿತ್ ಅಗರ್ಕರ್ ಪ್ರಯತ್ನಿಸಿದ್ದರು ಎಂಬ ವರದಿಗಳ ಬಗ್ಗೆ ಬೆಳಕು ಚೆಲ್ಲಿದ ರಮೇಶ್, ಈ ಕಾರಣದಿಂದಲೇ ಅಗರ್ಕರ್ ಅವಧಿ ವಿಸ್ತರಣೆಯಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಮುಂದುವರೆದು ಮಾತನಾಡಿದ ರಮೇಶ್, ವಯಸ್ಸು ಕೇವಲ ಒಂದು ಸಂಖ್ಯೆ ಎನ್ನುವುದನ್ನು ರೋಹಿತ್ ಮತ್ತೆ ಮತ್ತೆ ಸಾಬೀತುಪಡಿಸುತ್ತಿದ್ದು, ಅವರು 50 ಓವರ್‌ಗಳ ಕಾಲ ಫೀಲ್ಡಿಂಗ್ ಮಾಡಿ ನಂತರ ಶತಕ ಗಳಿಸುವಷ್ಟು ಹೊತ್ತು ಬ್ಯಾಟಿಂಗ್ ಮಾಡಿರುವುದು ಅವರ ಫಿಟ್‌ನೆಸ್ ಹೇಗಿದೆ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ರೋಹಿತ್ ಸ್ಥಾನದ ಬಗ್ಗೆ ಅಗರ್ಕರ್ ಈಗ ತಮ್ಮ ನಿಲುವಿಗೆ ಪಶ್ಚಾತಾಪಪಡುತ್ತಿರಬಹುದು ಎಂದು ಮಾಜಿ ಕ್ರಿಕೆಟಿಗ ಪುನರಿಚ್ಚರಿಸಿದ್ದಾರೆ.
ರೋಹಿತ್ ಮತ್ತು ವಿರಾಟ್ ನಡುವೆ ದೊಡ್ಡ ಮಟ್ಟದಲ್ಲಿ ಸ್ಪರ್ಧೆ ಇದ್ದು, ಸದ್ಯ ಇದೊಂದು ಮಾದರಿಯಾಗಿದೆ. ಒಬ್ಬರು ಇಂದಿನ ಪಂದ್ಯದಲ್ಲಿ ಶತಕ ಗಳಿಸಿದರೆ ಇನ್ನೊಬ್ಬರು ಮುಂದಿನ ಪಂದ್ಯದಲ್ಲಿ ಅದೇ ಹಾದಿ ಹಿಡಿಯುತ್ತಾರೆ. ಇಬ್ಬರ ನಡುವೆ ಆರೋಗ್ಯಕರ ಸ್ಪರ್ಧೆಯಿದೆ ಮತ್ತು ಉಭಯ ಆಟಗಾರರು ಗಾಯಗೊಂಡ ಹುಲಿಗಳಂತೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇಂತಹ ಪಿಚ್‌ನಲ್ಲಿ ಇಂತಹ ದಾಳಿಯ ವಿರುದ್ಧ ರೋಹಿತ್ ಶತಕ ಸಿಡಿಸಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಅವರು ಅಕ್ರೋಶದಿಂದ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದು ಸದಾಗೋಪನ್ ರಮೇಶ್ ಹೇಳಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿ ಕ್ರಿಕೆಟ್ ಜಗತ್ತಿನಲ್ಲಿ ಹೊಸ ದಾಖಲೆಗಳನ್ನು ಬರೆದಿದ್ದಾರೆ. ಕೇವಲ 72 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಇನ್ನಿಂಗ್ಸ್‌ನಲ್ಲಿ 10 ಆಕರ್ಷಕ ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್‌ಗಳಿದ್ದವು. ಈ ಅಮೋಘ ಶತಕದೊಂದಿಗೆ ಅವರು ಏಕದಿನ ಕ್ರಿಕೆಟ್‌ನಲ್ಲಿ 12,000 ರನ್‌ಗಳ ಗಡಿಯನ್ನು ಯಶಸ್ವಿಯಾಗಿ ದಾಟಿದರು. ಈ ಮೈಲಿಗಲ್ಲು ತಲುಪಿದ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ನಂತರದ ಭಾರತದ ಮೂರನೇ ಬ್ಯಾಟರ್ ಎನಿಸಿಕೊಂಡರು(ಏಜೆನ್ಸೀಸ್).