25 ಕೋಟಿ ಕೊಟ್ಟು ಖರೀದಿಸಿದ ಆಟಗಾರನಿಂದ ಬೌಲಿಂಗ್ ಮಾಡಿಸಲಿಲ್ಲ ಏಕೆ? ರಹಾನೆ ಕೊಟ್ಟ ಉತ್ತರ ವೈರಲ್... Cameron Green
- ನಿನ್ನೆ ಮುಂಬೈ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 19ನೇ ಐಪಿಎಲ್ ಆವೃತ್ತಿಯ ಎರಡನೇ ಪಂದ್ಯ
- ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಭರ್ಜರಿ ಜಯ ದಾಖಲಿಸಿದ ಮುಂಬೈ ಇಂಡಿಯನ್ಸ್
- ತಮ್ಮ ತಂಡ ಸೋಲಿಗೆ ಕಳಪೆ ಬೌಲಿಂಗ್ ಕಾರಣ ಎಂದ ಕೆಕೆಆರ್ ನಾಯಕ ಅಂಜಿಕ್ಯ ರಹಾನೆ
Cameron Green : ನಿನ್ನೆ (ಮಾರ್ಚ್ 29) ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ನಮ್ಮ ಕಳಪೆ ಬೌಲಿಂಗ್ನಿಂದಾಗಿ ನಾವು ಸೋಲುಂಡೆವು ಎಂದು ಕೋಲ್ಕತ್ತ ನೈಟ್ ರೈಡರ್ಸ್ ( KKR ) ತಂಡದ ನಾಯಕ ಅಜಿಂಕ್ಯ ರಹಾನೆ ಹೇಳಿದರು. ನಮ್ಮ ಬೌಲರ್‌ಗಳು ಅನುಭವ ಹೊಂದಿಲ್ಲ, ಅವರಿನ್ನೂ ಕಲಿಕೆಯ ಹಂತದಲ್ಲಿದ್ದಾರೆ. ಅದಕ್ಕಾಗಿಯೇ ನಮ್ಮಿಂದ 221 ರನ್‌ಗಳ ಬೃಹತ್ ಗುರಿಯನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ರಹಾನೆ ತಿಳಿಸಿದರು.
ನಿನ್ನೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 220 ರನ್ ಗಳಿಸಿತು. ತಂಡದ ಪರ ನಾಯಕ ರಹಾನೆ (40 ಎಸೆತಗಳಲ್ಲಿ 67 ರನ್) ಮತ್ತು ಅಂಗ್‌ಕ್ರಿಶ್ ರಘುವಂಶಿ (29 ಎಸೆತಗಳಲ್ಲಿ 51 ರನ್) ಅರ್ಧಶತಕ ಗಳಿಸಿ ಮಿಂಚಿದರು. ಮುಂಬೈ ಬೌಲರ್‌ಗಳಲ್ಲಿ ಶಾರ್ದೂಲ್ ಠಾಕೂರ್ ಮೂರು ವಿಕೆಟ್ ಮತ್ತು ಹಾರ್ದಿಕ್ ಪಾಂಡ್ಯ ಒಂದು ವಿಕೆಟ್ ಪಡೆದರು.
ಇದಾದ ಬಳಿಕ ಕೆಕೆಆರ್ ನೀಡಿದ ಬೃಹತ್ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡ 19.1 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ ಗುರಿ ತಲುಪಿತು. ಮುಂಬೈ ಪರ ರಿಯಾನ್ ರಿಕಲ್ಟನ್ (43 ಎಸೆತಗಳಲ್ಲಿ 81 ರನ್) ಮತ್ತು ರೋಹಿತ್ ಶರ್ಮಾ (38 ಎಸೆತಗಳಲ್ಲಿ 78 ರನ್) ಅರ್ಧಶತಕ ಗಳಿಸಿದರು. ಕೆಕೆಆರ್ ಪರ ವೈಭವ್ ಅರೋರಾ, ಕಾರ್ತಿಕ್ ತ್ಯಾಗಿ ಮತ್ತು ಸುನಿಲ್ ನರೈನ್ ತಲಾ ಒಂದು ವಿಕೆಟ್ ಪಡೆದರು.
ಬೌಲಿಂಗ್ ವಿಭಾಗದಲ್ಲಿ ಅನುಭವದ ಕೊರತೆ
ಪಂದ್ಯದ ನಂತರ ಮಾತನಾಡಿದ ನಾಯಕ ಅಜಿಂಕ್ಯ ರಹಾನೆ, ಆರಂಭದಲ್ಲಿ ತಮ್ಮ ಗಾಯದ ಬಗ್ಗೆ ಮಾತನಾಡಿದರು. ನನ್ನ ಕಾಲುಗಳು ನೋಯುತ್ತಿವೆ ಆದರೆ, ಈಗ ಎಲ್ಲವೂ ಸರಿಯಾಗಿದೆ ಎಂದು ಹೇಳಿದರು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ತುಂಬಾ ಕಷ್ಟಕರವೆನಿಸಿತು ಎಂದರು. ಅಂದಹಾಗೆ, ಈ ಪಿಚ್‌ನಲ್ಲಿ 220 ರಿಂದ 225 ರನ್‌ಗಳು ಉತ್ತಮ ಸ್ಕೋರ್ ಆಗಿದೆ. ನಮ್ಮ ತಂಡದ ಬ್ಯಾಟ್ಸ್‌ಮನ್‌ಗಳು ಉತ್ತಮವಾಗಿ ಆಡಿದರು. ಆದಾಗ್ಯೂ, ನಮ್ಮ ಬೌಲಿಂಗ್ ವಿಭಾಗದಲ್ಲಿ ಅನುಭವದ ಕೊರತೆಯಿದೆ. ನಮ್ಮ ಹುಡುಗರು ಇನ್ನೂ ಕಲಿಯುತ್ತಿದ್ದಾರೆ ಎಂದು ರಹಾನೆ ಹೇಳಿದರು.
ಕಲಿಯುವುದು ಬಹಳಷ್ಟಿದೆ
ಮುಂಬೈ ಇಂಡಿಯನ್ಸ್ ತಂಡ ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಹೊಂದಿದ್ದು, ಅವರ ವಿರುದ್ಧ ಇಂತಹ ಬೌಲಿಂಗ್ ಲೈನ್ ಅಪ್ ಜೊತೆ ಆಡುವುದು ಒಂದು ದೊಡ್ಡ ಪಾಠವಾಗಿದೆ. ವೈಭವ್ ಅರೋರಾ ಅವರನ್ನು ಹೊರತುಪಡಿಸಿ, ಕಾರ್ತಿಕ್ ಮತ್ತು ಮುಜರಬಾನಿಗೆ ಐಪಿಎಲ್ನಲ್ಲಿ ಆಡಿದ ಅನುಭವವಿಲ್ಲ. ಇಬ್ಬರು ಅನುಭವಿ ಸ್ಪಿನ್ನರ್‌ಗಳಿದ್ದರೂ, ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್‌ಗಳು ತುಂಬಾ ಚೆನ್ನಾಗಿ ಆಡಿದರು. ಈ ಪಂದ್ಯದಿಂದ ಅವರ ಬೌಲರ್‌ಗಳು ಕಲಿಯುವುದು ಬಹಳಷ್ಟಿದೆ ಎಂದು ಅವರು ಹೇಳಿದರು.
ಕ್ರಿಕೆಟ್ ಆಸ್ಟ್ರೇಲಿಯಾವನ್ನು ಕೇಳಿ
ತಮ್ಮ ಬ್ಯಾಟಿಂಗ್ ಬಗ್ಗೆ ಮಾತನಾಡಿದ ರಹಾನೆ, ನನಗಿನ್ನೂ 37 ವರ್ಷ ವಯಸ್ಸು. ನಾನಿನ್ನೂ ಯುವಕ. ಆದರೆ, ಸ್ನಾಯುಗಳನ್ನು ಬಿಗಿಗೊಳಿಸುವುದು ಸ್ವಲ್ಪ ಕಷ್ಟ ಎಂದರು. ನಮ್ಮ ತಂಡ ಬೌಲಿಂಗ್‌ನಲ್ಲಿ ಸಮತೋಲನ ಕಂಡುಕೊಳ್ಳುವುದು ಬಹಳ ಮುಖ್ಯ. ಕ್ಯಾಮರನ್ ಗ್ರೀನ್ ಶೀಘ್ರದಲ್ಲೇ ಬೌಲಿಂಗ್ ಮಾಡಲು ಆರಂಭಿಸಿದರೆ ತಂಡದ ಸಂಯೋಜನೆ ಉತ್ತಮಗೊಳ್ಳಲಿದೆ ಎಂದರು. ಗ್ರೀನ್ ಏಕೆ ಬೌಲಿಂಗ್ ಮಾಡಲಿಲ್ಲ ಎಂದು ಕೇಳಿದಾಗ, ನೀವದನ್ನು ಕ್ರಿಕೆಟ್ ಆಸ್ಟ್ರೇಲಿಯಾವನ್ನೇ ಕೇಳಬೇಕು ಎಂದರು. ಈ ಮೂಲಕ ಹಿಂದಿನ ಬೆನ್ನುನೋವಿನ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಕ್ಯಾಮರನ್ ಗ್ರೀನ್ ಅವರಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಇನ್ನೂ ಸಂಪೂರ್ಣವಾಗಿ ಬೌಲಿಂಗ್ ಮಾಡಲು ಅನುಮತಿ ನೀಡಿಲ್ಲ ಎಂಬುದನ್ನು ರಹಾನೆ ಖಚಿತಪಡಿಸಿದ್ದಾರೆ. ಗ್ರೀನ್ ಚೇತರಿಕೆಯ ಹಂತದಲ್ಲಿದ್ದರೂ, ಅವರು ಪೂರ್ಣ ಪ್ರಮಾಣದಲ್ಲಿ ಬೌಲಿಂಗ್ ಮಾಡಲು ವೈದ್ಯಕೀಯ ಮಂಡಳಿಯ ಹಸಿರು ನಿಶಾನೆಗಾಗಿ ಕಾಯಬೇಕಿದೆ ಎಂಬುದು ಇದರ ಅರ್ಥವಾಗಿದೆ. ಇನ್ನು ಕಾರ್ತಿಕ್ ತ್ಯಾಗಿ ಅವರ ಬೌಲಿಂಗ್ ಹಾಗೂ ತಂಡದ ಬ್ಯಾಟಿಂಗ್ ಅನ್ನು ಪಾಸಿಟಿವ್ ಅಂಶಗಳೆಂದು ಗುರುತಿಸಿದ ರಹಾನೆ, ಟೂರ್ನಿಯಲ್ಲಿ ಇನ್ನೂ ಸಾಕಷ್ಟು ಪಂದ್ಯಗಳಿದ್ದು ಸುಧಾರಣೆಗೆ ಅವಕಾಶವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ, (ಏಜೆನ್ಸೀಸ್).